ರೈತರ ಹೆಸರಲ್ಲಿ ಪದಗ್ರಹಣ ಮಾಡಿ ರೈತರ ಬಾಯಿಗೆ ಮಣ್ಣು ಹಾಕಬೇಡಿ: ಹೊರಟ್ಟಿ

ಬೆಂಗಳೂರು, ಜೂ 13,ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ತಾವು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಈಗ ರೈತರ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದೀರಿ ಎಂದು ಮಾಜಿ ಸಭಾಪತಿ, ಜೆಡಿಎಸ್ ನ ವಿಧಾನಪರಿಷತ್ ಸದಸ್ಯೆ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಈ ಕುರಿತು ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಸರ್ಕಾರದ ಕ್ರಮಗಳಿಂದ ಬರುವ ದಿನಗಳಲ್ಲಿ ಅತಿ ಹೆಚ್ಚು ದುರಂತಗಳು ಸಂಭವಿಸಲಿದೆ. ಅನೇಕ ರೈತರು ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇನ್ನು ಮುಂದೆ ರೈತರು ತಮ್ಮಲ್ಲಿರುವ ಸಲ್ಪ ಸ್ವಲ್ಪ  ಜಮೀನನ್ನು ಹಣದ ಆಮೀಷಕ್ಕೆ ಬಲಿಯಾಗಿ ಮಾರಾಟ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಕಳವಳ ತೋಡಿಕೊಂಡಿದ್ದಾರೆ. 

ದಯಮಾಡಿ ರೈತರ ಮುಖವನ್ನು ಮತ್ತು ಅವನ ಕುಟುಂಬದ ನಿಜವಾದ ಪರಿಸ್ಥಿತಿಯನ್ನು ಒಮ್ಮೆ ಒಳಗಣ್ಣು ತೆರೆದು ನೋಡಿ, ಸರಕಾರದಲ್ಲಿರುವ ನಿಮ್ಮ ಕೆಲವು ಸಚಿವರು ರೈತರಿಗಾಗುತ್ತಿರುವ ಕಿರುಕುಳ ತಪ್ಪಿಸಲೆಂದೆ ತಿದ್ದುಪಡಿ ತಂದಿರುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.  ಐ.ಟಿ. ಬಿ.ಟಿ. ಯವರು ಕೃಷಿ ಕ್ಷೇತ್ರ ಪ್ರವೇಶಿಸುತ್ತಾರೆ ಎಂದು ಕೃಷಿಕರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಕೃಷಿ ಕಂಪ್ಯೂಟರ್ ನಲ್ಲಿ ಕೆಲಸ ಮಾಡಿದಂತಲ್ಲ. ಅಂತಹವರು ಕೃಷಿ ಮಾಡುವದು ಪುಸ್ತಕ ಓದಿ ಅಡುಗೆ ಮಾಡಿದಂತೆ.ಎಂದು ವ್ಯಂಗ್ಯವಾಡಿದ್ದಾರೆ. 

ನಿಮ್ಮಂಥವರು ಮುಖ್ಯ ಮಂತ್ರಿಯಾಗಿರುವ ಸಂದರ್ಭದಲ್ಲಿ ಇಂತಹ ಕರಾಳ ಶಾಸನವನ್ನು ತರುವದು ಅವಿವೇಕದ ಪರಮಾವಧಿ. ಕೇಂದ್ರ ಸರಕಾರ ಮತ್ತು ನೀವು ಉದ್ದಿಮೆದಾರರ ಕೈಗೊಂಬೆಯಾಗಿ ವರ್ತಿಸುತ್ತೀರಿ ಎಂಬ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗುತ್ತದೆ.  ಆದ್ದರಿಂದ ತಕ್ಷಣ ಇದನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತೇನೆ.  ಅಧಿವೇಶನ ನಡೆಯುವ ತನಕ ಈ ಕುರಿತಂತೆ ಸುಗ್ರೀವಾಜ್ಞೆಯನ್ನೂ ಸಹ ಹೊರಡಿಸಬಾರದು ಎಂದು ಆಗ್ರಹಿಸಿದ್ದಾರೆ. 

ರೈತರಲ್ಲದವರು ಒಕ್ಕಲುತನದ ಗಂಧ ಗಾಳಿ ಗೊತ್ತಿಲ್ಲದವರು ನಾಡಿನ ಜನರಿಗೆ ಯಾವ ರೀತಿಯಿಂದ ಅನ್ನವನ್ನು ಕೊಡಬಹುದು.  ಅನ್ನ ಕೊಡುವ ರೈತನ ಬಾಯಲ್ಲಿ ಮಣ್ಣು ಹಾಕಿ ಇಂತಹ ಕೆಟ್ಟ ಕಾನೂನುಗಳನ್ನು ತರುವುದು ಸೂಕ್ತವಲ್ಲ.  ಉಳಿಮೆಗಾಗಿ ಗೇಣಿದಾರನಿಗೆ ನೀಡಿರುವ ಜಮೀನಿಗೆ ಅನ್ವಯವಾಗುವ ಹಲವಾರು ಕಾನೂನುಗಳನ್ನು ಒಂದುಗೂಡಿಸಿ ಭೂ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು.  ಅದರಲ್ಲಿ ಸ್ವತಃ ಯಾರು ದುಡಿಮೆ ಮಾಡುತ್ತಾರೋ ಅವರಿಗೆ ರಕ್ಷಣೆ ಕೊಡುವಂತಹ ಅಂಶಗಳು ಕಾನೂನಿನಲ್ಲಿತ್ತು. ಉಳಿಮೆ ಮಾಡದೇ ಕೇವಲ ಕಂದಾಯ ದಾಖಲೆಗಳಲ್ಲಿ ಜಮೀನು ಇದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಂಡು ಉಳಿಮೆ ಮಾಡುವವರಿಗೆ ಆ ಜಮೀನನ್ನು ಮಂಜೂರು ಮಾಡಲಾಗುತ್ತಿತ್ತು.ಇದೊಂದು ಅಪಾಯಕಾರಿ ತಿದ್ದುಪಡಿಯಾಗಿದ್ದು, ಮುಂದೆ ಭೂರಹಿತ ಕಾರ್ಮಿಕರನ್ನು ನಾವೇ ನಿರ್ಮಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ತಿದ್ದುಪಡಿ ಕಾಯ್ದೆ ಜಾರಿಯಾದರೆ ಜನರು ಅನ್ನದ ಬದಲು ಮಣ್ಣು ತಿನ್ನಬೇಕಾಗುತ್ತದೆ.  ಇದರಿಂದ ಎಲ್ಲಿ ಬೇಕಾದಲ್ಲಿ ರಿಸಾರ್ಟ್‌ಗಳು ಹಾಗೂ ತಾರಾ ಹೋಟೆಲ್ಗಳ ಸಂಸ್ಕೃತಿ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.