ಕೋವಿಡ್ 19 ಸೋಂಕು ಭೀತಿ ನಡುವೆ ಸರ್ಕಾರಿ ಅಭಿಯೋಗ ಇಲಾಖೆ ಪೂರ್ವಭಾವಿ ಪರೀಕ್ಷೆ: ಹೆಚ್ಚಿದ ಆತಂಕ

ಬೆಂಗಳೂರು, ಜೂ 6,ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿರುವ ಸಂದರ್ಭದಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರಿ ಅಭಿಯೋಗ ಇಲಾಖೆಯ ಪೂರ್ವಭಾವಿ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷಾರ್ಥಿಗಳಲ್ಲಿ ತೀವ್ರ ಕಳವಳ ಉಂಟಾಗಿದೆ. ಎಲ್ಲಾ ವಿಶ್ವವಿದ್ಯಾಲಯಗಳು, ಸರ್ಕಾರಿ ಇಲಾಖೆಗಳು ಪರೀಕ್ಷೆ ಮುಂದೂಡಿರುವ ಸಂದರ್ಭದಲ್ಲಿ ಸರ್ಕಾರಿ ಅಭಿಯೋಗ ಮತ್ತು ವ್ಯಾಜ್ಯಗಳ ನೇಮಕಾತಿ ಕುರಿತ ಪ್ರಾಥಮಿಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಈ ತಿಂಗಳ 21 ರಂದು ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಪರೀಕ್ಷೆ ಸಂದರ್ಭದಲ್ಲಿ ಸೋಂಕು ತಗುಲಿ ಅನಾಹುತ ಉಂಟಾದರೆ ಯಾರು ಜವಾಬ್ದಾರಿ ಎನ್ನುವ ಆತಂಕ ವ್ಯಕ್ತವಾಗಿದೆ. 

ಜೂನ್ 21 ರ ಭಾನುವಾರ ಬೆಳಗ್ಗೆ 10 ರಿಂದ 1 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಮುಂದೂಡುವಂತೆ ಪರೀಕ್ಷಾರ್ಥಿಗಳಿಂದ ಒತ್ತಡ ಬಂದಿದೆ. ಮಹಿಳೆಯರು, ಗರ್ಭೀಣಿಯರು ಸಹ ಪರೀಕ್ಷೆ ಬರೆಯುತ್ತಿದ್ದು, ಇವರೆಲ್ಲರಿಗೂ ಸೋಂಕಿನ ಭೀತಿ ವ್ಯಕ್ತವಾಗಿದೆ. 

ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಈ ಎಲ್ಲಾ ಕಡೆಗಳಲ್ಲಿ ಕೊರೋನಾ ಸೋಂಕು ತೀವ್ರ ಪ್ರಮಾಣದಲ್ಲಿದೆ. ಗ್ರಾಮೀಣ ಭಾಗದಿಂದಲೂ ಸಹ ಸಾಕಷ್ಟು ಮಂದಿ ಪರೀಕ್ಷೆ ಬರೆಯಲು ಬರಬೇಕಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾರಿಗೆ ಬಸ್ ಗಳ ಸಂಚಾರ ಪುನರಾರಂಭವಾಗಿಲ್ಲ. ಬಸ್ ಗಳಲ್ಲೂ ಸಹ ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದರಿಂದ ಬಹುತೇಕ ನಿಲ್ದಾಣಗಳಲ್ಲಿ ಬಸ್ ಗಳನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ತೀವ್ರ ಸಮಸ್ಯೆ ತಲೆದೋರಿದೆ ಎನ್ನುವ ಆತಂಕ ಪರೀಕ್ಷಾರ್ಥಿಗಳದ್ದಾಗಿದೆ. 

ಕೊರೋನಾ ಸೋಂಕು ಭೀತಿಯಿಂದಾಗಿ ಕೆ-ಸೆಟ್, ಐಎಎಸ್ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. ಕನಿಷ್ಠ ಒಂದೆರಡು ತಿಂಗಳ ಕಾಲ ಪರೀಕ್ಷೆ ಮುಂದೂಡುವಂತೆ ಪರೀಕ್ಷಾರ್ಥಿಗಳು ಒತ್ತಾಯಿಸಿದ್ದಾರೆ. ಈ ಮಧ್ಯೆ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್. ಗಂಗಾಧರಯ್ಯ ಅವರು ಪರೀಕ್ಷೆ ಮುಂದೂಡುವಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಕಚೇರಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.ರಾಜ್ಯ ಹೈಕೋರ್ಟ್ ಮತ್ತು ಉಳಿದ ನ್ಯಾಯಾಲಯಗಳ ಕಲಾಪಗಳು ಕೋವಿಡ್ 19 ನಿಂದಾಗಿ ಬಹುತೇಕ ಸ್ಥಗಿತಗೊಂಡಿದೆ. ಅರ್ಜಿ ಸಲ್ಲಿಸಿರುವ ಕಿರಿಯ ವಕೀಲರು ಪೂರ್ವ ಭಾವಿ ಪರೀಕ್ಷೆಗೆ ಹಾಜರಾಗಲು ತೊಂದರೆ ಎದುರಾಗಿದ್ದು ಪರೀಕ್ಷೆ ಮುಂದೂಡುವಂತೆ ಕೋರಿದ್ದಾರೆ.