ಲೋಕದರ್ಶನವರದಿ
ಧಾರವಾಡ18 : ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಪ್ರದಾಯ, ಪರೆಂಪರೆಯನ್ನು ಮರೆಯುವುದು ಸರಿಯಲ್ಲ. ಯುವಕರು ಹಿಂದಿನ ಪದ್ದತಿಗಳನ್ನು ಅರಿತುಕೊಂಡು ಅವುಗಳನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಧಾರವಾಡದಲ್ಲಿ 7ನೇ ವರ್ಷದ ಹಲಗೆ ಬಾರಿಸುವ ಕಾರ್ಯಕ್ರಮಕ್ಕೆ ಹಲಗೆ ಬಾರಿಸುವ ಮೂಲಕವೇ ಚಾಲನೆ ನೀಡಿ ಮಾತನಾಡಿದ ಶಾಸಕ ಅಮೃತ ದೇಸಾಯಿ ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಶಂಕರ ಶೆಳಕೆ ಅವರ ನೇತೃತ್ವದಲ್ಲಿ ನಮ್ಮ ಹಿಂದು ಸಂಪ್ರದಾಯ, ಆಚಾರ ವಿಚಾರವನ್ನು ಯುವಕರಿಗೆ ಪರಿಚಯಿಸುವ ಕೆಲಸ ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅದಕ್ಕೆ ಸಾವಿರಾರು ಯುವಕರು ಹುರುಪು ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಿರುವುದೇ ಸಾಕ್ಷಿಯಾಗಿದೆ ಎಂದರು.
ಪೈಬರ್ ಹಲಗೆ ಅಬ್ಬರದ ನಡುವೆಯೂ ನೂರಾರು ಯುವಕರು ಅತ್ಯಂತ ಉತ್ಸಾಹದಿಂದ ಸಂಪ್ರದಾಯ ಬದ್ದವಾಗಿ ತಯಾರಿಸಿದ ಚರ್ಮದ ಹಲಗೆ ವಾದನವನ್ನು ಬಾರಿಸುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ. ವರ್ಷದಿಂದ ವರ್ಷಕ್ಕೆ ಚರ್ಮದ ಹಲಗೆ ಸಂಖ್ಯೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಅದರ ಶಬ್ದ, ನಾದ ಕೇಳಲು ಕೂಡ ಇಂಪಾಗಿರುತ್ತದೆ. ಹಳ್ಳಿಯ ಸೊಗಡನ್ನು ನಗರ ಬೆಳೆದಂತೆ ಮರೆ ಮಾಚದಂತೆ ನೋಡಿಕೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ ಎಂದು ಹೇಳಿದರು.
ನಗರದ ಕಾಮನಕಟ್ಟಿಯಲ್ಲಿರುವ ಪ್ಯಾಟಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಹಲಗೆ ವಾದನ ಕಾರ್ಯಕ್ರಮವೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸ್ಥಳೀಯರ ಗಮನ ಸೆಳೆಯಿತು.
ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ ಮುತಾಲಿಕ, ಮಹಾನಗರ ಪಾಲಿಕೆ ಸದಸ್ಯ ಶಂಕರ ಶೆಳಕೆ, ಬಿಜೆಪಿ ಮುಖಂಡರಾದ ರಾಕೇಶ್ ನಾಜರೆ, ಮಹೇಶ ಸುಲಾಖೆ, ಶಕ್ತಿ ಹಿರೇಮಠ, ಗಣೇಶ ಮುಧೋಳ, ಶ್ರೀನಿವಾಸ ಪಾಟೀಲ ಸೇರಿದಂತೆ ಸಾವಿರಾರು ಯುವಕರು ಹಲಗೆ ಬಾರಿಸಿ ಕುಣಿದು ಕುಪ್ಪಳ್ಳಿಸಿ ಸಂಭ್ರಮಿಸಿದರು. ಹಲಗೆ ಶಬ್ದವೂ ಮುಗಿಲು ಮುಟ್ಟಿತ್ತು. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ದರ ವರೆಗೆ ಸಾವಿರಾರು ಜನರು ಹಲಗೆ ವಾದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.