ಜೂಮ್ ಆಪ್ ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ...!

ನವದೆಹಲಿ,ಮೇ ೨೩,  ಚೀನಾದಲ್ಲಿ ಸರ್ವರ್ ಹೊಂದಿರುವ ವಿಡಿಯೋ  ಕಾನರೆನ್ಸಿಂಗ್ ಆಪ್ ’ಜೂಮ್’ ಬಳಕೆಯ ಮೇಲೆ   ದೇಶದಲ್ಲಿ   ನಿಷೇಧಿಸಬೇಕು    ಎಂದು  ಕೋರಿ  ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ  ಆರ್ಜಿಯನ್ನು  ಸುಪ್ರೀಂ ಕೋರ್ಟ್   ವಿಚಾರಣೆಗೆ  ಅಂಗೀಕರಿಸಿದೆ.  ಮುಖ್ಯ ನ್ಯಾಯಮೂರ್ತಿ ಎಸ್ ಎ.  ಬೋಬ್ಡೆ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ , ನ್ಯಾಯಮೂರ್ತಿ  ಹೃಷಿಕೇಶ್  ಅವರನ್ನೊಳಗೊಂಡ  ನ್ಯಾಯಪೀಠ ಈ ಸಂಬಂಧ  ನಾಲ್ಕು ವಾರಗಳಲ್ಲಿ   ಪ್ರತಿಕ್ರಿಯೆ   ಸಲ್ಲಿಸುವಂತೆ  ಕೇಂದ್ರ ಸರ್ಕಾರಕ್ಕೆ  ನೋಟೀಸ್ ನೀಡಿದೆ.ಮಹಿಳೆಯೊಬ್ಬರು  ಈ ಸಾರ್ವಜನಿಕ ಹಿತಾಸಕ್ತಿಯ ಆರ್ಜಿಯನ್ನು ಸಲ್ಲಿಸಿದ್ದು,  ಜೂಮ್   ಅಪ್  ನಲ್ಲಿ ಎಂಡ್ - ಟು-ಎಂಡ್ ಎನ್ಕ್ರಿಪ್ಶನ್ ( ಮೂರನೇ ವ್ಯಕ್ತಿಗೆ ಮಾಹಿತಿ ಲಭ್ಯವಾದಂತೆ ಖಾತರಿಪಡಿಸುವ ತಂತ್ರಜ್ಞಾನ) ಹೊಂದಿಲ್ಲ.   ಈ ಲೋಪಗಳಿಂದಾಗಿ  ಬಳಕೆದಾರರ   ಖಾಸಗಿ ವಿಷಯಗಳು ಬಹಿರಂಗಗೊಳ್ಳುವ ಅವಕಾಶವಿದೆ ಎಂದು ಆರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.ಮಾಹಿತಿ ಭದ್ರತೆಯ ವಿಷಯದಲ್ಲಿ ಜೂಮ್  ಸೂಕ್ತ ಸುರಕ್ಷಿತ ವಿಧಾನಗಳನ್ನು  ಅಳವಡಿಸುವಲ್ಲಿ  ಮತ್ತೆ ಮತ್ತೆ  ವಿಫಲಗೊಳ್ಳುತ್ತಿದೆ ಎಂಬ ಅಂಶವನ್ನು ಆರ್ಜಿದಾರರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದಾರೆ. ಖಾಸಗಿ ಮಾಹಿತಿಯ ಭದ್ರತೆಯ  ಪ್ರಶ್ನೆಗಳು ಎದುರಾಗಿದ್ದರೂ  ಕೇಂದ್ರ ಸರ್ಕಾರ ಈ ಅಪ್  ಅನ್ನು    ದೇಶದಲ್ಲಿ  ನಿಷೇಧಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ  ಎಂದು ದೂರಿದ್ದಾರೆ. ಅಮೆರಿಕಾ,ಆಸ್ಟ್ರೇಲಿಯಾದಂತಹ ದೇಶಗಳಲ್ಲಿ  ಹಲವು ಸರ್ಕಾರಿ ಸಂಸ್ಥೆಗಳು  ಈ ಅಪ್ ಅನ್ನು ನಿಷೇಧಿಸಿರುವ  ಅಂಶವನ್ನು  ಆರ್ಜಿಯಲ್ಲಿ    ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಪೀಠ  ಕೇಂದ್ರ  ಸರ್ಕಾರಕ್ಕೆ ನೋಟೀಸ್  ಜಾರಿ ಮಾಡಿದೆ.