ಇತಿಹಾಸ ಮತ್ತು ಸಾಹಿತ್ಯದಲ್ಲಿ ಅಲಕ್ಷಿತವಾಗಿರುವ ಮಹಿಳಾ ಸಾಧಕಿಯರನ್ನು ಗುರುತಿಸುವುದು ಇಂದಿನ ಅಗತ್ಯ-ದು.ಸರಸ್ವತಿ
Recognizing women achievers who have been overlooked in history and literature is the need of the ho
ಲೋಕದರ್ಶನ ವರದಿ
ಧಾರವಾಡ 15 : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಹಾಗೂ ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಇವುಗಳ ಸಂಯುಕ್ತ ಆಶ್ರಯದಲ್ಲಿ “ಸಾಧಕಿ” ಮಹಿಳಾ ಚಿಂತನಾ ಸಮಾವೇಶವನ್ನು ಕನಕ ಸಭಾಭವನ ಕ.ವಿ.ವಿ ಧಾರವಾಡದಲ್ಲಿ ದಿನಾಂಕ: 14ನೇ ಮಾರ್ಚ 2026ರಂದು ಎರಡನೇ ದಿನ ವಿವಿಧ ವಿಚಾರಗೋಷ್ಠಿಗಳು ಮತ್ತು ಸಮಾರೋಪ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.
ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಸಾಧಕಿ ಸಮಾವೇಶದ ಸಾಧಕಿ ಸಮಾವೇಶದ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ತತ್ವಪದಕಾರ್ತಿಯರ ಕುರಿತು ಮಾತನಾಡಿದ ಕೆ. ನೀಲಾ ಅವರು, ತತ್ವಪದಕಾರ್ತಿಯರನ್ನು ಓದುವ ಹಾಗೂ ಅರ್ಥೈಸುವ ಅಭ್ಯಾಸವನ್ನು ಇಂದಿನ ಯುವಜನತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಮಹಿಳೆಯರು ಸಂಪ್ರದಾಯದ ಕಟ್ಟಳೆಗಳನ್ನು ಮೀರಿ ಸೃಜನಶೀಲ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
“ತತ್ವಪದಕಾರ್ತಿಯರಲ್ಲಿ ಸ್ತ್ರೀ-ಪುರುಷ ಪರಿಕಲ್ಪನೆ” ಎಂಬ ವಿಷಯದ ಕುರಿತು ಡಾ. ಎನ್.ಆರ್. ಲಲಿತಾಂಬ ಅವರು ವಿಚಾರ ಮಂಡಿಸಿ, ತತ್ವಪದಗಳಲ್ಲಿ ವ್ಯಕ್ತವಾಗಿರುವ ಸ್ತ್ರೀ-ಪುರುಷ ಸಮಾನತೆ ಹಾಗೂ ಆಧ್ಯಾತ್ಮಿಕ ದರ್ಶನದ ಅಂಶಗಳನ್ನು ವಿಶ್ಲೇಷಿಸಿದರು. “ಸೂಫಿ ಪಂಥ: ಮಹಿಳೆಯರು” ಎಂಬ ವಿಷಯದ ಕುರಿತು ಡಾ. ಪರ್ವಿನ್ ಸುಲ್ತಾನಾ ಅವರು ಮಾತನಾಡಿ, ಸೂಫಿ ಪರಂಪರೆಯಲ್ಲಿ ಮಹಿಳೆಯರ ಪಾತ್ರ, ಅವರ ಆಧ್ಯಾತ್ಮಿಕ ಅನುಭವಗಳು ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ವಿವರಿಸಿದರು.
ಎರಡು ದಿನಗಳ ಕಾಲ ನಡೆದ ಈ ಸಾಧಕಿ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಚಿಂತಕಿಯರು, ಸಂಶೋಧಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿ ಮಧ್ಯಕಾಲೀನ ಮಹಿಳಾ ಸಾಧಕಿಯರ ಸಾಹಿತ್ಯ, ಚಿಂತನೆ ಮತ್ತು ಸಾಮಾಜಿಕ ಸಂದೇಶಗಳ ಕುರಿತು ಸಮಗ್ರವಾಗಿ ಚರ್ಚಿಸಿದರು. ಮಹಿಳಾ ಸಾಧಕಿಯರ ಸಾಹಿತ್ಯ ಪರಂಪರೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವಲ್ಲಿ ಈ ಸಮಾವೇಶ ಮಹತ್ವದ ವೇದಿಕೆಯಾಗಿ ಪರಿಣಮಿಸಿತು.
ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಾ. ದು. ಸರಸ್ವತಿ ಅವರು, ಇತಿಹಾಸ ಮತ್ತು ಸಾಹಿತ್ಯದಲ್ಲಿ ಅಲಕ್ಷಿತವಾಗಿರುವ ಮಹಿಳಾ ಪಾತ್ರಗಳನ್ನು ಗುರುತಿಸುವುದು ಮತ್ತು ಅವುಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ಮಹಿಳಾ ಸಂವೇದನೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಾಹಿತ್ಯ ಪರಂಪರೆಗಳು ಸಮಾಜಕ್ಕೆ ದಾರೀದೀಪವಾಗಬಲ್ಲವು ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಅವರು ಜಾನಪದ ಸಾಹಿತ್ಯದಲ್ಲಿ ಮಹಿಳೆಯ ಪಾತ್ರದ ಮಹತ್ವವನ್ನು ಕುರಿತು ಮಾತನಾಡಿದರು. ಜಾನಪದ ಸಂಸ್ಕೃತಿಯಲ್ಲಿ ಮಹಿಳೆ ತಾಯ್ತನದ ಪ್ರತೀಕವಾಗಿದ್ದು, ಕುಟುಂಬ ಮತ್ತು ಸಮಾಜದ ಮೌಲ್ಯಗಳನ್ನು ಉಳಿಸುವ ಪ್ರಮುಖ ಶಕ್ತಿಯಾಗಿದೆ ಎಂದು ಅವರು ಹೇಳಿದರು.
ಗೌರವ ಉಪಸ್ಥಿತರಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಚಂದ್ರಮ್ಮ ಎಂ. ಅವರು ಇಂದಿನ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು, ದೌರ್ಜನ್ಯಗಳು ಮತ್ತು ಸಾಮಾಜಿಕ ಅಸಮಾನತೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮಹಿಳೆಯರ ಶಿಕ್ಷಣ, ಜಾಗೃತಿ ಹಾಗೂ ಸಂಶೋಧನಾ ಚಟುವಟಿಕೆಗಳು ಹೆಚ್ಚಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪನೆ ಸಾಧ್ಯವೆಂದು ಅವರು ಹೇಳಿದರು. ಕಾರ್ಯಕ್ರಮವನ್ನು ಸುಮಾ ಸತೀಶ ಅವರು ನಿರೂಪಿಸಿದರು. ಪ್ರೊ. ಹನಮಗೌಡ ಸಿ. ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸಿ.ಡಿ. ದೊಡಮನಿ, ಡಾ. ದಾವಲಸಾಬ ನರಗುಂದ, ಎನ್.ಡಿ. ಲಕ್ಕಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 