ಅಪರಾಧಮುಕ್ತ ಅವಳಿನಗರ ಮಾಡಲು ಯುವ ಸಮೂಹ ಕೈ ಜೋಡಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

Youth join hands to make twin cities crime-free: DC Divya Prabhu

ಹುಬ್ಬಳ್ಳಿ 09: ಮಾದಕವಸ್ತುಗಳ ಮತ್ತು ಸಂಚಾರ ನಿಯಮಗಳ ಬಗ್ಗೆ ನಿರಂತರವಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಜನಜಾಗೃತಿ ಮೂಡಿಸಲಾಗುತ್ತಿದೆ. ಅವಳಿನಗರ ಅಪರಾಧ ಮುಕ್ತವಾಗಿ ಮಾಡಲು ಪೊಲೀಸ ಮತ್ತು ಜಿಲ್ಲಾಡಳಿತದೊಂದಿಗೆ ಯುವಸಮೂಹ ಕೈ ಜೋಡಿಸಬೇಕು ಮತ್ತು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. 

ಅವರು ಇಂದು ಬೆಳಿಗ್ಗೆ ಮಹಾನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ  ಡ್ರಗ್ಸ್‌, ಅಪರಾಧ ಮುಕ್ತ ನಗರವಾಗಿ ಮಹಾನಗರ ಸೇರಿದಂತೆ ಧಾರವಾಡ ಜಿಲ್ಲೆ ರೂಪಿಸಲು ಹಮ್ಮಿಕೊಂಡಿದ್ದ ಪೊಲೀಸ್ ಹಾಗೂ ನಾಗರಿಕರಿಂದ ಕೂಡಿದ್ದ ಪೊಲೀಸ್ ರನ್‌- 2025 ಮ್ಯಾರಾಥನ್  ಚಾಲನಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

ಬರೀ ದಿನಾಚರಣೆಗಳಿಂದ ನಮ್ಮ ಉದ್ದೇಶ ಸಫಲವಾಗುವದಿಲ್ಲ. ಅದನ್ನು ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಅನುಷ್ಠಾನಕ್ಕೆ ತಂದಾಗ ಸಾರ್ಥಕವಾಗುತ್ತದೆ. ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಪೊಲೀಸ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅಪರಾಧಗಳ ಸಂಖ್ಯೆ ಇಳಿಮುಖವಾಗಿದೆ ಎಂದರು. 

ಇಲಾಖೆಗಳು ಹೆಚ್ಚು ಜನಪರ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಮತ್ತು ಸಕ್ರಿಯವಾಗಿ ಪಾಲ್ಗೋಳ್ಳುವಿಕೆ ಮುಖ್ಯವಾಗಿದೆ. ಡ್ರಗ್ಸ್‌ ನಿಯಂಯ್ರಣಕ್ಕೆ ಹಾಗೂ ರಸ್ತೆ ಅಪಘಾತಗಳನ್ನು ತಪ್ಪಿಸಿ ಸಂಚಾರ ನಿಯಮಗಳನ್ನು ಉತ್ತಮವಾಗಿ ನಿರ್ವಹಿಸಲು ಯುವಕ, ಯುವತಿಯರ ಸಹಕಾರ ಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ, ಸಕ್ರಿಯವಾಗಿ ಭಾಗವಹಿಸಬೇಕು. ಪೊಲೀಸ್ ರನ್‌-2025 ಗೆ ಯುವ ಸಮೂಹದಿಂದ ಉತ್ತಮ ಸ್ಪಂದನೆ ಮೂಡಿದೆ ಎಂದು ಅವರು ತಿಳಿಸಿದರು. 

ಅವಳಿನಗರ ಸೇರಿದಂತೆ ಧಾರವಾಡ ಜಿಲ್ಲೆಯನ್ನು ಸದೃಡಗೊಳಿಸಲು ಎಲ್ಲರೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಧಾರವಾಡ ಜಿಲ್ಲೆ ಹಾಗೂ ಆಯುಕ್ತಾಳಯದ ಎಲ್ಲ ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಇದರಿಂದಾಗಿ ಇದು ನಮ್ಮ ಪೊಲೀಸ್ ನಮ್ಮ ಹೆಮ್ಮೆ ಆಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. 

ಮಹಾನಗರ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ ಮಾತನಾಡಿ, ಅವಳಿನಗರವನ್ನು ಶಾಂತಿ ಮತ್ತು ಸುಂದರ, ಅಪರಾಧ ಮುಕ್ತ ಮಾಡುವಲ್ಲಿ ಪೊಲೀಸ್ ಇಲಾಖೆ ಹತ್ತಾರು ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸಿ, ಸಾರ್ವಜನಿಕರ ಭಾಗವಹಿಸುವಿಕೆ ಹೆಚ್ವಿಸುತ್ತಿದೆ. ಪ್ರತಿಯೊಬ್ಬರಿಗೂ ದೈಹಿಕ ಮತ್ತು ಮಾನಸಿಕ ಪಿಟ್ ನೇಸ್ ಬೇಕು. ಅದನ್ನು ಸಾಧಿಸುವದರಿಂದ ಉತ್ತಮ ವಾತಾವರಣ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಪೊಲೀಸ್ ರನ್‌-2025 ಕಾರ್ಯಕ್ರಮದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಯುವಕ, ಯುವತಿಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಾರ್ವಜನಿಕ ಸಂಘ, ಸಂಘಟನೆಗಳು ಮತ್ತು ಸಮಾಜದ ಗಣ್ಯರು ಭಾಗವಹಿಸಿದ್ದಾರೆ. ತಮ್ಮೆಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆ ನಮಗೆ ಸಂತೋಷ ಮತ್ತು ಹೆಮ್ಮೆ ತಂದಿದೆ. ಎಲ್ಲರ ಸಹಕಾರದಲ್ಲಿ ಅವಳಿನಗರವನ್ನು ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯದ ಊರಾಗಿ ಕಾಪಾಡಿಕೊಳ್ಳೋಣ ಎಂದು ಅವರು ಹೇಳಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಜಿಲ್ಲೆಯನ್ನು ಡ್ರಗ್ಸ್‌ ಪ್ರೀ ಮಾಡಲು ತಮ್ಮೆಲ್ಲರ ಸಹಕಾರಬೇಕು. ಡ್ರಗ್ಸ್‌ ದಿಂದ ವಾಹನ ಅಪಘಾತ, ಕಳ್ಳತನ, ಹಲ್ಲೆ, ಕೊಲೆ ಅಂತಹ ಪ್ರಕರಣಗಳು ನಡೆಯುತ್ತವೆ. ಈ ಅಪರಾಧಗಳು ಒಂದಕ್ಕೊಂದು ಆಂತರಿಕ ಸಂಪರ್ಕಹೊಂದಿವೆ ಎಂದರು. 

ಅವಳಿನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತದಲ್ಲಿ ಸುಮಾರು 500 ಜನರ ಜೀವ ಹಾನಿ ಆಗುತ್ತಿದೆ. ಇದು ದೇಶದಲ್ಲಿ 1.50 ಲಕ್ಷದಷ್ಟಿದೆ. ಬಹುತೇಕ ಪ್ರಕರಣಗಳಿಗೆ ಮಧ್ಯ ಸೇವನೆ, ಸ್ಪೀಡ್ ಡ್ರೈವಿಂಗ್ ಮತ್ತು ನಿರ್ಲಕ್ಷ್ಯದ ಚಾಲನೆ ಕಾರಣವಾಗಿವೆ. ಯುವಕರು ಹೆಲ್ಮೆಟ್, ಸೀಟ್ ಬೆಲ್ಟ್‌ ಧರಿಸಿ ವಾಹನ ಚಾಲನೆ ಮಾಡಬೇಕು. ಯುವಕರ ಸಹಕಾರ ಮುಖ್ಯವಾಗಿದೆ. ಪಿಟ್ ನೇಸ್ ಪಾರ್ ಆಲ್ ಎಂಬ ತತ್ತ್ವದಡಿ ಪೊಲೀಸ್ ರನ್ ಯಶಸ್ವಿಗೊಳಿಸೋಣ ಎಂದು ಎಸ್‌.ಪಿ.ಡಾ.ಗೋಪಾಲ ಬ್ಯಾಕೋಡ ಅವರು ತಿಳಿಸಿದರು. 

ಸಭೆಯಲ್ಲಿ  ಮಾಜಿ ಸಂಸದ ಐ.ಜಿ.ಸನದಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಉಪ ಪೊಲೀಸ ಆಯುಕ್ತರಾದ ರವೀಶ ಸಿ.ಆರ್‌., ಮಾನಿಂಗ ನಂದಗಾಂವಿ, ಹೆಚ್ಚುವರಿ ಪೊಲೀಸ ಅಧೀಕ್ಷಕ ನಾರಾಯಣ ಭರಮನಿ, ಉದ್ಯಮಿ ಡಾ.ವಿ.ಎಸ್‌.ವಿ.ಪ್ರಸಾದ ಅವರು ಸೇರಿದಂತೆ ನಗರದ ವಿವಿಧ ಗಣ್ಯರು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಮುಖಂಡರು ಭಾಗವಹಿಸಿದ್ದರು. 

ಪೊಲೀಸ್ ರನ್ -2025 ದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಶಾಲಾಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ, ಸಂಸ್ಥೆಗಳ ಸದಸ್ಯರು, ಯುವಕರ ಗುಂಪುಗಳು ಭಾಗವಹಿಸಿದ್ದವು. 

ಪೊಲೀಸ್ ರನ್ -2025 ದಲ್ಲಿ 10 ಕೀ.ಮಿ ಮತ್ತು ಐದು ಕೀ.ಮಿ ಮ್ಯಾರಾಥಾನ್ ಆಯೋಜಿಸಲಾಗಿತ್ತು. ಕಿತ್ತೂರು ಚನ್ನಮ್ಮ ವೃತ್ತದಿಂದ ಆರಂಭವಾಗಿ ತೋಳನಕೆರೆ ತಟದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.