ಲೋಕದರ್ಶನ ವರದಿ
ಬೆಳಗಾವಿ 04: ವರಕವಿ ಡಾ. ದ.ರಾ.ಬೇಂದ್ರೆ ಅವರು ಕನ್ನಡ ಸಾರಸತ್ವ ಲೋಕದಲ್ಲಿ ಪಂಪ, ರನ್ನ, ಹರಿಹರ ಕವಿಗಳ ತರುವಾಯ ಕನ್ನಡ ಶಬ್ದ ಲೋಕವನ್ನು ಸೂರೆಗೊಂಡ ಅದ್ಭುತ ಕವಿಯಾಗಿದ್ದಾರೆ. ಆ ಅದ್ಭುತ ಸಾಹಿತ್ಯದಿಂದಾಗಿ ಅವರು ಕನ್ನಡ ಸಾಹಿತ್ಯದೊಂದಿಗೆ ಶಾಸ್ವತವಾಗಿರುವ ಚೇತನರಾಗಿದ್ದಾರೆ ಎಂದು ಹಿರಿಯ ಕವಿ ಡಾ. ಬಸವರಾಜ ಜಗಜಂಪಿ ಬಣ್ಣಿಸಿದ್ದಾರೆ.
ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಬೇಂದ್ರೆ ಅವರ 125 ನೇ ಜನ್ಮದಿನದ ಪ್ರಯುಕ್ತ ಭಾನುವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಬೇಂದ್ರೆ-ಕಾವ್ಯಾನುಸಂಧಾನ ಕಾರ್ಯಕ್ರಮದಲ್ಲಿ, ಬೇಂದ್ರೆ ಕಾವ್ಯ ವೈಖರಿ ಕುರಿತು ಉಪನ್ಯಾಸ ನೀಡಿದ ಅವರು, ಬೇಂದ್ರೆ ಅವರ ಕಾವ್ಯ ವೈಖರಿ ಅದ್ಭುತವಾಗಿದೆ.
ಕನ್ನಡದ ಶಬ್ದಗಳನ್ನು ವಿಸ್ಮಯಕಾರಿಯಾಗಿ ಜೋಡಿಸಿರುವ ಶಬ್ದ ಗಾರುಡಿಗ. ಕನ್ನಡದ ಜೀವ ಜೀವಾಳವನ್ನು ಹಿಡಿದಿಟ್ಟಿರುವ ವಿರಾಟ ಪ್ರತಿಭೆಯೆಂದು ವಿಶ್ಲೇಷಿಸಿದರು.
ಗದ್ಯ ಮತ್ತು ಪದ್ಯ ಸಾಹಿತ್ಯಗಳೆರಡರಲ್ಲೂ ಸವ್ಯಸಾಚಿಯೆನಿಸಿರುವ ಬೇಂದ್ರೆ ಅವರು, ತಮ್ಮ ಸಾಹಿತ್ಯದ ಮೂಲಕ ಕನ್ನಡಕ್ಕೆ ರಾಷ್ಟ್ರೀಯ ಗೌರವ ತಂದು ಕೊಟ್ಟಿದ್ದಾರೆ. ಅವರ ಮೌಲಾಧ್ಯಾರಿತ ಸಾಹಿತ್ಯವು ನೊಂದ ಮನಸ್ಸುಗಳಿಗೆ ಸಾಂತ್ವನ ನೀಡುತ್ತವೆ. ವಯಕ್ತಿಕ ಜೀವನದಲ್ಲಿ ಅನೇಕ ನೋವುಗಳನ್ನು ಅನುಭವಿಸಿದ್ದ ಅವರು, ಆ ನೋವುಗಳಿಂದ ಮೂಡಿ ಬಂದಿರುವ ಕವನಗಳು ಸಾಹಿತ್ಯ ಲೋಕಕ್ಕೆ ಸಿಂಗಾರವಾಗಿವೆ ಎಂದರು. ಕವಿಯಾಗ ಬಯಸುವವನು ರಷಿಕನಾಗಿರಬೇಕು ಅಥವಾ ಋಷಿಯಾಗಿರಬೇಕು. ಹೃದಯ ಅರಳುವ ಕವಿತೆಗಳು ಮೂಡಿ ಬರಬೇಕು. ಬೇಂದ್ರೆಯವರಿಂದ ಅಂತಹ ಕವಿತೆಗಳು ಮೂಡಿ ಬಂದಿವೆ. ಆದರೆ, ಇತ್ತೀಚೆಗೆ ಅಧ್ಯಯನದ ಕೊರತೆ ಕಂಡು ಬರುತ್ತಿದೆ. ಓದುಗರಿಲ್ಲದ ಕಾರಣ ಇಂದು ಸಾಹಿತ್ಯ ಲೋಕ ಬಡವಾಗುತ್ತಿದೆ ಎಂದ ಅವರು ಯುವಕರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ನ್ಯಾಯವಾದಿ ಎಸ್.ಎಂ.ಕುಲಕರ್ಣಿ ಉದ್ಘಾಟಿಸಿದರು. ಸಾಹಿತಿ ಡಾ.ಗುರುಪಾದ ಘಿವಾರಿ ಅವರು, ಬೇಂದ್ರೆ ಕಾವ್ಯದಲ್ಲಿ ಅವಧೂತಪ್ರಜ್ಞೆ ಕುರಿತು ಮಾತನಾಡಿದರು. ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಪುಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಡಾ.ರಾಜಶೇಖರ, ರವೀಂದ್ರ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ಸಾಹಿತಿಗಳು ಭಾಗವಹಿಸಿದ್ದರು