ಕಲಬುರಗಿ, ಏ.4, ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಲಾಕ್ ಡೌನ್ ಉಲ್ಲಂಘಿಸಿದ 35 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಚೌಕ್ ಠಾಣೆ ಸಿಪಿಐ ಶಕೀಲ್ ಚೌಧರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನಗರದ ಗಂಜ್ ಪ್ರದೇಶದಲ್ಲಿ ಸುಖಾಸುಮ್ಮನೆ ತಿರುಗಾಡುತ್ತಿದ್ದವರ 35 ಬೈಕ್ ಗಳನ್ನು ಜಪ್ತಿ ಮಾಡಿ, ನಂತರ ಪೊಲೀಸರು ಯೋಗ ಹೇಳಿಕೊಟ್ಟಿದ್ದಾರೆ.ಅಲ್ಲದೇ, ರವಿವಾರ ಪ್ರಧಾನಿ ನರೇಂದ್ರ ಮೋದಿಯವರಿಂದ ದೀಪ ಬೆಳಗಲು ಕರೆ ಹಿನ್ನೆಲೆಯಲ್ಲಿ ಕ್ಯಾಂಡಲ್ ವಿತರಿಸಿ, ನಾಳೆ ರಾತ್ರಿ 9 ಗಂಟೆಗೆ ಮನೆ ಮುಂದೆ ಕ್ಯಾಂಡಲ್ ಬೆಳಗಿಸಲು ಪೊಲೀಸರು ಸೂಚನೆ ನೀಡಿದ್ದಾರೆ.ಇದೇ ಕೊನೆ, ಅನವಶ್ಯಕವಾಗಿ ಲಾಕ್‌ಡೌನ್ ಮತ್ತು 144 ಸೆಕ್ಷನ್ ನಿಷೇಧಾಜ್ಞೆ ಮಧ್ಯೆ ಓಡಾಡುವುದು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.ಇನ್ನು ಮುಂದೆ ರಸ್ತೆ ಮೇಲೆ ಅನವಶ್ಯಕವಾಗಿ ಓಡಾಡುವುದಿಲ್ಲ, ಕಾನೂನಿಗೆ ಗೌರವಿಸುತ್ತೇವೆ ಎಂದು ಪೊಲೀಸರು ಅವರಿಂದ ಪ್ರತಿಜ್ಞಾವಿಧಿ ಮಾಡಿಸಿಕೊಂಡಿದ್ದಾರೆ.