ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ : ಶ್ರೀರಾಮುಲು

ಬೆಂಗಳೂರು,ಜು ೨೬ ಪಕ್ಷದ  ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ಜೊತೆ ರಾಜ್ಯ ಬಿಜೆಪಿ ನಿಯೋಗ ಇಂದು ಚರ್ಚೆ  ನಡೆಸಲಿದ್ದು, ಶೀಘ್ರದಲ್ಲೇ ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದರು. 

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸಲ್ಲಿಸಿರುವ  ಶಾಸಕರ ಅರ್ಜಿಗಳು  ಇನ್ನು ಇತ್ಯರ್ಥವಾಗಿಲ್ಲ.ಪಕ್ಷದ  ಹೈಕಮಾಂಡ್ ಸೂಚನೆ ಬಳಿಕವೇ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ ಬಳಿಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು. 

ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಶಾಸಕರಿಗೆ,ನಾಯಕರಿಗೆ ಇಂತಹ ಹುದ್ದೆ ಎನ್ನುವ ಬಗ್ಗೆ ಎಲ್ಲೂ ಪ್ರಸ್ತಾಪವಾಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ರಾಜೀನಾಮೆ ಸಲ್ಲಿಸಿದ ಶಾಸಕರು ನಗರಕ್ಕೆ ಆಗಮಿಸುವುದಿಲ್ಲ ಎಂದು ಅವರು ತಿಳಿಸಿದರು. 

ಬಿ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಪಕ್ಷದ ಕಾರ್ಯಕರ್ತರು,ಸಾಮಾಜಿಕ ಜಾಲ ತಾಣದಲ್ಲಿ ನಡೆಸುತ್ತಿರುವ ಕ್ಯಾಂಪೇನ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,  ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರು,  ಯಡಿಯೂರಪ್ಪನವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ ಎಂದು  ಸ್ಪಷ್ಟಪಡಿಸಿದರು  

ಸಾಮಾಜಿಕ ಜಾಲತಾಣದಲ್ಲಿ ಇಂತಹ ಚರ್ಚೆಗಳು ನಡೆಯುವುದು ಸಾಮಾನ್ಯವಾಗಿದೆ.ಅದಕ್ಕೆ ಕಿವಿಕೊಡುವುದು,ಆದ್ಯತೆ ನೀಡುವ ಅಗತ್ಯವಿಲ್ಲ. ಮಾಜಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತಾಶೆಯಿಂದ ಕೆಲವು ವಿಚಾರಗಳನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಸಾಧ್ಯವಿಲ್ಲ.ಡಿಕೆ ಶಿವಕುಮಾರ್ ಅವರ ಬಗ್ಗೆ  ನನಗೆ ಗೌರವ ಇದೆ ಎಂದು ಅವರು ತಿಳಿಸಿದರು.