ಬೆಂಗಳೂರು, ಫೆ.3 ,ಸಂಪುಟ ವಿಸ್ತರಣೆ ವಿಚಾರದಲ್ಲಿ ಅಸಮಾಧಾನಗೊಂಡಿರುವ ಬಿಜೆಪಿಯ ಶಾಸಕರ ಜೊತೆ ಮುಖ್ಯಮಂತ್ರಿ ದೂರವಾಣಿ ಮೂಲಕ ಮಾತುಕತೆ ನಡೆಸಿ ಅಸಮಾಧಾನ ತಣಿಸುವ ಪ್ರಯತ್ನ ನಡೆಸುತ್ತಿದ್ದಾರೆ.ಮುಂದಿನ ಬಾರಿ ತಮಗೆ ಸಂಪುಟದಲ್ಲಿ ಸ್ಥಾನ ನೀಡುತ್ತೇನೆ, ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದರ ಪರಿಣಾಮ ಕೆಲವು ಮೂಲ ಬಿಜೆಪಿ ಶಾಸಕರು ಯಡಿಯೂರಪ್ಪ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನು ಕೆಲವು ಶಾಸಕರು ಮುಖ್ಯಮಂತ್ರಿಯವರ ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ. ಅವರನ್ನು ಅವರ ಆಪ್ತರ ಮೂಲಕ ಮನವೊಲಿಸುವ ಪ್ರಯತ್ನ ಮುಂದುವರಿದಿದೆ.
ಸಂಪುಟ ವಿಸ್ತರಣೆಗೆ ಫೆಬ್ರವರಿ 6ರಂದು ಮುಹೂರ್ತ ನಿಗದಿಯಾಗಿರುವುದರಿಂದ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂಬುದು ಇನ್ನೂ ನಿಗೂಢವಾಗಿರುವುದರಿಂದ ಹಾಲಿ ಸಚಿವರಲ್ಲಿಯೂ ನಡುಕ ಆರಂಭಗೊಂಡಿದೆ. ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮುಖ್ಯಮಂತ್ರಿಯವರ ತಲೆನೋವು ಹೆಚ್ಚಾಗಿದ್ದು, ಎಲ್ಲವನ್ನೂ ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.
ಮುಖ್ಯಮಂತ್ರಿ ಮುಂದಿರುವ ಸವಾಲುಗಳು:
1.ಸಚಿವ ಸಂಪುಟ ವಿಸ್ತರಣೆ ಯಾರನ್ನೆಲ್ಲಾ ಸೇರಿಸಬೇಕು, ಯಾರನ್ನೆಲ್ಲಾ ಕೈಬಿಡಬೇಕು
2 ಖಾತೆ ಹಂಚಿಕೆ ಗೊಂದಲ – ಅರ್ಹ ಶಾಸಕರಿಂದ ಪ್ರಮುಖ ಹಾಗೂ ಪ್ರಭಾವಿ ಖಾತೆಗಳಿಗೆ ಬಿಗಿ ಪಟ್ಟು, ಮೂಲ ಬಿಜೆಪಿಗರಿಂದಲೂ ಪ್ರಬಲ ಖಾತೆಗಳ ಮೇಲೆ ಕಣ್ಣು
3.ಸೋತ ಶಾಸಕರ ಅಸಮಾಧಾನ ಸ್ಫೋಟಗೊಳ್ಳದಂತೆ ತಡೆಯುವುದು, ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸೂಕ್ತ ಸ್ಥಾನಮಾನಕ್ಕಾಗಿ ಸಿಎಂ ಮೇಲೆ ಒತ್ತಡ
4. ಬಿಜೆಪಿ ಶಾಸಕರ ಬಂಡಾಯ ಭುಗಿಲೇಳದಂತೆ ತಡೆಯುವುದು–ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇರುವ ಬಿಜೆಪಿ ಹಿರಿಯ ಶಾಸಕರ ಬಂಡಾಯವನ್ನ ಶಮನಗೊಳಿಸುವುದು ಮತ್ತು ಮುಖ್ಯಮಂತ್ರಿ ಅವರ ವಿರುದ್ಧ ತಿರುಗಿ ಬೀಳದೇ ಇರುವುದನ್ನು ತಡೆಯುವುದು.
5. ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಕಾಯ್ದುಕೊಳ್ಳುವುದು, ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ಹಾಗೂ ಅರ್ಹ ಶಾಸಕರು, ಸಚಿವ ಸ್ಥಾನ ಆಕಾಂಕ್ಷಿತರು, ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರವನ್ನು ಸುಸೂತ್ರವಾಗಿ ನಡೆಸುವುದು