ಬೆಂಗಳೂರು,ಆ 20 ಬಿಜೆಪಿ ಸರ್ಕಾರದ ನೂತನ ಸಚಿವ ಸಂಪುಟ ರಚನೆ ಬಳಿಕ ನೆರೆ ಪರಿಹಾರ ಹಾಗೂ ಪುನರ್ವಸತಿ ಕೆಲಸಗಳನ್ನು ತ್ವರಿತವಾಗಿ ಕೈಗೊಳ್ಳಲು ಸಚಿವರು ಜಿಲ್ಲಾ ಪ್ರವಾಸ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. ವಿಧಾನ ಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಸಂಪುಟ ಸಭ್ಯೆಲ್ಲಿ ಈ ಸೂಚನೆ ನೀಡಿದ್ದಾರೆ. ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಸುರೇಶ್ ಕುಮಾರ್ ಹಾಗು ಜೆ ಸಿ ಮಾಧುಸ್ವಾಮಿ, ನಾಳೆಯಿಂದಲೇ ಎಲ್ಲಾ ನೂತನ ಸಚಿವರು ಎರಡು ದಿನಗಳ ಕಾಲ ನೆರೆ ಸಂತ್ರಸ್ತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದು, ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದೇವೆ. ಎಲ್ಲಾ ಸಚಿವರಿಗೆ ಜಿಲ್ಲೆಗಳ ಹಂಚಿಕೆ ಮಾಡಲಾಗಿದ್ದು ಸಂಪುಟ ಸಭೆ ಮುಗಿಯುತ್ತಿದ್ದಂತೆಯೇ ನೆರೆ ಪೀಡಿತ ಪ್ರದೇಶಗಳಿಗೆ ತೆರಳುತ್ತಿದ್ದೇವೆ ಎಂದು ಅವರು ತಿಳಿಸಿದರು. ಬೆಳಗಾವಿ ಜಿಲ್ಲೆಗೆ ಲಕ್ಷ್ಮಣ ಸವದಿ , ಚಿಕ್ಕೋಡಿ ಉಪ ವಿಭಾಗಕ್ಕೆ ಶಶಿಕಲಾ ಜೊಲ್ಲೆ ,ಮೈಸೂರು ಜಿಲ್ಲೆಗೆ ಆರ್.ಅಶೋಕ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಕೋಟಾ ಶ್ರೀನಿವಾಸಪೂಜಾರಿ, ಹಾಸನ ಮತ್ತು ಚಿಕ್ಕಮಗಳೂರು ಸಿ.ಟಿ.ರವಿ ಹಾಗೂ ಜೆ ಸಿ ಮಾಧುಸ್ವಾಮಿ ,ಯಾದಗಿರಿ ಜಿಲ್ಲೆಗೆ ಪ್ರಭುಚೌಹಾಣ್, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಶ್ರೀರಾಮುಲು, ಗದಗ ಕೊಪ್ಪಳ ಜಿಲ್ಲೆಗಳಿಗೆ ಸಿಸಿ ಪಾಟೀಲ್, ಕೊಡಗು ಜಿಲ್ಲೆಗೆ ಸುರೇಶ್ ಕುಮಾರ್, ಚಾಮರಾಜನಗರ ಜಿಲ್ಲೆಗೆ ವಿ ಸೋಮಣ್ಣ, ಬಾಗಲಕೋಟೆ ಜಿಲ್ಲೆಗೆ ಈಶ್ವರಪ್ಪ, ವಿಜಯಪುರ ಜಿಲ್ಲೆಗೆ ಗೋವಿಂದ ಕಾರಜೋಳ, ಹಾವೇರಿ ಜಿಲ್ಲೆಗೆ ಬಸವರಾಜ್ ಬೊಮ್ಮಾಯಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗೆ ಜಗದೀಶ್ ಶೆಟ್ಟರ್ ಅವರನ್ನು ನೇಮಿಸಲಾಗಿದೆ. ಎಲ್ಲಾ ಸಚಿವರು ನೆರೆ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸುವ ಜೊತೆಗೆ ಸಂತ್ರಸ್ತರ ಅಹವಾಲು ಆಲಿಸಬೇಕು. ಪರಿಹಾರ ಕಾರ್ಯಗಳು, ಮೂಲಸೌಕರ್ಯ ಕಲ್ಪಿಸುವುದು ಹಾಗೂ ಪರಿಹಾರ ವಿತರಣೆ ಮಾಡಲು ಸೂಚಿಸಲಾಗಿದೆ ಎಂದರು. ಇದೇ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, ಎರಡು ದಿನಗಳ ಕಾಲ ನೆರೆ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಬರುತ್ತೇವೆ, ಬಳಿಕ ಜಿಲ್ಲಾಧಿಕಾರಿಗಳ ಸಭೆ ಕರೆದು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಇದುವರೆಗೆ ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಮೊತ್ತವನ್ನು ಬಿಡುಗಡೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಇದ್ದೇವೆ ಎಂದು ತಿಳಿಸಿದರು.