ಬೆಳಗಾವಿ, ಆ 8 ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕುಂದಾನಗರಿ ಬೆಳಗಾವಿಯಲ್ಲಿ ಇಂದು ಬೆಳಗ್ಗೆ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಆಸ್ತಿ ನಷ್ಟವಾದವರಿಗೂ ಪರಿಹಾರ ನೀಡಲಾಗುವುದು. ಪ್ರವಾಹದಲ್ಲಿ ಮೃತರಾದವರಿಗೆ ಐದು ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಗದೀಶ್ ಶೆಟ್ಟರ್, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಕೋಟಾ ಶ್ರೀನಿವಾಸ ಪೂಜಾರಿ, ಪ್ರತಾಪ್ ಸಿಂಹ, ಬಿ.ವೈ.ರಾಘವೇಂದ್ರ, ಸಿ.ಎಂ.ಉದಾಸಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದರು. ಇನ್ನೂ ಮೂರು ದಿನ ಉತ್ತರ ಕನ್ನಡದಲ್ಲೇ ವಾಸ್ತವ್ಯ ಮಾಡಲಿದ್ದು, ಪ್ರವಾಹ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಬಿಎಸ್ವೈ ಭರವಸೆ ನೀಡಿದ್ದಾರೆ. ಬಿಎಸ್ವೈಗೆ ರಾಜನಾಥ್ ಸಿಂಗ್ ಕರೆ: ಮುಖ್ಯಮಂತ್ರಿ ಯಡಿಯೂರಪ್ಪಗೆ ದೂರವಾಣಿ ಕರೆ ಮಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ನೆರವು ನೀಡವುದಾಗಿ ಭರವಸೆ ನೀಡಿದ್ದಾರೆ. ಸೇನಾ ಹೆಲಿಕಾಪ್ಟರ್ ಹಾಗೂ ಅಗತ್ಯ ಕೇಂದ್ರ ರಕ್ಷಣಾ ತಂಡಗಳನ್ನು ರಾಜ್ಯಕ್ಕೆ ಇಂದು ಸಂಜೆಯೊಳಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.