ಏ.14ರವರೆಗೆ ರಾಜ್ಯದಲ್ಲಿ ಮದ್ಯಮಾರಾಟ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು,  ಏ.1, ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂಧ ಏಪ್ರಿಲ್ 14ರವರೆಗೆ ರಾಜ್ಯದಲ್ಲಿ ಮದ್ಯಮಾರಾಟ ಮಾಡಲು ಅವಕಾಶ ಇಲ್ಲ ಎಂದು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಲಾಕ್ಡೌನ್ ಮುಗಿಯುವವರೆಗೂ  ಮದ್ಯಪ್ರಿಯರು ಕಾಯಲೇಬೇಕಾಗಿದೆ.ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಮದ್ಯಕ್ಕಾಗಿ ದೆಹಲಿಗೆ ಯಾರು ಹೋಗಿದ್ದಾರೋ ಅವರೇ ಮುಂದೆ ಬಂದರೆ  ಒಳ್ಳೆಯದು. ನಾವು ನಿಮ್ಮನ್ನು ಹುಡುಕುವುದು ತಪ್ಪಲಿದೆ. ಏಪ್ರಿಲ್ 14ವರೆಗೆ ಮದ್ಯದಂಗಡಿ  ಬಂದ್ ಇರಲಿದೆ. ಯಾರಿಗೆಲ್ಲ ಎಣ್ಣೆ ಕುಡಿಯಬೇಕೆಂಬುದಿದೆಯೋ ಅವರು ಅಲ್ಲಿಯವರೆಗೆ  ಕಾಯಲೇಬೇಕು ಎಂದು ನಗೆಚಟಾಕಿ ಹಾರಿಸಿದರು.ಮುಖ್ಯಮಂತ್ರಿಗಳ ಮಾತಿಗೆ ದನಿಗೂಡಿಸಿದ ಸಚಿವ ಆರ್.ಅಶೋಕ್, ಲಾಕ್ಡೌನ್ ಮುಗಿಯುವವರೆಗೂ ಎಣ್ಣೆ ನಿಮ್ದು ಊಟ ಮಾತ್ರ ನಮ್ದು ಎಂದು ಪರಿಹಾಸ್ಯ ಮಾಡಿದರು.ಕೇರಳದಲ್ಲಿ  ಲಾಕ್ಡೌನ್ ಸಂದರ್ಭದಲ್ಲಿ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಮದ್ಯ  ಸಿಗದೇ ಐವರು ಮೃತಪಟ್ಟಿದ್ದು, ಮದ್ಯದಂಗಡಿ ತೆರೆಯುವಂತೆ ಮದ್ಯಪ್ರಿಯರು  ಆಗ್ರಹಿಸಿದ್ದರು. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಮುಖ್ಯಮಂತ್ರಿಗಳ  ವಿವೇಚನೆಗೆ ಬಿಟ್ಟಿರುವುದಾಗಿ ಅಬಕಾರಿ ಸಚಿವ ನಾಗೇಶ್ ಹೇಳಿದ್ದರು. ಇಂದು ಯಡಿಯೂರಪ್ಪ ಲಾಕ್ಡೌನ್ ಮುಗಿಯುವವರೆಗೂ ಮದ್ಯದಂಗಡಿ ತೆರೆಯಲಾಗದು ಎಂದು ಸ್ಪಷ್ಟಪಡಿಸಿದರು.