ಪ್ರವಾಹದಿಂದ ಜನರು ಆತಂಕಕ್ಕೊಳಗಾಗದಂತೆ ಯಡಿಯೂರಪ್ಪ ಮನವಿ

ಬೆಂಗಳೂರು, ಆ 10       ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿ ಕಂಡು ಜನರು ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಭಯ ನೀಡಿದ್ದಾರೆ 

  ಕಳೆದೆರಡು ದಿನಗಳಿಂದ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವೆಡೆ ಪ್ರವಾಹ ಪರಿಸ್ಥಿತಿ ಸಮೀಕ್ಷೆ ನಡೆಸಿ ಅವರು ತಡರಾತ್ರಿ ಬೆಂಗಳೂರಿಗೆ ಬಂದಿಳಿದರು. 

ಶನಿವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ವಿಮಾನದಲ್ಲಿ  ಬೆಳಗಾವಿ ಮತ್ತಿತ್ತರ ಭಾಗಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.  ಕೇಂದ್ರದ ಹಣಕಾಸು ಸಚಿವರೇ ಬಂದಿರುವುದರಿಂದ ರಾಜ್ಯದಲ್ಲಿರುವ ನೈಜ ಸ್ಥಿತಿಗತಿ ಅವರಿಗೆ ತಿಳಿಯಲಿದೆ. ಬೆಳಗಾವಿ ಸೇರಿದಂತೆ ವಿವದೆಡೆ ಪರಿಶೀಲನೆ ನಡೆಸಿ ಇಂದು ಸಂಜೆಯೇ ಅವರು ದಹೆಲಿಗೆ ಹಿಂದಿರುಗಲಿದ್ದಾರೆ ಎಂದರು. 

 ಕೇಂದ್ರದಿಂದ ತುರ್ತ ಪರಿಹಾರಕ್ಕೆ ಮನವಿ ಮಾಡಲಾಗಿದ್ದು, ಅಧಿಕಾರಿಗಳು ಈ ಸಂಬಂಧ ವರದಿ ಸಿದ್ಧಪಡಿಸುತ್ತಿದ್ದಾರೆ. ವರದಿಯನ್ನು ಕೇಂದ್ರಕ್ಕೆ ಕಳುಹಿಸಿ ವಿಶೇಷ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗುತ್ತಿದೆ. ಪ್ರವಾಹ ಪರಿಸ್ಥಿತಿ ಸಂಬಂಧ ಗೃಹಕಚೇರಿ ಕೃಷ್ಣಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ತಾವು ಸಭೆ ನಡೆಸಲಿದ್ದು, ರಾಜ್ಯದ ಜನರು ಯಾವುದೇ ಭಯ, ಆತಂಕ ಪಡಬಾರದು ಎಂದು ಯಡಿಯೂರಪ್ಪ ತಿಳಿಸಿದರು. 

   ಸಚಿವ ಸಂಪುಟ ರಚನೆ ಕುರಿತು ದೆಹಲಿಯ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಸದ್ಯಕ್ಕೆ ರಾಜ್ಯದ ಜನರ ಹಿತ ಮುಖ್ಯ. ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಇಂದು ಮತ್ತು ನಾಳೆ ದೆಹಲಿಗೆ ತೆರಳುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಯಡಿಯೂರಪ್ಪ ಉತ್ತರಿಸಿದ ಅವರು, ಅಧಿಕಾರಿಗಳ ಜೊತೆ ಸಭೆ ನಡೆಸಲು ಬೆಂಗಳೂರಿನ ನಿವಾಸದಿಂದ ಗೃಹಾಕಚೇರಿ ಕೃಷ್ಣಾದತ್ತ  ತೆರಳಿದರು.