ಹಂಪಿ ಉತ್ಸವದಲ್ಲಿ ಮೈನವಿರೇಳಿಸಿದ ಕುಸ್ತಿ ಪಂದ್ಯಾವಳಿಗಳು

Wrestling tournaments held at Hampi festival

ಗಮನ ಸೆಳೆದ ಮಹಿಳಾ ಕುಸ್ತಿಪಟುಗಳು, ಮದಗಜಗಳಂತೆ ಕಾದಾಡಿದ ಪೈಲ್ವಾನಗಳು  

ವಿಜಯನಗರ (ಹೊಸಪೇಟೆ) 02 : ಹಂಪಿ ಉತ್ಸವದಲ್ಲಿ ಜಿಲ್ಲಾಡಳಿತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹೊಸಮಲಪನಗುಡಿಯ ಶ್ರೀವಿಜಯವಿದ್ಯಾರಣ್ಯ ಪ್ರೌಢಶಾಲೆ ಮೈದಾನದಲ್ಲಿ ಏರಿ​‍್ಡಸಿದ್ದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಗಳು ನೆರದಿದ್ದ ಕುಸ್ತಿ ಪ್ರಿಯರಿಗೆ ಮೈನವಿರೇಳುವ ಪ್ರದರ್ಶನ ನೀಡಿದವು.  

ಶಾಸಕ ಹೆಚ್‌.ಆರ್‌.ಗವಿಯಪ್ಪ ಕುಸ್ತಿ ಪಂದ್ಯವಾಳಿಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿ, ಗತವೈಭವದ ಇತಿಹಾಸ ಸಾರುವ ವಿಜಯನಗರ ಸಾಮ್ರಾಜ್ಯದಲ್ಲಿಯು ಸಹ ಕುಸ್ತಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಹಾಗಾಗೀ ಈಗೀನ ವಿಶ್ವವಿಖ್ಯಾತ ಹಂಪಿಯಲ್ಲಿ ಜರುಗುವ ಉತ್ಸವದಲ್ಲಿಯು ಸಹ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಯುವಕರನ್ನು, ಕುಸ್ತಿಪಟುಗಳನ್ನು ಗುರುತಿಸುವ ಮೂಲಕ ಗ್ರಾಮೀಣ ಕ್ರೀಡೆ ಕುಸ್ತಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.  

ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಮಾತನಾಡಿ, ಹಂಪಿ ಉತ್ಸವದಲ್ಲಿ ರಾಜ್ಯ ಮಟ್ಟದ ಕುಸ್ತಿಪಟುಗಳು ಮತ್ತು ಮಹಿಳಾ ಕುಸ್ತಿ ಪಟುಗಳನ್ನು ಆಹ್ವಾನಿಸಿ ಕುಸ್ತಿ ಪ್ರದರ್ಶನ ನೀಡುವ ಮೂಲಕ ಸ್ಥಳೀಯ ಕುಸ್ತಿಪಟುಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕುಸ್ತಿ ಪ್ರಿಯರು ಈ ಭಾಗದಲ್ಲಿ ಹೆಚ್ಚಿರುವ ಹಿನ್ನಲೆಯಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಿ ಆಯೋಜಿಸಲಾಗಿದೆ ಎಂದರು.  

ಈ ವೇಳೆ ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಅಕ್ರಮ್ ಅಲಿ ಷಾ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಹಂಪಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷರಾದ ಉಮೇಶ್ ಮೈನಳ್ಳಿ, ಸಂಚಾಲಕ ಯು.ಅಶೋಕ, ನಿರ್ಣಾಯಕರಾದ ಬೀರಲಿಂಗಪ್ಪ, ವೆಂಕಟರಮಣ, ದುರುಗೋಜಿ, ಸೇರಿದಂತೆ ಎಲ್‌.ವಿಜಯಕುಮಾರಿ, ಸೋಮಕ್ಕ, ಕಾಳಮ್ಮ, ಪದ್ಮಾವತಿ, ಶ್ರೀಲತಾ ಇದ್ದರು.  

ರಾಜ್ಯ ಮಟ್ಟದ ಪುರುಷ, ಮಹಿಳಾ ಮತ್ತು ಜಿಲ್ಲಾ ಮಟ್ಟದ ಪುರುಷ ಸ್ಪರ್ಧೆಗಳಲ್ಲಿ ಕುಸ್ತಿಯು ನಾಲ್ಕು ವಿಭಾಗಗಳಲ್ಲಿ ನಡೆಸಲಾಯಿತು. ರಾಜ್ಯಮಟ್ಟದ ಕುಸ್ತಿಯಲ್ಲಿ ಪುರುಷರು- 31, ಮಹಿಳೆಯರು -25, ಜಿಲ್ಲಾ ಮಟ್ಟದ ಪುರುಷರ ಚಿತ್ ಕುಸ್ತಿ ವಿಭಾಗದಲ್ಲಿ 31 ಸೇರಿ ಒಟ್ಟು 87 ಸ್ಪರ್ಧಿಗಳು ಭಾಗವಹಿಸಿದ್ದರು. ರಾಜ್ಯ ಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿ 57-65 ಕೆಜಿ, 66-74 ಕೆಜಿ, 75-85 ಕೆಜಿ, 86 ಮೇಲ್ಪಟ್ಟು, ಕುಸ್ತಿ ಪಂದ್ಯಾವಳಿಗಳು, ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿ 50 ಕೆಜಿ, 51-54 ಕೆಜಿ, 55-57 ಕೆಜಿ, 58 ಕೆಜಿ ಮೇಲ್ಪಟ್ಟು ಕುಸ್ತಿ ಪಂದ್ಯಾವಳಿ ಹಾಗೂ ಜಿಲ್ಲಾ ಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿ 57-65 ಕೆಜಿ, 66-74 ಕೆಜಿ, 75-85 ಕೆಜಿ, 86 ಕೆಜಿ ಮೇಲ್ಪಟ್ಟು ಕುಸ್ತಿ ಪಂದ್ಯಾವಳಿಯನ್ನು ಸಂಘಟಿಸಲಾಗಿತ್ತು.  

ರಾಜ್ಯ ಮಟ್ಟದ ಕುಸ್ತಿಗಳು ಅಂಕಗಳ ಆಧಾರದ ಮೇಲೆ ನಡೆಸಲಾಯಿತು. ರಾಜ್ಯ ಮಟ್ಟದ ಪುರುಷ, ಮಹಿಳೆ ಕುಸ್ತಿಯಲ್ಲಿ ನಾಲ್ಕು ತೂಕದ ವಿಭಾಗದ ವಿಜೇತರಿಗೆ ಹಂಪಿ ಕಿಶೋರ, ಹಂಪಿ ಕಿಶೋರಿ, ಹಂಪಿ ಕುಮಾರ, ಹಂಪಿ ಕುಮಾರಿ, ಹಂಪಿ ಕೇಸರಿ, ಹಂಪಿ ಕಂಠೀರವ, ಹಂಪಿ ಮಹಿಳಾ ಕಂಠೀರವ ಪ್ರಶಸ್ತಿಯನ್ನು ನೀಡಲಾಯಿತು. ಕುಸ್ತಿ ಪಂದ್ಯಾವಳಿಯಲ್ಲಿ ಬೆಳಗಾವಿ, ದಾವಣಗೆರೆ, ಬಾಗಲಕೋಟೆ, ಹಾವೇರಿ, ವಿಜಯಪುರ, ವಿಜಯನಗರ, ಗದಗ, ಉತ್ತರ ಕನ್ನಡ ಜಿಲ್ಲೆಗಳಿಂದ ಕುಸ್ತಿಪಟುಗಳು ಭಾಗವಹಿಸಿದ್ದರು.  

ಕುಸ್ತಿಯಲ್ಲಿ ವಿಜೇತರು : ರಾಜ್ಯ ಮಟ್ಟದ ಪುರುಷರ ಕುಸ್ತಿ ವಿಭಾಗದಲ್ಲಿ ಹಂಪಿ ಕಂಠೀರವ ಪ್ರಶಸ್ತಿಯು ಪ್ರಥಮ ಸ್ಥಾನ ಪಡೆದ ಮುಧೋಳ ತಿಮ್ಮನಗೌಡರಿಗೆ ದಕ್ಕಿದೆ. ಧಾರವಾಡದ ಭೀಮು ಕಾಟೆ (ದ್ವಿತೀಯ), ಹಂಪಿ ಕೇಸರಿಯಲ್ಲಿ  ಬೆಳಗಾವಿ ಪರಮಾನಂದ (ಪ್ರಥಮ),  ಧಾರವಾಡ ಪ್ರವೀಣ್ (ದ್ವಿತೀಯ), ಹಂಪಿ ಕುಮಾರ ವಿಭಾಗದಲ್ಲಿ ಬೆಳಗಾವಿ ಸುನಿಲ್ ಮೇತ್ರಿ (ಪ್ರಥಮ), ದಾವಣಗೆರೆ ಯೋಗೇಶ್ (ದ್ವಿತೀಯ) ಹಾಗೂ ಹಂಪಿ ಕಿಶೋರ ಪ್ರಶಸ್ತಿಯಲ್ಲಿ ದಾವಣಗೆರೆ ಸತ್ಯರಾಜ (ಪ್ರಥಮ), ಕೆ.ಮಂಜುನಾಥ (ದ್ವಿತೀಯ) ಸ್ಥಾನ ಪಡೆದಿದ್ದಾರೆ.  

ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಹಂಪಿ ಕಂಠೀರವ ಪ್ರಶಸ್ತಿಯು ಹಳಿಯಾಳ ಮನಿಷಾ ಮುಡಿಗೇರಿದೆ. ಹಳಿಯಾಳ ಪ್ರತಿಕ್ಷಾ (ದ್ವಿತೀಯ), ಹಂಪಿ ಕೇಸರಿ ಪಟ್ಟದಲ್ಲಿ ಬಾಗಲಕೋಟೆ ಐಶ್ವರ್ಯ (ಪ್ರಥಮ), ಹಳಿಯಾಳ ಕಾವೇರಿ (ದ್ವಿತೀಯ), ಹಂಪಿ ಕುಮಾರಿಯಾಗಿ ಹಳಿಯಾಳ ಕಾವ್ಯ (ಪ್ರಥಮ), ಬಾಗಲಕೋಟೆ ಸೋನಿಯಾ (ದ್ವಿತೀಯ), ಹಂಪಿ ಕಿಶೋರಿ ವಿಭಾಗದಲ್ಲಿ ಬಾಗಲಕೋಟೆ ಗೋಪವ್ವ (ಪ್ರಥಮ), ಗದಗ ಸ್ನೇಹಾ (ದ್ವಿತೀಯ) ಬಹುಮಾನ ಪಡೆದಿದ್ದಾರೆ.  

ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯ ಪುರುಷರ 86ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಚಿಕ್ಕೇರಿ ತಿಪ್ಪೇಸ್ವಾಮಿ ಪ್ರಥಮ ಸ್ಥಾನಗಳಿಸಿ ಕಂಠೀರವ ಪ್ರಶಸ್ತಿಯ ಕೀರೀಟ ಧರಿಸಿದರು. ಪುರುಷ ವಿಭಾಗದ ಕಂಠೀರವ ಪ್ರಶಸ್ತಿಗೆ ಎನ್‌.ಎಂ.ಹಸನುಲ್ಲಾ(ದ್ವಿತೀಯ). ’ಹಂಪಿ ಕಿಶೋರ’ ವಿಭಾಗದಲ್ಲಿ ಹರಪನಹಳ್ಳಿ ಕೆ.ಜಮೀರ್(ಪ್ರಥಮ), ಹರಪನಹಳ್ಳಿ ಕೆ.ಮಂಜುನಾಥ(ದ್ವಿತೀಯ), 75-85 ಕೆಜಿಯಲ್ಲಿ ‘ಹಂಪಿ ಕೇಸರಿ’ಯಾಗಿ ಹರಪನಹಳ್ಳಿ ಅರವಿ ಕೆಂಚಪ್ಪ(ಪ್ರಥಮ), ಮರಿಯಮ್ಮನಹಳ್ಳಿ ಎಲ್‌.ಹನುಮಂತ(ದ್ವಿತೀಯ), 66-74 ಕೆಜಿಯಲ್ಲಿ ‘ಹಂಪಿ ಕುಮಾರ’ ವಿಭಾಗದಲ್ಲಿ ಹರಪನಹಳ್ಳಿ ಎಸ್‌.ಆಂಜನೇಯ(ಪ್ರಥಮ), ಹೊಸಪೇಟೆ ಕೆ.ಪರಶುರಾಮ(ದ್ವಿತೀಯ) ಸ್ಥಾನ ಪಡೆದರು. ವಿಜೇತರಿಗೆ ಪ್ರಥಮ 10 ಸಾವಿರ ರೂ. ಮತ್ತು ದ್ವಿತೀಯ 5 ಸಾವಿರ ರೂ.ನಗದು ಬಹುಮಾನ ನೀಡಲಾಯಿತು.  

ಬಂಡಿಗಾಲಿ ತೊಡಿಸುವ ಸ್ಪರ್ಧೆ : ಗ್ರಾಮೀಣ ಕ್ರೀಡೆಯಲ್ಲಿ ರೈತಾಪಿ ವರ್ಗವನ್ನು ಗಮನಸೆಳೆಯುವ ನಿಟ್ಟಿನಲ್ಲಿ ಎತ್ತಿನ ಬಂಡಿಯ ಗಾಲಿ ತೊಡಿಸುವ ಸ್ಪರ್ಧೆ ಜನಾಕರ್ಷಣೆ ಪಡೆಯಿತು. ಬಂಡಿಯ ಗಾಲಿ ಬಿಚ್ಚಿ ಪುನಃ ತೊಡಿಸುವ ಪಂದ್ಯಾವಳಿಯಲ್ಲಿ ಒಟ್ಟು 11 ಜನ ಯುವಕರು ಭಾಗವಹಿಸಿದ್ದರು. ಇವರಲ್ಲಿ ಹೊಸಪೇಟೆಯ ಹನುಮಂತ ಅವರು 1.46 ನಿಮಿಷದಲ್ಲಿ ಗಾಲಿಗಳನ್ನು ಬಿಚ್ಚಿ ತೊಡಿಸುವ ಮೂಲಕ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು. ಇನ್ನೋರ್ವ ಸ್ಪರ್ಧಿ ಹೊಸಪೇಟೆಯ ವೆಂಕೋಬರವರು 2.15 ನಿಮಿಷದಲ್ಲಿ ತೊಡಿಸಿ ದ್ವೀತಿಯ ಸ್ಥಾನ, ದೇವಪ್ಪರವರು 2.25 ನಿಮಿಷದಲ್ಲಿ ಬಂಡಿಗಾಲಿಗಳನ್ನು ಜೋಡಿಸಿ ವಿಜೇತರಿಗೆ ತಲಾ 10, 5 ಹಾಗೂ 3 ಸಾವಿರ ರೂಗಳ ನಗದು ಹಾಗೂ ಪ್ರಶಸ್ತಿ ಪತ್ರದೊಂದಿಗೆ ಹಂಪಿಯ ಭಾವಚಿತ್ರವನ್ನು ಕಾಣಿಕೆಯನ್ನಾಗಿ ನೀಡಲಾಯಿತು.  

ಕಲ್ಲು ಗುಂಡು ಎತ್ತುವ ಸ್ಪರ್ಧೆ: ಕಲ್ಲು ಗುಂಡು ಎತ್ತುವ ಸ್ಪರ್ಧೆಯಲ್ಲಿ ಮುದ್ದೇಬಿಹಾಳದ ಶೇಖಪ್ಪ ಯಾಳವರ 155 ಕೆ.ಜಿ ತೂಕದ ಗುಂಡನ್ನು ಕೇವಲ 1.97 ನಿಮಿಷದಲ್ಲೇ ಎತ್ತುವ ಮೂಲಕ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು. ಯಾದಗಿರಿ ಜಿಲ್ಲೆಯ ಶಹಾಪುರದ ಮರೆಪ್ಪ 2.89 ನಿಮಿಷದಲ್ಲಿ ಗುಂಡು ಎತ್ತುವ ಮೂಲಕ ದ್ವಿತೀಯ ಸ್ಥಾನ ಪಡೆದರು. ಕಂಪ್ಲಿಯಗಸರ ಮಾರುತಿ ಮತ್ತು ಯಾದಗಿರಿ ಜಿಲ್ಲೆಯ ವೆಂಕಟೇಶ್ ಗುಂಡುಗಳನ್ನು ಎತ್ತುವಲ್ಲಿ ವಿಫಲರಾದರು. ಗ್ರಾಮೀಣ ಕ್ರೀಡೆಯಲ್ಲಿ ವಿಶೇಷ ಸ್ಪರ್ಧೆಯಾದ ಗುಂಡು ಎತ್ತುವ ಸ್ಪರ್ಧೆ ವೀಕ್ಷಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಸಿಳ್ಳೆ ಕೇಕೆ ಹಾಕಿದರು. ಪ್ರಥಮ 10 ಸಾವಿರ, ದ್ವಿತೀಯ 5 ಸಾವಿರ, ತೃತೀಯ 3 ಸಾವಿರ ರೂಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.