ಜನಜಾಗೃತಿಗಾಗಿ ಬೀದಿ ನಾಟಕಗಳು ತುಂಬಾ ಅವಶ್ಯ : ಸತೀಶ್ ಕುಲಕರ್ಣಿ.

World Theatre Day celebration- Dharwad news

ವಿಶ್ವ ರಂಗಭೂಮಿ ದಿನಾಚರಣೆ 

ಧಾರವಾಡ 28: ಸರ್ವಕಾಲಕ್ಕೂ ಬೀದಿ ನಾಟಕಗಳು ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ದಿಶೆಯಲ್ಲಿ 70ರ ದಶಕದಲ್ಲಿ ಕಲೆಗಾಗಿ ಕಲೆ ಅಲ್ಲ, ಬದುಕಿಗಾಗಿ ಕಲೆ ಎಂಬ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಬೀದಿ ನಾಟಕಗಳು, ಜಾಥಾಗಳು, ರಂಗನಾಟಕಗಳು, ಕಾಲಕಾಲಕ್ಕೆ ಪ್ರಭುತ್ವವನ್ನು ಎಚ್ಚರಗೊಳಿಸುತ್ತಾ ಬಂದಿವೆ. ಮನುಕುಲದ ಅಳಿವು, ಮಾನವನ ಮೌಲ್ಯಗಳು ಹಾಗೂ ಸಂಬಂಧಗಳು ಹಾಳಾಗದಂತೆ ಮತ್ತೆ ನಾವು ಸಮಾಜವನ್ನು ಕಟ್ಟಬೇಕಾಗಿದೆ. ಆ ನಿಟ್ಟಿನಲ್ಲಿ ಸಮುದಾಯ ಧಾರವಾಡ ನಮ್ಮೆಲ್ಲರ ಮನಸ್ಸನ್ನು ಕಟ್ಟುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿದೆ.  ಕಟ್ಟುತ್ತೆವೆ ನಾವು ಕಟ್ಟತ್ತೇವ, ಕಟ್ಟೆ ಕಟ್ಟತ್ತೇವ ಹಾಡನ್ನು ಹಾಡುವುದರ ಮೂಲಕ ಸಂಬಂಧಗಳನ್ನು ಬೆಸೆಯುವ ನಾಡನ್ನು ಕಟ್ಟಲು ನಾವು ರಂಗಭೂಮಿಯನ್ನು ಮತ್ತಷ್ಟು ಸಿದ್ಧಗೊಳಿಸಬೇಕಾಗಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು. 

27 ಮಾರ್ಚ 2025 ರಂದು ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಹಾಗೂ ಸಮುದಾಯ, ಧಾರವಾಡ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ನಡೆದ ಬೀದಿ ನಾಟಕ ಪ್ರದರ್ಶನ, ಪ್ರಾತ್ಯಕ್ಷಿತೆ, ವಿಶ್ವ ರಂಗಭೂಮಿ ಸಂದೇಶ, ರಂಗ ಗೀತೆಗಳು, ರಂಗ ಗೌರವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಬೆಳಿಗ್ಗೆ ಬೀದಿ ನಾಟಕ ತರಬೇತಿಗೆ ಹಿರಿಯ ಹೋರಾಟಗಾರರಾದ ಬಿ.ಎಸ್‌. ಸೊಪ್ಪಿನ ಅವರು ಚಾಲನೆ ನೀಡಿದರು. ಜೋಸೆಫ್ ಮಲ್ಲಾಡಿ ಅವರ ನಿರ್ದೇಶನದ "ನಾವು ದೊಡ್ಡ ಮಂದಿ" ಬೀದಿ ನಾಟಕ ಪ್ರದರ್ಶನ ನಡೆಯಿತು.  

ಮೈಸೂರು ಆಕಾಶವಾಣಿ ಹಿರಿಯ ಉದ್ಘೋಷಕರಾದ ಪ್ರಭುಸ್ವಾಮಿ ಮಳಿಮಠ, ಜಿಲ್ಲಾ ಕಸಾಪ ಅಧ್ಯಕ್ಷ ಡಾ, ಲಿಂಗರಾಜ ಅಂಗಡಿ ಮಾತನಾಡಿದರು. ಡಾ. ಶಿವಾನಂದ ಶೆಟ್ಟರವರು ವಿಶ್ವ ರಂಗಭೂಮಿ ಸಂದೇಶವನ್ನು ಓದಿದರು, ಸಮುದಾಯ ಅಧ್ಯಕ್ಷ ಬಿ.ಐ. ಈಳಿಗೇರ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಸದಸ್ಯರಾದ ಗಾಯತ್ರಿ ಹಡಪದ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಂಗಕರ್ಮಿಗಳಾದ ನಿಂಗಣ್ಣ ಕುಂಟಿ, ಡಾ. ಶಶಿಧರ ನರೇಂದ್ರ, ಸಿದ್ಧರಾಮ ಹಿಪ್ಪರಗಿ, ಭೀಮಸೇನ ಕಾಗಿ, ಪ್ರಮೋದ್ ಎಸ್ ನಿಂಬಾಳ್ಕರ, ಸುನೀಲ ಪತ್ರಿ, ಸುನಂದಾ ನಿಂಬನಗೌಡ, ಕಾವ್ಯ. ರಾಘವೇಂದ್ರ ರಾವ್, ಬಸವರಾಜ  ಮಲ್ಲಾಪೂರಮಠ ಅವರುಗಳಿಗೆ ರಂಗಗೌರವ ನೀಡಲಾಯಿತು. 

ಜೋಸೆಫ್ ಮಲ್ಲಾಡಿ, ಡಾ. ಪ್ರತಾಪ ಬಹುರೂಪಿ, ಗಂಗಾಧರ ಗಾಡದ, ಎನ್‌.ಎಂ. ಪಾಟೀಲ, ಮಹೇಶ ಪತ್ತಾರ, ಭೀಮನಗೌಡ ಕಟಾವಿ, ವೀರಣ್ಣ ಹೊಸಮನಿ, ಬಿಕ್ಷಾವರ್ತಿಮಠ, ಅನ್ನಪೂರ್ಣ ಮಡಿವಾಳರ, ಭೂಮಿ ಪತ್ತಾರ, ಪ್ರಮೀಳಾ ಜಕ್ಕಣ್ಣವಾರ, ಐಶ್ವರ್ಯ ತಾಂಬೆ ಮುಂತಾದವರು ಉಪಸ್ಥಿತರಿದ್ದರು.