ಬೆಳಗಾವಿ 19: ದಿ. 18 ರಂದು ಬೆಳಗಾವಿ ಜಿಲ್ಲೆ, ಗೋಕಾಕ ತಾಲೂಕ ಅಕ್ಕತಂಗೇಯರಹಾಳ ಗ್ರಾಮದಲ್ಲಿ ಕರ್ನಾಟಕ ರಾಜ್ಯ ವೃತ್ತಿಪರ ಸಮಾಜ ಕಾರ್ಯಕರ್ತರ ಕಲ್ಯಾಣ ಸಂಘ (ರಿ) ಬೆಳಗಾವಿ ಜಿಲ್ಲಾ ಘಟಕ ವತಿಯಿಂದ ವಿಶ್ವ ಸಮಾಜ ಕಾರ್ಯ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಆಚರಿಸಲಾಯಿತು.
ಭಾರತದಲ್ಲಿ ಸಮಾಜ ಕಾರ್ಯಕರ್ತರ ಪಾತ್ರ ಮತ್ತು ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ ಅರಿವಿನ ಕೊರತೆಯಿದೆ ಇದು ನೀತಿ ಬದಲಾವಣೆಗಳು ಮತ್ತು ಸಾಮಾಜಿಕ ಸುಧಾರಣೆಗಳಿಗಾಗಿ ಪರಿಣಾಮಕಾರಿಯಾಗಿ ವಕಾಲತ್ತು ವಹಿಸುವ ಅವರ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ. ಈ ಸವಾಲುಗಳನ್ನು ಪರಿಹರಿಸಲು ಸರ್ಕಾರ ಮತ್ತು ನಾಗರೀಕ ಸಮಾಜದಿಂದ ಸಾಮಾಜಿಕ ಕಾರ್ಯದ ಮಹತ್ವವನ್ನು ಗುರುತಿಸಲು ಸಾಕಷ್ಟು ತರಬೇತಿ ನೀಡಲು, ಸಂಪನ್ಮೂಲಗಳನ್ನು ಸುಧಾರಿಸಲು ಮತ್ತು ಸಮಾಜಕಾರ್ಯಕರ್ತರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸಿಕೊಳ್ಳಲು ಸಂಘಟಿತ ಪ್ರಯತ್ನದ ಅಗತ್ಯವಿದೆ. ಭಾರತದ ಸಮಾಜಸೇವೆ ಶ್ರೀಮಂತ ಸಂಪ್ರದಾಯವನ್ನು ಹೊಂದಿದ್ದು, ಹಲವಾರು ವೃತ್ತಿಪರರು ಮತ್ತು ಸಂಸ್ಥೆಗಳು ವಿವಿಧ ಸಾಮಾಜಿಕ ಸವಾಲುಗಳನ್ನು ಪರಿಹರಿಸಲು ಮೀಸಲಾಗಿವೆ. ಹಾಗೆಯೇ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ವೃತ್ತಿಪರ ಸಮಾಜ ಕಾರ್ಯಕರ್ತರ ಕಲ್ಯಾಣ ಸಂಘವು ಅಸ್ತಿತ್ವದಲ್ಲಿದ್ದು ವೃತ್ತಿಪರ ಸಮಾಜಕಾರ್ಯಕರ್ತರ ಕಲ್ಯಾಣಕ್ಕಾಗಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸಲು ದುಡಿಯುತ್ತಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೃತ್ತಿಪರ ಸಮಾಜ ಕಾರ್ಯಕರ್ತರ ಕಲ್ಯಾಣ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷರಾದ ವೀರಭದ್ರಗೌಡ ಹೊಳೆಯಾಚಿ, ಗೋಕಾಕ ತಾಲೂಕ ಅಧ್ಯಕ್ಷರಾದ ಆನಂದ ನಿರ್ವಾಣಿ, ಬಸವರಾಜ್ ಮರಲಿಂಗಣ್ಣನವರ, ಸಂಜು ಪಂಗಣ್ಣವರ, ಬಾಳಗೌಡ ಪಾಟೀಲ ಮತ್ತು ಇತರ ಸಮಾಜ ಕಾರ್ಯಕರ್ತರು ಉಪಸ್ಥಿತರಿದ್ದರು. ಮತ್ತು ಅತಿಥಿಗಳಾಗಿ ಅಡವಿ ಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಅಂಕಲಗಿಯ ಪ್ರಾಂಶುಪಾಲರಾದ ಎಂ ಎನ್ ಮಾವಿನಕಟ್ಟಿ. ಬಸನಗೌಡ ನಿರ್ವಾಣಿ ಮತ್ತು ಗುಂಡು ಶೆಟ್ಟಣ್ಣನವರ ಇತರರು ಉಪಸ್ಥಿತರಿದ್ದರು.