ಬೆಂಗಳೂರು, ಮೇ 12,ವಿಶ್ವ ದಾದಿಯರ ದಿನದ ಅಂಗವಾಗಿ ನರ್ಸ್‌ಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶುಭ ಕೋರಿದ್ದಾರೆ. ಕೊರೋನಾ ಸೋಂಕಿನ ಬಿಕ್ಕಟ್ಟು ವಿಶ್ವವ್ಯಾಪಿಯಾಗಿರುವ ಈ ಸಂದರ್ಭದಲ್ಲಿ ಸೇವಾ ಮನೋಭಾವ ಎಂದರೇನು ಎಂಬ ಅರಿವು ಮೂಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನ ಇಂದು. ಆರೋಗ್ಯ ರಕ್ಷಕಿಯರಾದ ದಾದಿಗಳನ್ನು ಫ್ಲಾರೆನ್ಸ್ ನೈಟಿಂಗೇಲ್ ಅವರಜನ್ಮ ದ್ವಿಶತಮಾನೋತ್ಸವದ ಈ ದಿನ ಸ್ಮರಿಸಲೇಬೇಕು.ಮಾನವೀಯ ಅನುಕಂಪ, ಸೇವಾ ಮನೋಭಾವದ ಹಾದಿಯಲ್ಲಿ ದೇವರನ್ನು ಕಾಣುವ, ಮಾನವ ಕುಲವನ್ನು ಸಲಹುತ್ತಿರುವ, ಕೊರೋನಾ ವಿಪ್ಲವದ ಸಮಯದಲ್ಲೂ ತನ್ನ ಜೀವದ ಹಂಗನ್ನು ತೊರೆದು ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರಿಗೂ ಅಂತಾರಾಷ್ಟ್ರೀಯ ದಾದಿಯರ ದಿನದ ಶುಭಾಶಯಗಳು.ಆರೋಗ್ಯ ರಂಗದ ನಿಸ್ವಾರ್ಥ ಸೇವಕಿಯರನ್ನು ಸದಾ ಗೌರವಿಸೋಣ. ಒತ್ತಡದ ಮಧ್ಯೆಯೂ ನಿಷ್ಕಲ್ಮಷವಾಗಿ ಸೇವೆ ಸಲ್ಲಿಸುವ ದಾದಿಯರಿಗೆ ಬೆನ್ನೆಲುಬಾಗಿ ನಿಲ್ಲೋಣ ಎಂದು ರಮೇಶ್ ಜಾರಕಿಹೊಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ನರ್ಸ್ ಮತ್ತು ದಾದಿಯರಿಗೆ ಅಂತಾರಾಷ್ಟ್ರೀಯ ಶುಶ್ರೂಷಕರ ದಿನದ ಅಭಿಮಾನಪೂರ್ವಕ ಶುಭಾಶಯಗಳು. ಕೋವಿಡ್ 19 ಬಿಕ್ಕಟ್ಟಿನ ಸಮಯದಲ್ಲಿ ಫ್ರಂಟ್ ಲೈನ್ ನಲ್ಲಿದ್ದು ದುಡಿಯುತ್ತಿರುವ ನಮ್ಮ ವೈದ್ಯರ, ನರ್ಸ್ ಗಳ, ಆರೋಗ್ಯ ಸಿಬ್ಬಂದಿಗಳ ನಿರಂತರ ಪರಿಶ್ರಮಗಳಿಗೆ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.