ಬೆಂಗಳೂರು, ಮೇ 10 ,ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿಶ್ವ ತಾಯಂದಿರ ದಿನಕ್ಕೆ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ.ಇಂದು ವಿಶ್ವ ತಾಯಂದಿರ ದಿನ. ನನ್ನ ಕೇಳಿದರೆ ಪ್ರತಿದಿನವೂ ತಾಯಂದಿರಿಗೇ ಸೇರಬೇಕು. ತಾಯಿ ಸೃಷ್ಟಿಯ ಮೂಲಸ್ವರೂಪ. ತಾಯಿಗೆ ನಮ್ಮ ಸಂಸ್ಕೃತಿಯಲ್ಲಿ ಅತ್ಯುಚ್ಛ ಸ್ಥಾನವಿದೆ.ಗುರು-ಹಿರಿಯರ ಗೌರವಿಸುವ ಹಾಗೂ ತಂದೆ-ತಾಯಂದಿರ ಸೇವೆ ಮಾಡುವ ಸಂಸ್ಕಾರ ಭಾರತೀಯರಾದ ನಮ್ಮೆಲ್ಲರ ರಕ್ತದಲ್ಲಿಯೇ ಇದೆ.ಮಾತೃ ದೇವೋಭವ|| ಪಿತೃ ದೇವೋಭವ|| ಆಚಾರ್ಯ(ಗುರು) ದೇವೋಭವ|| ಅತಿಥಿ ದೇವೋಭವ||ಚಿಕ್ಕಂದಿನಿಂದಲೂ ನಾವೆಲ್ಲ ಇಂಥ ಮಂತ್ರೋಕ್ತಿಯನ್ನು ಆಲಿಸುತ್ತ ಬೆಳೆಯುತ್ತೇವೆ. ಮಾತಾ ಪ್ರತ್ಯಕ್ಷ ದೇವತಾ. ಅದೇನೇ ಕಷ್ಟ ಇದ್ದರೂ ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹುವ ಅಮ್ಮನೇ ಪ್ರತ್ಯಕ್ಷ ದೇವರು. ಜನ್ಮ ನೀಡಿದವರ ಸೇವೆ ಮಾಡಿ. ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ.ಇಂದು ವಿಶ್ವ ತಾಯಂದಿರ ದಿನ ಎಂದು ನಮ್ಮವರೊಬ್ಬರು ನೆನಪಿಸಿದರು. ಅಮ್ಮನ ನೆನಪು ಕಾಡಿತು. ನಾವು ನಾಲ್ವರು ಅಣ್ಞತಮ್ಮಂದಿರು ಮತ್ತು ಇಬ್ಬರು ಸಹೋದರಿಯರು. ನಮ್ಮ ದುರದೃಷ್ಟಕ್ಕೆ ನಾವೆಲ್ಲ ಚಿಕ್ಕವರಿದ್ದಾಗಲೇ ಅಪ್ಪ ಕಾಲವಾದರು. ನನಗಾಗ 12 ವರ್ಷ. ಎಲ್ಲ ಜವಾಬ್ಬಾರಿಯೂ ಅಮ್ಮನ ಮೇಲೆಯೇ. ನಮ್ಮನ್ನೆಲ್ಲ ದಡ ಮುಟ್ಟಿಸಲು ನಮ್ಮಮ್ಮ ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಅದೆಷ್ಟೋ. ತಾನೆಷ್ಟು ದಿನ ಉಪವಾಸ ಮಲಗಿದಳೋ. ಆದರೆ ಮಕ್ಕಳನ್ನೆಲ್ಲ ಹೊಟ್ಟೆತುಂಬಿಸಿ ಮಲಗಿಸಿದಳು. ಅಪ್ಪನ ಕೊರತೆಯ ನೀಗಿಸಲು ಹೆಣಗಿದಳು. ಮಕ್ಕಳನ್ನ ಖುಷಿಯಿಂದ ಸುಖದಿಂದ ಬೆಳೆಸಲು ಜೀವ ಸವೆಸಿದಳು. ನಾಲ್ಕು ಜನಕ್ಕೆ ಉಪಯೋಗ ಅಗುವ ಹಾಗೆ ಬದುಕಿ ಎಂಬ ಸಂಸ್ಕಾರ ಕಲಿಸಿದಳು. ಅಂದಹಾಗೆ ನಮ್ಮಮ್ಮನ ಹೆಸರು ಕಮಲ. ಕೆಸರಿನಲಿ (ಕಷ್ಟದಲ್ಲಿ) ಅರಳಿದ ಕಮಲ ತನ್ನ ಮಕ್ಕಳ ಭವಿಷ್ಯ ಅರಳಿಸಲು ಪಟ್ಟ ಪಾಡು ದೇವರೇ ಬಲ್ಲ. ಏಳೇಳು ಜನ್ಮತಾಳಿದರೂ ಅಮ್ಮನ ಋಣ ತೀರಿಸಲಾಗದು. 92 ವರ್ಷದ ಸಾರ್ಥಕ ಬದುಕು ನಡೆಸಿದ ಅಮ್ಮ ನಮ್ಮನ್ನಗಲಿ 2 ವರ್ಷದ ಮೇಲಾಯಿತು. ಅಮ್ಮಾ ಮತ್ತೆ ಹುಟ್ಟಿಬಾ ಎಂದು ಸಚಿವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಮಾತ್ರವಲ್ಲ ಅಮ್ಮನೊಂದಿಗೆ ಇರುವ ಭಾವಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ.