'ಒಗ್ಗಟ್ಟಿನಿಂದ ಹೋರಾಡಿ' ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕರ ಕರೆ

ಜಿನೆವಾ, ಮಾ 27,ವಿಶ್ವಾದ್ಯಂತ ವ್ಯಾಪಿಸುತ್ತಿರುವ ಕೊರೋನಾ ವೈರಸ್ ತಡೆಯಲು ಒಗ್ಗಟ್ಟಿನಿಂದ ಹೋರಾಡಬೇಕು(ಫೈಟ್, ಯುನೈಟ್ ಆ್ಯಂಡ್ ಇಗ್ನೈಟ್) ಎಂದು ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅದಾನೋಮ್ ಘೆಬ್ರೆಯೆಸಸ್ ಕರೆ ನೀಡಿದ್ದಾರೆ. ಕೋವಿಡ್ -19 ವಿರುದ್ಧದ ಹೋರಾಟದ ಕುರಿತು ಜಿ20 ನಾಯಕರ ವಿಶೇಷ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,  'ಈ ಸಮಯದ ಆರೋಗ್ಯ ಸಂಕಷ್ಟವನ್ನು ಎದುರಿಸಲು ಎಲ್ಲರೂ ಒಟ್ಟಾಗಬೇಕು. ಈಗ ನಾವು, ಅವಕಾಶ ನೀಡಿದರೆ, ನಮ್ಮನ್ನು ಹರಿದು ಎಸೆಯುವ ಬೆದರಿಕೆ ಹಾಕುತ್ತಿರುವ ವೈರಸ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ' ಎಂದಿದ್ದಾರೆ.ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಇದಕ್ಕೆ ಜಾಗತಿಕ ಪ್ರತಿಕ್ರಿಯೆಯ ಅಗತ್ಯವಿದೆ. ಎಲ್ಲರೂ ಒಗ್ಗಟ್ಟಾಗಿ, ಹೋರಾಡಬೇಕು. ಈ ಸಂಬಂಧ ಜಾಗತಿಕ ಅಭಿಯಾನಕ್ಕೆ ಚಾಲನೆ ನೀಡಬೇಕು ಎಂದು ಸಲಹೆ ನೀಡಿದರು.ನಾಯಕರು ಯಾವುದೇ ಕಾರಣ ನೀಡದೆ ಹೋರಾಟ ಮಾಡಬೇಕು ಎಂದಿರುವ ಡಾ.ಟೆಡ್ರೋಸ್, ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಂಡಿರುವ ದೇಶಗಳನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಜಿ 20 ಸದಸ್ಯರು ಒಟ್ಟಾಗಿ ಕೆಲಸ ಮಾಡಿ, ಲಸಿಕೆ ಹಾಗೂ ಔಷಧಗಳ ಸಂಶೋಧನೆ ಮತ್ತು ಹಣ ಸಂಗ್ರಹ, ಅಂತಾರಾಷ್ಟ್ರೀಯ ವೈಜ್ಞಾನಿಕ ಸಹಕಾರವನ್ನು ಬಲಗೊಳಿಸುವುದು ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಬಲಗೊಳಿಸುವ ನಿಟ್ಟಿನಲ್ಲಿ ಜಿ 20 ನಾಯಕರು ಬದ್ಧತೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.