ಬೆಂಗಳೂರು, ಜೂ 4,ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಗಿಡ ನೆಟ್ಟು ಪರಿಸರವನ್ನು ಹಸರೀಕರಣಗೊಳಿಸುವ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಸಂಸ್ಥೆ ನಗರದಲ್ಲಿಂದು ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಂಡಿತ್ತು.ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಸಸ್ಯಕಾಶಿ ಲಾಲ್ ಭಾಗ್ ದ್ವಾರದ ಮುಂದೆ ಸಾರ್ವಜನಿಕರಿಗೆ ಉಚಿತವಾಗಿ 500 ಗಿಡಗಳನ್ನು ವಿತರಣೆ ಮಾಡಲಾಯಿತು. ಪಾಲಿಕೆ ಸದಸ್ಯ ಎನ್. ನಾಗರಾಜ್ ಹಾಗೂ ಸಮಗ್ರಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ. ಸ್ನೇಹ ರಾಕೇಶ್ ಗಿಡಗಳನ್ನು ವಿತರಿಸಿ ಪರಿಸರ ಸಂರಕ್ಷಣೆ ಮಾಡುವಂತೆ ಕರೆ ನೀಡಿದರು. ಬಳಿಕ ಎನ್. ನಾಗರಾಜ್ ಮಾತನಾಡಿ, ಪರಿಸರ ಮಲೀನಗೊಳ್ಳುತ್ತಿರುವುದರಿಂದ ಜಗತ್ತಿನಾದ್ಯಂತ ಹಲವಾರು ರೋಗಗಳು ಹುಟ್ಟಿಕೊಳ್ಳುತ್ತಿವೆ. ಇದರಲ್ಲಿ ಕೋವಿಡ್ 19 ಸೋಂಕು ಸಹ ಒಂದು. ನಾವು ಪರಿಸರವನ್ನು ಇದೇ ರೀತಿ ನಿರ್ಲಕ್ಷಿಸಿದರೆ ಮುಂದೆ ಇಂತಹ ಇನ್ನೂ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಕೋವಿಡ್ 19 ಸೋಂಕಿನಿಂದ ಹೊರಬರಲು ನಮ್ಮ ಶ್ವಾಸಕೋಶ ಬಲಗೊಳ್ಳಬೇಕು. ಆರೋಗ್ಯ ತಜ್ಞರ ಪ್ರಕಾರ ಹಸಿರು ಹೆಚ್ಚಾಗಿರುವ ಕಡೆಗಳಲ್ಲಿ ಸೋಂಕು ಕಡಿಮೆ ಇದೆ. ಸೋಂಕಿನಿಂದ ಹೊರಬರಲು ನಮ್ಮ ಶ್ವಾಸಕೋಶ ಬಲಗೊಳ್ಳಬೇಕು. ಇದಕ್ಕಾಗಿ ಗಿಡನೆಟ್ಟು ಸ್ವಚ್ಛ ಪರಿಸರ ಕಾಯ್ದುಕೊಳ್ಳುವುದೇ ಸೂಕ್ತ ಮಾರ್ಗ ಎಂದು ಸಲಹೆ ಮಾಡಿದರು. ಸಮಗ್ರಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ. ಸ್ನೇಹ ರಾಕೇಶ್ ಮಾತನಾಡಿ, ಮುಂದಿನ ಪೀಳಿಗೆಗಾಗಿ ಪರಿಸರ ರಕ್ಷಿಸಲು ಒಂದು ಸಣ್ಣ ಅರ್ಥಪೂರ್ಣ ಕೆಲಸ ಸಾಕು. ಪ್ರಕೃತಿ ಮಾತೆಗೆ ಗೌರವ ಸಲ್ಲಿಸುವ ದಿನವೇ ವಿಶ್ವ ಪರಿಸರ ದಿನ.. ನಮ್ಮ ಬದುಕಿಗಾಗಿ, ಪ್ರಕೃತಿಯ ಉಳಿವಿಗಾಗಿ ಎಲ್ಲರೂ ಗಿಡ ನೆಡಬೇಕು. ಹಸಿರು ಇಲ್ಲದ ನಾಡು ಉಸಿರು ಇಲ್ಲದ ನಿರ್ಜೀವ ದೇಹವಿದ್ದಂತೆ ಎಂದರು. ಒಂದು ಗಿಡ ಹಲವು ಮಂದಿಗೆ ಆಮ್ಲಜನಕ ನೀಡುತ್ತದೆ. ಹಸಿರು ಕಣ್ಣಿಗೆ ಮುದ ಕೊಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತದೆ. ಮರಗಳನ್ನ ಮಕ್ಕಳಂತೆ ಸಾಕಿ ಸಲುಹಿದ ಸಾಲುಮರದ ತಿಮ್ಮಕ್ಕ ನಮಗೆ ಸ್ಪೂರ್ತಿ. ಅವರ ಪರಿಸರ ಪ್ರೇಮ ನಮ್ಮ ಬದುಕಿಗೆ ಪ್ರೇರಣೆ ನೀಡಲಿ ಎಂದರು.