ನವದೆಹಲಿ, ಜ18, ದಾವೋಸ್ ನಲ್ಲಿ ಜ 20ರಿಂದ 24ರವರೆಗೆ ನಡೆಯುವ 50ನೇ ವಿಶ್ವ ಆರ್ಥಿಕ ಒಕ್ಕೂಟ(ಡಬ್ಲ್ಯೂಇಎಫ್)ನ 50ನೇ ಸಮಾವೇಶದಲ್ಲಿ ಭಾಗವಹಿಸಲು ತೆರಳುವ ಭಾರತೀಯ ನಿಯೋಗದ ನೇತೃತ್ವವವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಹಿಸಲಿದ್ದಾರೆ. ಭೇಟಿಯ ವೇಳೆ ಸಚಿವರು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ರಷ್ಯಾ, ಸೌದಿ ಅರೇಬಿಯಾ, ಸ್ವಿಟ್ಜರ್ ಲ್ಯಾಂಡ್, ಕೊರಿಯಾ ಮತ್ತು ಸಿಂಗಪುರ ದೇಶಗಳ ವಾಣಿಜ್ಯ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಅಲ್ಲದೆ, ಅವರು ವಿಶ್ವ ವಾಣಿಜ್ಯ ಸಂಸ್ಥೆಯ ಮಹಾ ನಿರ್ದೇಶಕರು ಹಾಗೂ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(ಒಇಸಿಡಿ) ನಿರ್ದೇಶಕರನ್ನೂ ಸಹ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಇದಲ್ಲದೆ ಗೋಯಲ್ ಅವರು ವಿವಿಧ ಕಂಪೆನಿಗಳ ಸಿಇಒಗಳ ಜೊತೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದು, ವಿಶ್ವ ಆರ್ಥಿಕ ಒಕ್ಕೂಟದ ಅಧಿವೇಶನಗಳಲ್ಲಿ ಮತ್ತು ಭಾರತೀಯ ರೈಲ್ವೆಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ದುಂಡು ಮೇಜಿನ ಸಭೆಗಳಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಪ್ರಕಟಣೆ ತಿಳಿಸಿದೆ.
ವಾಣಿಜ್ಯ ಮತ್ತು ಕೈಗಾರಿಕೆಗೆ ಸಂಬಂಧಿಸಿದ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳನ್ನು ಚರ್ಚಿಸಲು ವಿಶ್ವದ ಉನ್ನತ ನಾಯಕರು ವಾರ್ಷಿಕ ವಿಶ್ವ ಆರ್ಥಿಕ ಒಕ್ಕೂಟದ ಸಭೆಯಲ್ಲಿ ಸೇರುತ್ತಿದ್ದಾರೆ. ‘ಸುಸ್ಥಿರ ವಿಶ್ವಕ್ಕಾಗಿ ಭಾಗೀದಾರರ ಪಾತ್ರ’ ಎಂಬುದು ಸಮಾವೇಶದ ಈ ಬಾರಿಯ ಘೋಷವಾಕ್ಯವಾಗಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್‍ಸುಖ್ ಎಲ್ ಮಾಂಡವೀಯ, ಕರ್ನಾಟಕ, ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಸಹ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.