ಬಾಗಲಕೋಟೆ 03: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ “ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನಿಸರಿಸೋಣ, ನನ್ನ ಆರೋಗ್ಯ ನನ್ನ ಹಕ್ಕು” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಜಂಟಿಯಾಗಿ ಚಾಲನೆ ನೀಡಿದರು.
ಮಂಗಳವಾರ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ನಡೆದ ಜಾಗೃತಿ ಜಾಥಾ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ನಾನಾ ಕಡೆ ಸಂಚರಿಸಿ ಜಿಲ್ಲಾ ಆಸ್ಪತ್ರೆಗೆ ಮುಕ್ತಾಯಗೊಂಡಿತು.
ಥಾದಲ್ಲಿ ಬಸವೇಶ್ವರ ಹೋಮಿಯೋಪತಿಕ್, ಆಯುರ್ವೆದಿಕ್, ನರ್ಸಿಂಗ್ ಮಹಾವಿದ್ಯಾಲಯ, ಹಾನಗಲ್ಲ ಕುಮಾರೇಶ್ವರ ಓಷಧ ವಿಜ್ಞಾನ ಮಹಾವಿದ್ಯಾಲಯ, ಪ್ಯಾರಾ ಮೆಡಿಕಲ್, ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ, ಪಿ.ಎಂ.ಎನ್ ದಂತ ವೈದ್ಯಕೀಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಪಾಲ್ಗೊಂಡು ಜಾಥಾದುದ್ದಕ್ಕೂ ಜಾಗೃತಿಯ ಘೋಷಣೆಗಳನ್ನು ಕೂಗಿದರು. ಏಡ್ಸ್ ಕುರಿತು ಅರಿವಿರಲಿ, ಜೀವನದಲ್ಲಿ ಗೆಲುವು ಇರಲಿ, ಏಡ್ಸ ಒಂದು ಮಹಾಮಾರಿ, ಅದಕ್ಕೆ ತೋರಿಸಿ ಕೊನೆಯ ದಾರಿ, ಏಡ್ಸ್ ಅಳಿಯಿರಿ, ಜೀವ ಉಳಿಯಲಿ, ಎಲ್ಲರೂ ಸಂಕಲ್ಪ ಮಾಡೋಣ, ಎಚ್.ಐ.ವಿ ಸೋಂಕನ್ನು ಸೊಣ್ಣೆಗೆ ತರುವಲ್ಲಿ ಶ್ರಮಿಶೋಣ ಎಂಬ ಘೋಷವಾಕ್ಯಗಳನ್ನು ಕೂಗಿದರು.
ಜಾಥಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾನಾಧಿಕಾರಿ ಡಾ.ಸುವರ್ಣ ಕುಲಕರ್ಣಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಲಾ ಶಿನ್ನೂರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಕಾಂತ ಹಡಲಗೇರಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಬಿ.ಎಲ್.ಹೊಸಳ್ಳಿ ಸೇರಿದಂತೆ ಆಯಾ ಕಾಲೇಜಿನ ಉಪನ್ಯಾಸಕರು ಪಾಲ್ಗೊಂಡಿದ್ದರು.