ಬೆಂಗಳೂರು, ಏ 3,ಪ್ರಸಕ್ತ ಸಾಲಿನ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬೆಲ್ ರೇಸ್ ಟಿಸಿಎಸ್ ವಿಶ್ವ 10ಕೆ ಬೆಂಗಳೂರು 13ನೇ ಆವೃತ್ತಿಯು ಸೆಪ್ಟೆಂಬರ್ 13ರಂದು ನಡೆಯಲಿದೆ ಎಂದು ಪ್ರೊಕ್ಯಾಮ್ ಇಂಟರ್ ನ್ಯಾಷನಲ್ ಶುಕ್ರವಾರ ಪ್ರಕಟಿಸಿದೆ. ಟಿಸಿಎಸ್ ವಿಶ್ವ 10 ಕೆ ಬೆಂಗಳೂರು ಈ ಮೊದಲು ಮೇ 17ರಂದು ನಿಗದಿಯಾಗಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರೇಸನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿತ್ತು. ರೇಸ್ ನ ಪರಿಷ್ಕೃತ ಆನ್ ಲೈನ್ ನೋಂದಣಿಯನ್ನು https://tcsworld10k.procam.in 2020ರ ಜುಲೈ 2ರಿಂದ ಆರಂಭಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಈಗಾಗಲೇ ರೇಸ್ ಗೆ ಹೆಸರು ನೋಂದಾಯಿಸಿಕೊಂಡಿರುವ ಉತ್ಸಾಹಿ ಓಟಗಾರರು ಇತರ ಯಾವುದೇ ಶುಲ್ಕವಿಲ್ಲದೆ ಸೆಪ್ಟೆಂಬರ್ 13ರಂದು ನಡೆಯಲಿರುವ ರೇಸ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಂದು ವೇಳೆ ಈ ರೇಸ್ ನಲ್ಲಿ ಪಾಲ್ಗೊಳ್ಳಲಾಗದಿದ್ದವರು ಮೇ 12ರಿಂದ 29ರವರೆಗೆ ಸಂಘಟಕರಿಗೆ ಪ್ರವೇಶವನ್ನು ಶರಣಾಗತಿ ಮಾಡಿ ಪಾವತಿಯನ್ನು ಹಿಂಪಡೆಯಬಹುದಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.