ದೇಶಿ ತಳಿ ಉಳಿಸಿ ಬೆಳೆಸುವ ಕಾರ್ಯವಾಗಲಿ : ಕಳ್ಳೇನ್ನವರ

Workshop on Conservation and Promotion of Indigenous Breeds

ದೇಶಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕುರಿತು ಕಾರ್ಯಾಗಾರ  

ಬಾಗಲಕೋಟೆ : ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶ ಹೊಂದಿರುವ ದೇಶಿ ತಳಿಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಹೇಳಿದರು. 

ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ದೇಶಿ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ ಕಾರ್ಯಕ್ರಮದಡಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಮಾನಗಳಲ್ಲಿ ಗುಣಮಟ್ಟ, ಮಣ್ಣಿನ ಆರೋಗ್ಯದ ಕಡೆ ಕಾಳಜಿ ವಹಿಸದೇ ಹೆಚ್ಚಿನ ಇಳುವರಿ ಕಡೆ ಒಲವು ತೋರಿಸುತ್ತಿದ್ದಾರೆ. ಕೆಲವೊಂದು ತಳಿಯ ಬೆಳೆಗಳು ಹೆಚ್ಚು ಪೌಷ್ಠಿಕಾಂಶ ಹೊಂದಿರುತ್ತದೆ. ಬಹಳ ದಿನಗಳ ಬಳಕೆಗೆ ಯೋಗ್ಯವಾಗಿರುತ್ತವೆ. ದೇಶಿ ತಳಿಗಳ ಇಳುವರಿ ಕಡಿಮೆ ಇದ್ದರೂ ಹೆಚ್ಚಿನ ಗುಣಮಟ್ಟ ಹೊಂದಿರುತ್ತವೆ ಎಂದರು. 

ನಮ್ಮ ಸಂಸ್ಕೃತಿಯಲ್ಲಿ ಬದಲಾವಣೆ ಆಗುತ್ತಿದ್ದಂತೆ ಆಹಾರ ಪದ್ದತಿಯಲ್ಲಿ ಕೂಡಾ ಬದಲಾವಣೆ ಆಗುತ್ತಿದೆ. ಭೂಮಿಯಲ್ಲಿ ಸಾಕಷ್ಟು ಪೋಷಕಾಂಶ ಇದೆ. ಆದರೆ ರಾಸಾಯನಿಕ ಬಳಕೆಯಿಂದ ಭೂಮಿಯಲ್ಲಿರುವ ಗುಣಮಟ್ಟ ಕಡಿಮೆಯಾಗುತ್ತಿದೆ. ಇದಕ್ಕಾಗಿ ಕೃಷಿ ಇಲಾಖೆ ಸಾಕಷ್ಟು ಸಹಾಯಧನದ ಯೊಜನೆ, ತ್ರಾಂತ್ರಿಕತೆ, ಮೌಲ್ಯವರ್ಧನೆಗಳಂತ ಕಾರ್ಯಕ್ರಮಗಳನ್ನು ರೂಪಿಸಿ ಉತ್ತಮ ಗುಣಮಟ್ಟ ಹೊಂದಿರುವಂತಹ ದೇಶಿ ತಳಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಂಡಿರುವುದಾಗಿ ತಿಳಿಸಿದರು.  

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ತೋವಿವಿಯ ಪ್ರೊ.ಡಾ,ಭವ್ಯ ಎಂ.ಆರ್ ಮಾತನಾಡಿ ಶತ ಶತಮಾನಗಳಿಂದ ಸಾಂಪ್ರದಾಯಕವಾಗಿ ದೇಸಿ ತಳಿಗಳನ್ನು ಉಳಿಸಿಕೊಂಡು ಬಂದಿದ್ದಿರಿ. ಇಂತಹ ತಳಿಗಳ ಸಂರಕ್ಷಣೆ ಹಾಗೂ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸರಕಾರ ರೈತರಿಗೆ ಸಹಾಯಧನ ನೀಡಲು ಮುಂದಾಗಿದೆ. ದೇಶಿ ತಳಿ ಮಹತ್ವ ಅರಿತುಗೊಂಡು ಜೀವಸತ್ವ, ಪೌಷ್ಠಿಕಾಂಶ ಹೆಚ್ಚಿಗೆ ಇರುವ ಈ ತಳಿಗಳನ್ನು ಬಳಕೆ ಮಾಡಬೇಕಿದೆ. ಆಹಾರ ಭದ್ರತೆ ದೃಷ್ಠಿಯಿಂದ ಹೈಬ್ರಡ್ ತಳಿಗಳನ್ನು ತರಲಾಯಿತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಆದ್ದರಿಂದ ಗುಣಮಟ್ಟದ ಬೆಳೆಗಳನ್ನು ಮುಂದಿನ ಪೀಳಿಗೆ ಉಳಿಸಿ ಬೆಳೆಸ ಕಾರ್ಯ ಮಾಡಬೇಕಿದೆ ಎಂದರು. 

ದೇಶಿ ತಳಿಗಳನ್ನು ಬೆಳೆಯುವುದು ಉತ್ತಮವಾಗಿದ್ದು, ನೈಜ ಕೃಷಿ ಪದ್ದತಿ ಒಳವಡಿಸಿಕೊಳ್ಳಬೇಕು. ಸಾವಯವ ಕೃಷಿಯಲ್ಲಿ ವಹಿಸಬೇಕಾದ ಆಧುನಿಕ ಕ್ರಮಗಳನ್ನು ಕಲಿಯಬೇಕು. ತೊಗರಿ, ಕಬ್ಬು, ಶೇಂಗಾ ಬೆಳಗಳನ್ನು ಸಾವಯವ ಪದ್ದತಿಯಲ್ಲಿ ಹೇಗೆ ಬೆಳೆಯಬೇಕು ಎಂಬುದನ್ನು ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ಮಟ್ಟದ ಇಳುವರಿ ಪಡೆಯಲು ಸಹ ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿದ್ದು, ಆಹಾರ ಉತ್ಪನ್ನಗಳ ಬೆಳೆಯುವಲ್ಲಿ ಸಾವಯವ ಗೊಬ್ಬರಗಳ ಬಳಕೆ ಮಾಡುತ್ತಿದ್ದಾರೆ ಎಂದರು. 

ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ತೋವಿವಿಯ ಬೀಜಘಟಕ ವಿಭಾಗದ ಪ್ರೊ.ಡಾ.ಪಲ್ಲವಿ ಮಾತನಾಡಿ ಬಿಸಿಲಿನಲ್ಲಿ ಬೆಳೆಯುವ ತಳಿಗಳು ಬೇರೆ ಹಾಗೂ ಕಡಿಮೆ ಬಿಸಿನಲ್ಲಿ ಬೆಳೆಯುವ ತಳಿಗಳು ಬೇರೆ ಇದ್ದು, ಕಾಲಕ್ಕ ತಕ್ಕಂತೆ ಬೀಜ ಬಿತ್ತನೆ ಮಾಡುವಾಗ ಮಳೆಯ ಆಧಾರ ಮೇಲೆ ತಳಿಗಳನ್ನು ಬಳಸಬೇಕು. ಹೆಚ್ಚು ಆಹಾರ ಉತ್ಪಾದನೆ ಮಾಡಬೇಕಾದರೆ ದೇಶಿ ತಳಿಗಳ ಬಳಕೆ ಮಾಡಬೇಕು. ರೈತರು ಯಾವ ತಳಿಗಳಲ್ಲಿ ಹುಳುಗಳ ಕಾಟ ಇರುವದಿಲ್ಲವೋ ಆ ತಳಿಗಳನ್ನು ತೆಗೆದುಕೊಂಡು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು ಎಂದರು. 

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಎಲ್‌.ಐ.ರೂಢಗಿ, ಸಹಾಯಕ ಕೃಷಿ ನಿರ್ದೇಶಕರಾದ ತಿರಕನ್ನವರ, ಪ್ರೀತಿ ತೇಲಿ, ಜಂಟಿ ಕೃಷಿ ಇಲಾಖೆಯ ವ್ಯವಸ್ಥಾಪಕ ಮಂಜುನಾಥ ಜಂಬಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.  

ಕಾರ್ಯಾಗಾರ ಹಿನ್ನಲೆಯಲ್ಲಿ ದೇಶಿ ತಳಿಗಳ ಬಿತ್ತನೆ ಬೀಜಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಪ್ರದರ್ಶನದಲ್ಲಿ ಜವಾರಿ ಕಡಲೆ, ಸಾಮೆ, ಬರಗು, ಸದಕ, ಕೆಂಪು ಅಕ್ಕಿ, ಕರಿ ಅಕ್ಕಿ, ಗೋವಿನ ಜೋಳ, ಬಿಳಿ ಅವರೆ, ಕೆಂಪು ಹಾಗೂ ಕರಿ ಅವರೆ, ಗುರೆಳ್ಳು, ಹುರಳಿ, ಬಿಳಿಜೋಳ, ಹೆಸರು, ಅಗಸೆ, ಬಿಳಿ ಮತ್ತು ಕೆಂಪು ಎಳ್ಳು, ಕೆಂಪು ಗೋದಿ, ಕರಿ ಬದನೆ, ಕರಿ ಕಡಲೆ, ಕರಿ ಗೋದಿ ಸೇರಿದಂತೆ ಇತರೆ ದೇಶಿ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಪ್ರದರ್ಶನದಲ್ಲಿ 58 ರೈತರು ಪಾಲ್ಗೊಂಡಿದ್ದರು.