ವಿಜಯಪುರ 09: ಸ್ತ್ರೀ-ಹೆಣ್ಣು ಎಂದರೆ ಅಬಲೆ, ಅಶಕ್ತಳು, ಮತ್ತು ಅಸಮರ್ಥಳು ಎಂಬ ಕೀಳರಿಮೆ ಮನೋಭಾವನೆಯಿಂದ ಕಾಣುವ ಪುರುಷ ಸಮಾಜ ಆಕೆಯನ್ನು ‘ ಮಕ್ಕಳು ಹೆರುವ ಯಂತ್ರ’ ವೆಂದೂ. ಕೇವಲ ಮನೆಯ ನಾಲ್ಕು ಗೋಡೆಗಳ ಮಧ್ಯೆ ಜೀವನವನ್ನು ಕಳೆಯುವ ಹಾಗೂ ಯಾವುದೇ ಸ್ವಾತಂತ್ರ್ಯವಿಲ್ಲದೇ ಇನ್ನೊಬ್ಬರಿಗೆ ಪರಾವಲಂಬಿಯಾಗಿ ಬದುಕುವ ಜೀವಿ’ ಎಂಬ ಕಾಲವೊಂದಿತ್ತು. ಇಂದು ಸ್ತ್ರೀ (ಮಹಿಳೆ)ಯು ಬಹಳಷ್ಟು ಬದಲಾಗಿದ್ದಾಳೆ. ಬದಲಾದ ಕಾಲಘಟ್ಟ ಮತ್ತು ಸನ್ನಿವೇಶದಲ್ಲಿ ಸ್ತ್ರೀಯ ಪುರುಷನಿಗೆ ಸರಿಸಾಟಿಯಾಗಬಲ್ಲ ಹಾಗೂ ತನ್ನ ಕಾರ್ಯದಕ್ಷತೆಯಿಂದಲೇ ಪುರುಷನಿಗಿಂತಲೂ ಮಿಗಿಲಾದ ಸಾಧನೆಯನ್ನು ತೋರುತ್ತಿದ್ದಾಳೆ ಎಂದು ವಿಜಯಪುರದ ಎ.ವ್ಹಿ.ಎಸ್. ಆರ್ಯುವೇದ ಕಾಲೇಜಿನ ಪ್ರಾಧ್ಯಾಪಕಿ ಡಾ. ಬಿರಾದಾರ ಹೇಳಿದರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣದ ಘಟಕದಡಿಯಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹೆಣ್ಣು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಮೋಘವಾದ ಸಾಧನೆಗೈದು ಇಡೀ ಪುರುಷ ಪ್ರಧಾನ ಸಮಾಜವು ನಿಬ್ಬೆರಗಾಗುವಂತೆ ಮುನ್ನಡೆಯುತ್ತಿದ್ದಾಳೆ. ಸ್ತ್ರೀಯು ಶಿಕ್ಷಣ, ಕಲೆ, ಸಾಹಿತ್ಯ, ರಂಗಭೂಮಿ, ಸೇನೆ, ವೈದ್ಯಕೀಯ, ಕ್ರೀಡೆ, ರಾಜಕೀಯ, ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆ-ಉದ್ಯಮ ರಂಗಗಳಲ್ಲಿಯೂ ವಿಶೇವವಾದ ಸಾಧನೆ-ಮೈಲುಗಲ್ಲನ್ನು ತೋರಿ ತನ್ನದೇ ಛಾಪು ಮೂಡಿಸಿದ್ದಾಳೆ ಎಂದು ಅವರು ಅಭಿಪ್ರಾಯಪಟ್ಟರು.
ಅವರು ಮಾತನಾಡುತ್ತಾ, “ತೊಟ್ಟಿಲು ತೂಗುವ ಕೈಗಳು ಜಗತ್ತನ್ನೇ ಆಳಬಲ್ಲದು” ಎಂಬ ನಾಣ್ಣುಡಿಯಂತೆ, ಅವಕಾಶಗಳು ಸಿಕ್ಕಾಗಲೆಲ್ಲ ಅವುಗಳನ್ನು ಸದ್ಭಳಕೆ ಮಾಡಿಕೊಂಡು ಸಾಧನೆಯಿಂದಲೇ ಮುನ್ನಡೆಯುತ್ತಿರುವ ಆಕೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಸಾಧಕಿಯೇ ಹೆಣ್ಣು ಎಂದು ಹೇಳಬಹುದು. ಹೆಣ್ಣು ಒಬ್ಬ ಆದರ್ಶ ತಾಯಿ, ಕ್ಷಮಯಾಧರಿತ್ರಿ, ದಯಾಮಯಿ, ಸಹನಾಮೂರ್ತಿ, ಕರುಣಾಮಯಿ, ಸ್ಪೂರ್ತಿಯ ಸೆಲೆ, ಮಮತೆ-ವಾತ್ಸಲ್ಯದ ಮೂರ್ತಿಯಾಗಿ ಪ್ರತಿಯೊಂದು ಮನೆ ಓಳಗೂ ಹೊರಗೂ ದುಡಿದು ಕುಟುಂಬವನ್ನು ಪೋಷಿಸುವ, ಸಲಹುವ ಮತ್ತು ಜವಾಬ್ದಾರಿಯ ನೊಗವನ್ನು ಹೊರಲು ಪತಿಗೆ ಹೆಗಲಿಗೆ ಹೆಗಲು ಕೊಡುವ ಸತಿಯಾಗಿದ್ದಾಳೆ. ಕನ್ನಡದ ಖ್ಯಾತ ಕವಿಯತ್ರಿ ಸಂಚಿ ಹೊನ್ನಮ್ಮ ರವರ ತಮ್ಮ ಕಾವ್ಯದಲ್ಲಿ ಉಲ್ಲೇಖಿಸಿದಂತೆ, “ ಪೆಣ್ಣಲ್ಲವೇ ನಮ್ಮೆಲ್ಲರ ಹಡೆದ ತಾಯಿ, ಪೆಣ್ಣಲ್ಲವೇ ಪೊರೆದವಳು, ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು” ಸ್ತ್ರೀಯ ಮಹತ್ವ ತಿಳಿಸುತ್ತದೆ. ಹೆಣ್ಣಿನ ಶೋಷಣೆ ಸಲ್ಲ. ಅದಕ್ಕಾಗಿ ಹೆಣ್ಣಿನ ಬಗ್ಗೆ ಇರುವ ತಾತ್ಸಾರ, ತಿರಸ್ಕಾರ, ಕೀಳರಿಮೆ ಮನೋಭಾವನೆಯನ್ನು ತಾಳದೇ ಆಕೆಗೂ ಸಮಾನವಾದ ಅವಕಾಶ ನೀಡಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಪಡೆದು ಸಾಧನೆಗೈಯಲು ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಅವರು ಮಾತನಾಡುತ್ತಾ, “ಯತ್ತ ನಾರೇಶು ಪೂಜ್ಯಂತೇ ತತ್ರ ರಮಂತೇ ದೇವತಾಃ” ಎನ್ನುವಂತೆ ಸ್ತ್ರೀಯನ್ನು ಎಲ್ಲಿ ತಾಯಿಯಾಗಿ, ಪೂಜ್ಯನೀಯ, ಗೌರವಯುತ ಭಾವನೆಯಿಂದ ಕಾಣುವರೋ ಅಲ್ಲಿ ಸ್ವತಃ ದೇವತೆಗಳೇ ಬಂದು ನೆಲೆಸುತ್ತಾರೆ” ಎಂಬ ಪ್ರತೀತಿಯಿದೆ. ಹಾಗೆಯೇ ಸ್ತ್ರೀಯನ್ನು ಭಾರತಮಾತೆ, ತಾಯಿ ಭುವನೇಶ್ವರಿ ಎಂತಲೂ ಕರೆಯುವುದರ ಮೂಲಕ ಸ್ತ್ರೀಯನ್ನು ಶ್ರೇಷ್ಠತೆ ಹಾಗೂ ದೇವತೆಗಳ ಸ್ಥಾನಮಾನ ನೀಡಿದ್ದಾರೆ. ಸ್ತ್ರೀ-ಹೆಣ್ಣು (ಮಹಿಳೆ)ಯು ನಮ್ಮ ಭಾವೀ ಸಮಾಜದ ನಿಜವಾದ ಶಿಲ್ಪಿಗಳು ಇದ್ದಂತೆ. ಹೆಣ್ಣೆಂದರೆ ಅದೊಂದು ಅದ್ಭುತ ಶಕ್ತಿ, ವ್ಯಕ್ತಿಯ ಮನ, ಮನೆ ಬೆಳಗುವ ಪ್ರಭೆಯಂತೆ ಇಡೀ ಕುಟುಂಬ ಸದಸ್ಯರು, ಸಮಾಜವನ್ನು ತಿದ್ದಿ-ತೀಡಿ ಸಾಮಾಜಿಕ ಪರಿವರ್ತನೆಯನ್ನು ತರುವಲ್ಲಿ ಆಕೆಯ ಪಾತ್ರ ಅನನ್ಯವಾದುದು ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಪ್ರೊ. ಮಹೇಶ್ವರಿ ಹಿರೇಮಾಠ, ಐ.ಕ್ಯೂ.ಎ.ಸಿ. ಸಂಚಾಲಕ ಪ್ರೊ. ಆರ್.ಎಸ್.ಕುರಿ, ಹಿರಿಯ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಕ್ರೀಡಾ ನಿರ್ದೇಶಕರಾದ ಪ್ರೊ. ಸಂಗಮೇಶ ಗುರವ, ಪ್ರೊ. ವಲ್ಲಭ ಕಬಾಡೆ, ವಿದ್ಯಾರ್ಥಿನಿ ಪ್ರತಿನಿಧಿ ಸುಮಾ ಬಿರಾದಾರ ಇನ್ನಿತರರು ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಡಾ. ರೋಹಿಣಿ ಹಿರೇಶೆಡ್ಡಿ, ಡಾ.ಮಮತಾ ಬನ್ನೂರ, ಡಾ. ದ್ರಾಕ್ಷಾಯಣಿ, ಅಶ್ವೀನಿ ರಾಮಪುರ, ಸರ್ವಶ್ರೀ ಚಟ್ಟೇರ, ರೂಪಾ ಕಮದಾಳ, ರೂಪಾ ಹೂಗಾರ, ಲಲಿತಾ ಬಿ.ಟಿ., ಹದನೂರ, ಅಂಬಿಕಾ ಬಿರಾದಾರ, ಶೋಭಾ ಪವಾರ, ಇನ್ನಿತರರು ಉಪಸ್ಥಿತರಿದ್ದರು.