ಜಗತ್ತಿನ ಇತಿಹಾಸಕ್ಕೆ ಮಹತ್ತರ ಕೊಡುಗೆ ಕೊಟ್ಟ ದೇಶ ನನ್ನದು. ಕತ್ತಲೆಯ ಕೂಪದಲ್ಲಿ ನರಳುತ್ತಿದ್ದ ಮಾನವ ಸಮಾಜಕ್ಕೆ ಭರವಸೆಯ ಬೆಳಕು ಕೊಟ್ಟ ದೇಶ ನನ್ನದು. ಭವಿಷ್ಯದ ಬಗ್ಗೆ ಭರವಸೆ ಇಲ್ಲದೆ ಬದುಕುತ್ತಿದ್ದವರಿಗೆ ಭವಿತವ್ಯದ ನೆನಪು ಮಾಡಿ ಕೊಟ್ಟ ದೇಶ ನನ್ನದು. ಅಜ್ಞಾನದ ಅಂಧಃಕಾರದಲ್ಲಿ ಜಗತ್ತು ನರಳುತ್ತಿದ್ದಾಗ ಅದರಿಂದ ಹೊರ ಬರುವ ದಾರಿ ಕೊಟ್ಟ ದೇಶ ನನ್ನದು. ಮನವನ್ನೆ ಮಸಣವಾಗಿಸಿಕೊಂಡು ಅಲೆಯುತ್ತಿದ್ದ ಮಾನವನಿಗೆ ಆಧ್ಯಾತ್ಮದ ಸುಧೆಯನ್ನು ಉಣಿಸಿದ ದೇಶ ನನ್ನದು. ಭರವಸೆಯ ನಾಳೆಗಳನ್ನು ಕಟ್ಟಿ ಕೊಟ್ಟು ಇತಿಹಾಸದುದ್ದಕ್ಕೂ ಹೊಸ ವಿಚಾರಗಳನ್ನು ನೀಡಿದ ದೇಶ ನನ್ನದು. ಮಂಗನಿಂದ ಮಾನವಾಗುವ ವರೆಗೂ ನಡೆದ ಮನುಕುಲದ ಕಥೆಯಲ್ಲಿ ಅಭಿವೃದ್ಧಿಯ ಪಥ ತೋರಿದ ದೇಶ ನನ್ನದು. ರಾಜನಾಳ್ವಿಕೆಯಿಂದ ಹಿಡಿದು ಜನ ಸಾಮಾನ್ಯನ ಜೀವನಗಾಥೆಗೆ
ಹೊಸ ಭಾಷ್ಯಃ ಬರೆದ ದೇಶ ನನ್ನದು. ನಾನು ಹೆಮ್ಮೆಯಿಂದ ಹೇಳುವ ಭವ್ಯ ಭಾರತದ ಅರ್ಥವೇ ಬೆಳಕು. ಬೆಳಕಿನಿಂದ ಬೆಳಕಿನೆಡೆಗೆ ಸಾಗುವ ದೇಶವೇ ಭಾರತ. ಇಲ್ಲಿ ಉದಾತ್ತ ಚಿಂತನೆಗಳು ಪ್ರಜ್ವಲಿಸಿವೆ. ಮಹಾನ್ ವ್ಯಕ್ತಿಗಳ ಆದರ್ಶಭರಿತ ವಿಚಾರಗಳು ಜಗತ್ತಿನ ದೃಷ್ಠಿಕೋನವನ್ನೇ ಬದಲಾಯಿಸುವಲ್ಲಿ ಯಶಸ್ವಿಯಾಗಿವೆ. ಉದಾಹರಣೆಗೆ ಅಥರ್ವವೇದದ ಭಹ್ಮ್ಯಸೂಕ್ತ ಭಾರತದೇಶದ ಮೊದಲ ರಾಷ್ಟ್ರಗೀತೆ ಎಂದು ಕರೆಸಿಕೊಂಡಿದೆ. ಅದರಲ್ಲಿ ಆಂಗಿರಸ ಋಷಿ ಹೇಳಿದ “ಮಾತಾ ಭೂಮಿಹೀ ಪುತ್ರೋಹಮ್ಯ ಪ್ರದಿವ್ಯಾಃ” ಎನ್ನುವ ಮಾತು ಜಗತ್ತಿನ ಚಿಂತನಶೈಲಿಯನ್ನೆ ಬದಲಾವಣೆ ಮಾಡಿತು. ಇದರರ್ಥ “ಭೂಮಿ ನನ್ನ ತಾಯಿ ನಾನು ಅವಳ ಮಗ” ಇದು ಜಗತ್ತನ್ನು ಎಂಥಹ ಆಲೋಚನಲಹರಿಗೆ ತಂದು ನಿಲ್ಲಿಸಿತು ಎಂದರೆ ವ್ಯಾಪಾರಿ ದೃಷ್ಟಿಕೋನದ ಇಂಗ್ಲಂಡ್ ದೇಶವು ಸಹ ತನ್ನ ಭೂಮಿಯನ್ನು ಮಾತೆಯನ್ನಾಗಿ ಗೌರವ ನೀಡಿತು. ನಮ್ಮ ದೇಶದ ಮಹಾಭಾರತದ ಕಲ್ಪನೆಯನ್ನು ಮನಗಂಡ ಇಂಗ್ಲಂಡ ತನ್ನ ದೇಶವನ್ನು ಗ್ರೇಟ್ ಬ್ರಿಟನ್ ಎಂದು ಕರೆದುಕೊಂಡಿತು. ಹೀಗೆ ಇಡೀ ಜಗತ್ತಿಗೆ ಬೆಳಕಿನ ದಾರಿಯನ್ನು ಹಾಕಿ ಕೊಡುವಲ್ಲಿ ನನ್ನ ಭಾರತ ಮಹತ್ತರವಾದ ಕಾರ್ಯ ಮಾಡಿದೆ.
ಹೀಗೆ ಇಡೀ ಜಗತ್ತನ್ನೇ ಚಿಂತನೆಗೆ ಹಚ್ಚುವಂತ ಅದ್ಭುತವಾದ ವಿಚಾರಧಾರೆಯನ್ನು ಸಾಂಗೋಪಾಂಗವಾಗಿ ಹರಿಸಿದ ಭಾರತ ದೇಶವು ನಿಸರ್ಗದ ಅಣುಅಣುವಲ್ಲಿಯೂ ಸಹ ದೈವತ್ವದ ಕಣಕಣವನ್ನು ಕಂಡವರು. ನೀರ್ಜೀವ ವಸ್ತುವಿನಿಂದ ಹಿಡಿದು ಸಕಲಚರಾಚರ ವಸ್ತುಗಳಲ್ಲಿಯೂ ಪರಮಾತ್ಮನ ಪ್ರತಿರೂಪವನ್ನು ಕಂಡುಕೊಂಡ ನಮ್ಮವರು ಸಾರ್ಥಕ ಹಾಗೂ ಸಾತ್ವಿಕ ಬದುಕು ಎಂದರೆ ಏನು? ಎನ್ನುವುದನ್ನು ಸಾರಿಸಾರಿ ಹೇಳಿದ್ದಾರೆ. ಆ ರೀತಿ ಸಾತ್ವಿಕ ಬದುಕನ್ನು ಮಾನವಜೀವಿಯಲ್ಲಿ ಮಾತ್ರ ಕಾಣದೇ ಅನ್ಯಜೀವಿಗಳಲ್ಲೂ ಹುಡುಕಾಟ ಮಾಡಿ ಅಂತಿಮವಾಗಿ ಗೋವಿನಲ್ಲಿ ಪಾರಮಾರ್ಥಿಕ ಜೀವನವಿಧಾನವನ್ನು ಕಂಡುಕೊಂಡರು. ಅದರ ಪರಿಣಾಮವಾಗಿಯೇ ಸನಾತನ ಸಂಸ್ಕೃತಿಯ ಉಗಮದಿಂದಲೂ ಗೋವನ್ನು ಪವಿತ್ರ ಹಾಗೂ ಪೂಜ್ಯನೀಯ ಮತ್ತು ಪ್ರೀತಿಯ ಪ್ರತೀಕವಾಗಿ ಕಾಣುತ್ತಿದ್ದರು.
ಮನಸು ಎಂಬ ಮನೆಯ ಬಾಗಿಲ ಮುಂದೆ; ನೆನಗಳು ಎನ್ನುವ ದೀಪವನ್ನುರಿಸಿದರೆ ಅದರ ಬೆಳಕಲ್ಲಿ ಆ ಕರುಣಾಮಯಿಯ ಚಿತ್ರ ಕಣ್ಣಿಗೆ ರಾಚುತ್ತದೆ. ಅಂದು ಅಮ್ಮ ಕರೆಯುತ್ತಿದ್ದ ನೊರೆಹಾಲಿನಿಂದ ಹಿಡಿದು ಪಂಡಿತರು ಬಳಸುವ ಗೋಮೂತ್ರದ ವರೆಗೂ, ಅಜ್ಜಿ ತಟ್ಟುತ್ತಿದ್ದ ಬೆರಣಿಯಿಂದ ಹಿಡಿದು ದೊಡ್ಡಮ್ಮ ಸಾರಿಸುತ್ತಿದ್ದ ಸಗಣಿಯವರೆಗೂ, ಹೊಲಕ್ಕೆ ಹಾಕುವ ಗೊಬ್ಬರದಿಂದ ಹಿಡಿದು ಅಜ್ಜ ಧರಿಸುತ್ತಿದ್ದ ವಿಭೂತಿಯವರೆಗೂ ಎಲ್ಲವು ಗೋವಿನ ಕಾಣಕೆಗಳೇ ಆಗಿದ್ದವು. ನಾನು ಅಳುತ್ತಿದ್ದಾಗ ಅಮ್ಮ ಕರುವನ್ನು ತೋರಿಸುತ್ತಿದ್ದಳು. ಅದರ ಮುದ್ದಾದ ಮುಖವನ್ನು, ನಿಷ್ಕಲ್ಮಶ ಪ್ರೀತಿಯನ್ನು ಕಂಡ ತಕ್ಷಣವೇ ಅಳುವೇ ಒಂದು ಕ್ಷಣ ನಗುತ್ತಿತ್ತು. ಅದರ ಮೈ ಮೇಲೆ ಒಂದು ಬಾರಿ ಕೈ ಆಡಿಸಿದರೇ ಸಿಗುತ್ತಿದ್ದ ಆನಂದ ಬಣ್ಣಿಸಲು ಅಸಾಧ್ಯವಾದುದು. ಅದರಲ್ಲೂ ಹಸು ಕರುವಿಗೆ ಹಾಲು ಕುಡಿಸುವ ದೃಶ್ಯವಂತೂ ಜಗದ ಬಾಂಧವ್ಯದ ಭಾವಗೀತೆಯಾಗಿದೆ. ಹೀಗೆ ಮಾನಸಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ, ಐತಿಹಾಸಿಕವಾಗಿ, ಧಾರ್ಮಿಕವಾಗಿ, ಒಂದು ಅವಿನಾಭಾವವಾದ ಸಂಬಂಧವು ಗೋಸಂಪತ್ತಿನೊಂದಿಗೆ ಬೆಸೆದುಕೊಂಡಿದೆ. ವಿಚಿತ್ರ ಎಂದರೆ ಅಂದು ಜಗದ ಚಿಂತನೆಯನ್ನೇ ಬದಲಾಯಿಸಿ ಬೆಳಕು ನೀಡಿದ ಭಾರತಿಯರೇ ಇಂದು ಹಾಲುಣಿಸಿದ ಮಾತೆಯ ಎದೆಗೆ ಚೂರಿ ಹಾಕುತ್ತಿರುವುದು ದುರ್ದೈವದ ಸಂಗತಿ. ಮನುಕುಲಕ್ಕೆ ಮಾನವೀಯತೆಯ ಕಥೆಯನ್ನು ಹೇಳಿದ ಗೋಮಾತೆಯ ಹತ್ಯೆ ಎಗ್ಗಿಲ್ಲದೇ ಸಾಗುತ್ತಿರುವುದು ವಿಪರ್ಯಾಸ. ಇದರಿಂದಾಗಿ ಭಾರತದ ಸನಾತನ ಪರಂಪರೆ ಮಣ್ಣುಗೂಡುತ್ತಿರುವುದು ನೋವಿನ ಸಂಗತಿ. ಇದನ್ನು ಮನದಟ್ಟು ಮಾಡಿಕೊಂಡು, ಸ್ವಾರ್ಥಸಾಧನೆಯನ್ನು ಬದಿಗಿಟ್ಟು, ಸಾತ್ವಿಕ ವಿಚಾರಧಾರೆಯೊಂದಿಗೆ ವಿಶ್ಲೇಷಣೆ ಮಾಡಿ, ಗೋ ಹತ್ಯೆ ತಡೆಯುವ ಅಗತ್ಯತೆಯನ್ನು ಕುರಿತು ಮಾನವೀಯತೆಯ ದೃಷ್ಠಿಕೊನದಲ್ಲಿ ಮನಪರಿವರ್ತಿಸಬೇಕಾಗಿದೆ.
ಗೋವು ಎನ್ನುವ ಬಣ್ಣಿಸಲಾಗದ ಭಾವಗೀತೆ
“ಗಾವೋ ವಿಶ್ವಸ್ಯ ಮಾತರಃ” ಎನ್ನುವುದರ ಮೂಲಕ ಹಸು ಜಗತ್ತಿನ ತಾಯಿ ಎಂದು ಬಣ್ಣಿಸಿದರು. ಇಂಥ ಕಲ್ಪನೆಯನ್ನು ಭಾರತ ದೇಶದಲ್ಲಿ ಅಲ್ಲದೇ ಬೇರೆಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ಕಾರಣ ನಾವು ಮಗುವಾಗಿದ್ದಾಗ ತಾಯಿ ಹಾಲನ್ನು ಕುಡಿದು ಬೆಳೆಯುತ್ತೇವೆ. ಎದು ಹಾಲು ನಿಂತನಂತರ ಜೀವನದ ಕೊನೆವರೆಗೂ ನಾವು ಬದುಕುವುದೇ ಹಸುವಿನ ಹಾಲನ್ನು ಕುಡಿದು. ಆ ಕಾರಣದಿಂದಲೇ ಎದೆಹಾಲು ಕೊಟ್ಟವಳು ಮೊದಲ ತಾಯಿಯಾದರೆ ಒಡಲ ಹಾಲು ಕೊಟ್ಟ ಗೋವು ಜಗದ ತಾಯಿಯಾಗಿ ನಮ್ಮನ್ನು ಸಲುಹುತ್ತಾಳೆ ಎನ್ನುವುದೇ ಒಂದು ಬಣ್ಣಿಸಲಾಗದ ಬಾಂಧವ್ಯದ ಪ್ರತಿರೂಪ. ಅದಕ್ಕೆ ನಮ್ಮ ಪೂರ್ವಜರಿಗೆ ಗೋವುಗಳ ಮೇಲೆ ವಿಶೇಷವಾದ ಅಕ್ಕರೆ ಇತ್ತು. ವೇದಗಳ ಕಾಲದಲ್ಲಿ ಯಾರಬಳಿ ಹೆಚ್ಚಿನ ಗೋಸಂಪತ್ತು ಇತ್ತೋ ಅವನು ಶ್ರೀಮಂತನೆಂದು ಗುರುತಿಸಿಕೊಳ್ಳುತ್ತಿದ್ದನು. ಗೋವುಗಳಿಗಾಗಿಯೇ ಗವಿಷ್ಟ್ರ ಎನ್ನುವ ಯುದ್ಧಗಳು ಸಂಭವಿಸುತ್ತಿದ್ದವು ಎಂದರೆ ನೀವೇ ಅರ್ಥ ಮಾಡಿಕೊಳ್ಳಿ ಗೋವು ಎಂದರೆ ಅದೆಷ್ಟು ಪ್ರೀತಿ ಅಕ್ಕರೆ ಅಭಿಮಾನವಿತ್ತು ಎಂದು. ಇದಕ್ಕೆ ಪೂರಕವಾದ ಒಂದು ವಿಷಯ ಹೇಳುವುದಾದರೆ....
ಒಂದುಬಾರಿ ಸ್ವಾಮಿ ವಿವಾಕಾನಂದರನ್ನುದ್ದೇಶಿಸಿ ವಿದೇಶಿ ವ್ಯಕ್ತಿಯೊಬ್ಬ ‘ಹಾಲಿನಲ್ಲಿ ಯಾವ ಹಾಲು ಶ್ರೇಷ್ಠ?’ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಪ್ರತಿಯಾಗಿ ಸ್ವಾಮಿಜೀಯವರು “ಹಾಲಿನಲ್ಲಿ ಶ್ರೇಷ್ಟವಾದ ಹಾಲು ಎಂದರೆ ಅದು ಎಮ್ಮೆ ಹಾಲು” ಎಂದು ಉತ್ತರವಿತ್ತರು. ಆಗ ಆ ವಿದೇಶಿಗ “ಹಾಲಿನಲ್ಲಿ ಶ್ರೇಷ್ಟವಾದ ಹಲೆಂದರೆ ಅದು ಹಸುವಿನ ಹಾಲು ಎಂದು ಹೇಳುತ್ತಾರೆ. ಆದರೆ ನೀವೇಕೆ ಎಮ್ಮೆ ಹಾಲೆಂದು ಹೇಳಿದಿರಿ” ಎಂದು ಕೇಳಿದಾಗ ಉತ್ತರಿಸಿದ ಸ್ವಾಮಿಜೀಯವರು “ನೀವು ಕೇಳಿದ್ದು ಹಾಲಿನಲ್ಲಿ ಶ್ರೇಷ್ಠ ಯಾವುದು ಎಂದು. ಅದಕ್ಕೆ ಎಮ್ಮೆ ಹಾಲು ಎಂದು ಉತ್ತರಿಸಿದೆ. ನೀವೇನಾದರೂ ಅಮೃತದಲ್ಲಿ ಶ್ರೇಷ್ಠ ಯಾವುದು ಎಂದು ಕೇಳಿದ್ದರೆ ಖಂಡಿತವಾಗಿ ಹಸುವಿನ ಹಾಲೆ ಎಂದು ಹೇಳುತ್ತಿದ್ದೇ”ಎಂದಾಗ ವಿದೇಶಿಯನ ಮುಖದ ಭಾವವೇ ಬದಲಾಯಿತು. ಇದರಿಂದ ಗೋವುಗಳ ಬಗ್ಗೆ ಹಾಗೂ ಹಸುವಿನ ಹಾಲಿನ ಬಗ್ಗೆ ನಮ್ಮಲ್ಲಿರುವ ಅಭಿಮಾನ ಎಂಥದು ಎನ್ನುವುದು ಗೊತ್ತಾಗುತ್ತದೆ. ಇಂಥ ಗೋವುಗಳಿಂದ ಮನುಕುಲಕ್ಕೆ ಬಹಳಷ್ಟು ಉಪಯೋಗವಾಗಿದೆ ಎನ್ನುವುದನ್ನು ಎದೆ ತಟ್ಟಿ ಹೇಳಿಕೊಳ್ಳಬಹುದು. ಇಲ್ಲದೇ ಇದ್ದರೇ ಯಾರಾದರು ಇಷ್ಟು ಅಭಿಮಾನಪೂರ್ವಕವಾಗಿ ಮಾತನಾಡಲು ಸಾಧ್ಯವೇ?.
ಪುರಾಣದಲ್ಲಿ ಬರುವ ಗೋಮಾತೆ
ವಶಿಷ್ಟ ಮಹರ್ಷಿಗಳ ಆಶ್ರಮಕ್ಕೆ ಬಂದ ರಾಜ ಕೌಶಿಕನು ನಂದಿನಿ ಹಸು ಕಾಮಧೇನುವಿನಂತೆ ಆಹಾರವನ್ನು ಕರುಣಿಸುತ್ತಿದ್ದನ್ನು ಕಂಡು ಬಲವಂತವಾಗಿ ಅದನ್ನು ಪಡೆಯಲು ಯತ್ನಿಸಿದಾಗ; ನಂದಿನಿ ಹಸು ತನ್ನ ಒಡಲಿನಿಂದ ಅನೇಕ ಸೈನಿಕರನ್ನು ಸೃಷ್ಠಿಸಿ ರಾಜನ ಸೈನಿಕರೊಂದಿಗೆ ಯುದ್ಧ ಮಾಡಿಸುತ್ತದೆ. ಆಗ ಹಸುವಿನ ಗುಣ ಕೌಶಿಕನಿಗೆ ಅರಿವಾಗುತ್ತದೆ. ಅಂದರೆ ಹಸು ತನ್ನನ್ನು ನಂಬಿದ ಯಜಮಾನನನ್ನು ಎಂಥಹ ಕಷ್ಟ ಕಾಲದಲ್ಲಿಯೂ ಸಹ ಕೈಬಿಡುವುದಿಲ್ಲ ಎಂದು. ಇದರಿಂದ ಪರಿವರ್ತನೆಗೊಂಡ ಕೌಶಿಕನು ವಿಶ್ವಾಮಿತ್ರ ಮಹರ್ಷಿಯಾಗಿ ಬದಲಾದನೆಂದು ಪುರಾಣ ಹೇಳುತ್ತದೆ. ಹಾಗೆ ಧರ್ಮ ಹಾಗೂ ಶಾಂತಿಯ ಸಂಕೇತವಾಗಿರುವ ಹಸು ಸನಾತನ ಭಾರತದ ಆಧಾರಸ್ಥಂಭವಾಗಿದೆ. ದ್ವಾಪರಯುಗದಲ್ಲಿ ಕೃಷ್ಣನ ಪ್ರೀತಿಯ ಪ್ರಾಣಿಯಾಗಿ ನಾವು ಗೋವನ್ನು ನೋಡುತ್ತೇವೆ. ಕೃಷ್ಣನ ಭಾವಚಿತ್ರದಲ್ಲಿ ಗೋವು ಇರದೇ ಹೋದರೆ ಅದು ಅಪೂರ್ಣ ಎನ್ನುವ ಮಟ್ಟಕ್ಕೆ ಕೃಷ್ಣ ಹಾಗೂ ಗೋವುಗಳ ಮಧ್ಯದಲ್ಲಿ ಅವಿನಾಭಾವ ಸಂಬಂಧವಿತ್ತು. ಅದೇ ಕಾರಣಕ್ಕಾಗಿ ಕೃಷ್ಣನಿಗೆ ಗೋಪಾಲ ಎನ್ನುವ ಹೆಸರು ದೊರೆತಿದ್ದು. 33ಕೋಟಿ ದೇವತೆಗಳನ್ನು ತನ್ನ ಒಡಲಾಳದಲ್ಲಿರಲು ಅವಕಾಶ ನೀಡಿದ ಗೋಮಾತೆ ಪರೋಪಕಾರದ ಪ್ರತಿಬಿಂಬವಾಗಿದ್ದಾಳೆ. ಆ ಕಾರಣದಿಂದ ಹಸುವನ್ನು ಮಾತೆ ಅಂದರೆ ತಾಯಿ ಎಂತಲೂ, ಕಾಮಧೇನು ಎಂದರೆ ಇಷ್ಟಾರ್ಥಗಳನ್ನು ನೆರವೇರಿಸುವವಳು ಹಾಗೂ ಸರಭಿ ಎಂದರೆ ಸುಗಂಧಬೀರುವವಳು ಎಂದು ಮುಂತಾಗಿ ವರ್ಣಿಸುತ್ತೇವೆ. ಸಾಕಷ್ಟು ಪ್ರಾಣಿಗಳು ನಿಸರ್ಗದಲ್ಲಿರಬಹುದು. ಆದರೆ ಆಧ್ಯಾತ್ಮಿಕ, ದೈವಿಕ, ಪಾರಂರಿಕ ಹಾಗೂ ಪೌರಾಣಿಕ ಭಾರತದಲ್ಲಿ ಗೋಮಾತೆಗೆ ವಿಶೇಷವಾದ ಹಾಗೂ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಅದು ಅಲ್ಲದೆ ಪ್ರಾಚೀನ ಕಾಲದಲ್ಲಿ ಯಜ್ಞ ಯಾಗಾದಿಗಳ ಸಂದರ್ಭದಲ್ಲಿ ಹಸುವಿನ ತುಪ್ಪವನ್ನು ಬಳಸುವುದರಿಂದ ಅದು ಬೆಂಕಿಯಲ್ಲಿ ಕರಗಿ ಹೋಗಿ ವಾತಾವರಣದಲ್ಲಿನ ಮಾರಕ ಸೂಕ್ಷ್ಮಾಣುಗಳನ್ನು ನಾಶಮಾಡುತ್ತಿದ್ದವು. ಇದನ್ನು ನಾವು ವಾಸ್ತವಿಕ ವಿಜ್ಞಾನವಾಗಿಯೂ ಒಪ್ಪಿಕೊಳ್ಳಬಹುದಾಗಿದೆ. ಇದರಿಂದಾಗಿ ಹಸು ಕೇವಲ ಪೂಜ್ಯನೀಯ ಮಾತ್ರವಲ್ಲ ನಮ್ಮನ್ನು ಕಾಪಾಡುವ ರಕ್ಷಕಿಯೂ ಕೂಡ ಹೌದು.
ಕೃಷಿ ಅರ್ಥವ್ಯವಸ್ಥೆಯ ಪ್ರತೀಕ ಗೋಮಾತೆ
ಮೇಲೆ ಹೇಳಿದ ಎಲ್ಲ ವಿಷಯಗಳು ಪೌರಾಣಿಕ ಹಾಗೂ ಭಾವನಾತ್ಮಕತೆಯ ನಕಲು ಎಂದು ನೀವಂದುಕೊಳ್ಳಬಹದು ಆದರೆ ಸಧ್ಯ ಹೇಳುತ್ತಿರುವ ವಿಷಯ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅದರಲ್ಲೂ ಕೃಷಿ ಅರ್ಥವ್ಯವಸ್ಥೆಗೆ ಗೋಮಾತೆಯ ಕೊಡುಗೆಯ ಕುರಿತು. ಇದರರಿವು ಇಂದು ಅನಿವಾರ್ಯ. ಕಾರಣ ಮೇಲೆ ಹೇಳಿದ್ದು ಕಾಲ್ಪನಿಕ ಎನಿಸಿದರೆ ಇದು ವಾಸ್ತವಿಕ ಸತ್ಯವಾಗಿದೆ. ಹೇಳಿಕೇಳಿ ಭಾರತವು ಹಳ್ಳಿಗಳ ರಾಷ್ಟ್ರ. 2011ರ ಜನಗಣತಿಯ ಪ್ರಕಾರ ಇಲ್ಲಿ ಸುಮಾರು 6 ಲಕ್ಷ 40 ಸಾವಿರಕ್ಕೂ ಅಧಿಕ ಹಳ್ಳಿಗಳನ್ನು ಕಾಣುತ್ತೇವೆ. ಈ ಹಳ್ಳಿಗಳ ಆದಾಯದ ಮೂಲ ಕೃಷಿ. ಕೃಷಿಗೆ ಪೂರಕವಾಗಿರುವ ಉಪಕಾರಿ ಪ್ರಾಣಿ ಎಂದರೆ ಗೋವುಗಳು. ಸಾಕಿದ ಹಸುಗಳಿಂದ ಸರ್ಕಾರದ ಬೊಕ್ಕಸಕ್ಕೆ ವರ್ಷವೊಂದಕ್ಕೆ 2ಲಕ್ಷಕೋಟಿ ರೂಗಳ ವರಮಾನ ದೊರೆಯುತ್ತದೆ. ಇನ್ನೂ ಪ್ರತಿದಿನ 5 ಲಕ್ಷ ಗ್ಯಾಲನ್ ಹಾಲು ಉತ್ಪಾದನೆಯಾಗುತ್ತದೆ. ಅದಲ್ಲದೇ ಸಾವಯವ ಗೊಬ್ಬರ ಒದಗಿಸುವುದರ ಜೊತೆಗೆ ಗೋಮೂತ್ರ ಹಾಗೂ ಗೋಮಯವು ರಾಸಾಯನಿಕಗಳ ಬದಲಿಗೆ ಬಳಸುವ ದೇಶಿ ಉತ್ಪನ್ನಗಳಾಗಿ ಗುರುತಿಸಿಕೊಂಡಿರುವುದು ಇನ್ನೋಂದು ಆದಾಯದ ಮೂಲವಾಗಿದೆ. ಇತ್ತೀಚಿನ ಸಂಶೋಧನೆಯ ಆಧಾರದ ಮೇಲೆ ಗಿರ್ ಥಳಿಯ ಹಸುಗಳ ಮೂತ್ರದಲ್ಲಿ ಬಂಗಾರದ ಅಂಶ ಪತ್ತೆಯಾಗಿದ್ದು ಈ ಸಂಶೋಧನೆ ಯಶಸ್ವಿಯಾದರೆ ಬಂಗಾರದ ಗಣಿಯೆ ಕೈಗೆ ಸಿಕ್ಕಂತಾಗುತ್ತದೆ.
ಇನ್ನೂ ಗ್ರಾಮೀಣ ಭಾರದಲ್ಲಿ ಇಂದಿಗೂ ಸಹ ಶೆಕಾಡಾ 70 ರಷ್ಟು ಸಾಗಾಣಿಕೆಯ ಸಾಧನವಾಗಿ ಜಾನುವಾರುಗಳನ್ನೇ ಅವಲಂಭಿಸಿದ್ದಾರೆ. ಇದರಲ್ಲಿ ಸುಮಾರು 84 ದಶಲಕ್ಷ ಜಾನುವಾರುಗಳು ಭಾಗಿಯಾಗುತ್ತವೆ ಎಂದು ಧರ್ಮಭಾರತಿ ಸಮೀಕ್ಷೆ ಹೇಳುತ್ತದೆ. ಇದರಿಂದಾಗಿ ಪ್ರತಿದಿನ ಸುಮಾರು 1 ಲಕ್ಷ ಲೀಟರ್ ಡೀಸೆಲ್‌ನ ಉಳಿತಾಯವಾಗುತ್ತದೆ. ಅಂದರೆ ವರ್ಷಕ್ಕೆ ಸುಮಾರು 12 ಸಾವಿರಕೋಟಿ ರೂಪಾಯಿಗಳ ವಿದೇಶಿ ವಿನಿಮಯದ ಉಳಿತಾಯಾಗುತ್ತಿದೆ. ಜೊತೆಯಲ್ಲಿ 236 ಮಿಲಿಯನ್‌ಟನ್ ನೈಸರ್ಗಿಕ ಗೊಬ್ಬರ ಸಂಗ್ರಹವಾಗುತ್ತಿದೆ. ಹಿಗಾಗಿ ಕೃಷಿ ಅರ್ಥವ್ಯವಸ್ಥೆಗೆ ಗೋವುಗಳ ಪಾತ್ರ ಅತ್ಯಂತ ಮಹತ್ವತೆ ಪಡೆದುಕೊಂಡಿದೆ. ಹಸು ಹೊಗೆ ಉಗಳಲ್ಲ, ಟ್ರ್ಯಾಕ್ಟರ್ ಸಗಣಿ ಹಾಕಲ್ಲ
ನಿಸರ್ಗಪ್ರೀಯ ವ್ಯಕ್ತಿಯೋರ್ವರು ಹೇಳಿದಂತ ಈ ಮಾತು ಅದೆಂತ ಅರ್ತಗರ್ಭಿತಾವಾಗಿದೆ ಅಲ್ಲವೇ? ಮಾನವ ಆಧುನಿಕತೆ ಎಡೆಗೆ ಮುಖ ಮಾಡಿದ ಮೇಲೆ ಸಾಂಪ್ರದಾಯಿಕತೆಗೆ ತಿಲಾಂಜಲಿ ಇಡುತ್ತಿದ್ದಾನೆ. ಆದರೆ ಸಾಂಪ್ರದಾಯಿಕ ಕೃಷಿ ತೊರೆದು ಆಧುನಿಕ ಕೃಷಿಯ ಕಡೆಗೆ ಕೈ ಚಾಚಿದ್ದಾನೆ. ಇದರಿಂದಾಗಿ ಇನ್ನಷ್ಟು ನಿಸರ್ಗವನ್ನು ಹಾಳು ಮಾಡುತ್ತಿದ್ದಾನೆ. ಟ್ರ್ಯಾಕ್ಟರ್‌ನಂತ ಆಧುನಿಕ ಉಪಕರಣ ಬಳಸಿ ಉತ್ತುವುದು, ಬಿತ್ತುವುದು ಮಾಡುವುದರಿಂದ ಭೂಮಿಯೂ ಹಾಳಾಗುತ್ತಿದೆ. ಜೊತೆಗೆ ಅದು ಸೂಸುವ ಹಾನಿಕಾರಕ ಹೊಗೆಯಿಂದ ವಾತಾವರಣವು ಹಾಳಾಗುತ್ತಿದೆ. ಆದರೆ ಗೋವು ನೆಲಕ್ಕೆ-ಹೊಲಕ್ಕೆ ಎರಡಕ್ಕೂ ಸಗಣಿಯ ಗೊಬ್ಬರ ನೀಡುತ್ತದೆ. ಇದು ಭೂಮಿಯಲ್ಲಿನ ಫಲವತ್ತತೆಯ ಸಾರವನ್ನು ಜೀವಂತವಾಗಿಡುತ್ತದೆ. ಇನ್ನೂ ಗೋಮೂತ್ರದಲ್ಲಿ ಓಷಧಿಯ ಗುಣವಿದ್ದು ಕ್ಯಾನ್ಸರ್‌ನಂತಹ ಭಯಾನಕ ರೋಗಕ್ಕೂ ಸಹ ರಾಮಬಾಣವಾಗಿದೆ. ಅದರ ಪೇಟೆಂಟ್ ಸಹ ಭಾರತಕ್ಕೆ ದೊರೆತಿದೆ. ಗೋಮಯದಿಂದ ಸೌಂಧರ್ಯವರ್ಧಕ ಸೃಷ್ಠಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಪ್ರಕೃತಿಜನ್ಯ ಪದಾರ್ಥಗಳನ್ನು ತಿಂದು ಓಷಧಿಯುಕ್ತ ಉತ್ಪನ್ನಗಳನ್ನೂ ನೀಡುವುದರ ಮೂಲಕ ನಮ್ಮ ಸನಾತನ ಪಾರಮಾರ್ಥಿಕ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ಸ್ವಾರ್ಥರಹಿತ ಜೀವನ ತತ್ವದ ಸಾರವನ್ನು ಒತ್ತಿ ಹೇಳುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಾಗದು.
ಮಾತೆಯ ಕತ್ತು ಸೀಳುವುದು ಎತ್ತಕಡೆಯ ನ್ಯಾಯ?
ಇಷ್ಟೆಲ್ಲ ಮಾನವನ ಬದುಕಿಗೆ ಲಾಭವನ್ನು ತಂದುಕೊಟ್ಟು, ನಮ್ಮನ್ನು ಸದಾ ಎರಡನೇ ತಾಯಾಗಿ ಕಾಪಾಡುತ್ತಿರುವ ಹಸುವನ್ನು ಕೊಲ್ಲುವುದೆಂದರೆ ಹೆತ್ತ ತಾಯಿಯ ಕತ್ತು ಹಿಸುಕಿದಂತೆಯೇ ಸರಿ. ಮನುಷ್ಯರ ಸಂಖ್ಯೆ 11 ಕೋಟಿ ಇದ್ದಾಗ ಗೋವುಗಳ ಸಂಖ್ಯೆ 40 ಕೋಟಿ ಇತ್ತು. ಆಗ ಮಾನವನು ನೆಮ್ಮದಿಯ ಬಾಳು, ಆರೋಗ್ಯಪೂರ್ಣ ಬದುಕನ್ನು ಕಟ್ಟಿಕೊಂಡಿದ್ದ. ಪ್ರಸ್ತುತ 128 ಕೋಟಿ ದಾಟಿರುವಾಗ ಗೋವುಗಳ ಸಂಖ್ಯೆ 11 ಕೋಟಿಗೆ ಇಳಿದಿದೆ. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಕಸಾಯಿಕಾನೆಗಳ ಸಂಖ್ಯೆ ಕೇವಲ 306 ಇದ್ದವು. ಆದರೆ ಪ್ರಸ್ತುತ 40ಸಾವಿರಕ್ಕೂ ಅಧಿಕ ಕಸಾಯಿ ಖಾನೆಗಳು ನಿರ್ಮಾಣವಾಗಿದ್ದು ದೆಹಲಿ ಒಂದರಲ್ಲಿ ಪ್ರತಿದಿನ 1 ಲಕ್ಷ ಲೀಟರ ಹಸುವಿನ ರಕ್ತ ಗಟಾರದ ಮೂಲಕ ಯಮುನಾ ನದಿ ಸೇರುತ್ತಿದೆ. ಇದು ಹೀಗೆ ಮುಂದುವರೆದರೆ ಇನ್ನೂ ಕೆಲವು ವರ್ಷಗಳಲ್ಲಿ ಗೋ ಸಂತಿತಿಯೇ ಅಳಿಯುವ ಭಯಕಾಡುತ್ತಿದೆ. ಹಿಂದೆ ರಾಜ ಮಹಾರಾಜರು ಮೋಜಿಗಾಗಿ ಹುಲಿ ಸಿಂಹಗಳ ಬೇಟೆ ಆಡುತ್ತಿದ್ದರು. ಅದರ ಪರಿಣಾಮವಾಗಿ ಇಂದು ಹುಲಿ ಹಾಗೂ ಸಿಂಹಗಳ ಸಂತತಿ ಅಳಿವಿನಂಚಿನಲ್ಲಿದೆ. ಸಧ್ಯ ಅವುಗಳ ಸಂರಕ್ಷಣೆ ಅನಿವಾರ್ಯವಾಗಿದೆ ಎಂದು ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ವಿಚಿತ್ರ ಹೇಗಿದೆ ನೋಡಿ ಕಾಡುಮೃಗಗಳ ರಕ್ಷಣೆಗೆ ಒಲವು ತೋರುವ ನಮ್ಮಂತವರು ನಮ್ಮ ಜೀವನವನ್ನು ಕಾಪಾಡುವ ಪರೋಪಕಾರಿ ಜೀವನ ನಡೆಸುವ ಗೋಮಾತೆಯ ರಕ್ಷಣೆಗೆ ಮುಂದಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಒಳ್ಳೆಯದನ್ನು ಮಾಡುವವರಿಗೆ ಯಾವುತ್ತು ಕೆಟ್ಟದ್ದಾಗುವುದು ಕಲಿಯುಗದ ಸೂತ್ರ ಎನ್ನುವ ಸಾಲು ಓದಿದ ನೆನಪಿದೆ. ಹಾಗೆ ಮನುಕುಲದ ಒಳಿತಿಗಾಗಿ ತನ್ನದೆಲ್ಲವನ್ನು ಧಾರೆ ಎರೆದು; ಬದುಕಿದಾಗಲು ಒಳ್ಳೆಯದನ್ನು ಮಾಡುತ್ತ ಸತ್ತ ಮೇಲೂ ನಮಗೆ ಲಾಭ ತಂದುಕೊಡುವ ಗೋಮಾತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ
ಕೊನೆಯ ಹನಿ
ಗೋಮಾತೆಯ ಕುರಿತು ಹೇಳುವಾಗ ನನಗೆ ಒಂದು ಕಥೆ ನೆನಪಾಗುತ್ತಿದೆ. ಒಂದು ಊರಲ್ಲಿ ಕಾಸಯಿಖಾನೆಯನ್ನಿಟ್ಟು ಜೀವನ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಆ ಊರಿನ ರೈತನೊಬ್ಬ ಬಡತನದ ಬವಣೆ ತಾಳಲಾರದೇ ಹಸುವೊಂದನ್ನು ತಂದು ಮಾರುತ್ತಾನೆ. ಆದರೆ ಅದು ಹಾಲುಕೊಡುವ ಹಸುವಾಗಿತ್ತು. ಆದ ಕಾರಣ ರೈತ ಕಸಾಯಿಗೆ ಇದನ್ನು ಕತ್ತರಿಸದೇ ಹಾಲು ಮಾರಿ ಜೀವನ ಮಾಡು ಎಂದು ಹೇಳಿ ಹೊರಟು ಹೋಗುತ್ತಾನೆ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಕಸಾಯಿ ಹಸುವನ್ನು ಕಡಿಯಲು ಮುಂದಾಗುತ್ತಾನೆ. ಆಗ ಹಸುವು ಕಸಾಯಿಯನ್ನು ಉದ್ದೇಶಿಸಿ “ನೀನು ನನ್ನನ್ನು ಕಡಿದು ಮಾಂಸವನ್ನು ಮಾರುತ್ತೀಯ ಎಂದು ನನಗೆ ಗೊತ್ತು. ಆದರೆ ಸದ್ಯ ನನ್ನ ಕೆಚ್ಚಲು ತುಂಬಿಕೊಂಡಿದೆ. ನಾನು ನನ್ನ ಕರುವಿಗೆ ಹಾಲುಣಿಸಿ ಬರುವುದಕ್ಕೆ ಅವಕಾಶ ಮಾಡಿಕೊಡು” ಎಂದು ಕೇಳಿದಾಗ ಅವಕಾಶ ಮಾಡಿ ಕೊಡದ ಕಸಾಯಿ ವಿಕೃತನಗೆ ಬೀರಿ ಹೊರ ನಡೆಯುತ್ತಾನೆ. ಆಗ ಮಾನವನು ಇತ್ತೀಚೆಗೆ ಮತ್ತಷ್ಟು ಸ್ವಾರ್ಥಿಯಾಗುತ್ತಲಿದ್ದಾನೆ ಈ ಊರು ಸ್ವಾರ್ಥಿಗಳಿಗಾಗಿ ಮಾತ್ರ ಇದೆ. ನಾವಿಲ್ಲಿ ಇದ್ದರೆ ನಮಗೇ ಬದುಕೇ ಇಲ್ಲ ಅದಕ್ಕೆ ನಾವೆಲ್ಲ ಕಾಡಿಗೆ ಹೊರಟು ಹೋಗೋಣ ಎಂದು ನಿರ್ಧರಿಸಿ ಎಲ್ಲ ಹಸುಗಳು ಕಾಡಿಗೆ ಹೋಗುತ್ತವೆ. ಇತ್ತ ಗರ್ಭಿಣಿಯಾಗಿದ್ದ ಕಸಾಯಿಯ ಹೆಂಡತಿಯು ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಮಗುವಿಗೆ ಹಾಲುಣಿಸಲು ಅವಳೆದೆಯಲ್ಲಿ ಹಾಲು ಬಾರದಾದಾಗ ವೈಧ್ಯರು ಹಸುವಿನ ಹಾಲನ್ನು ಕುಡಿಸಿದರೆ ಮಾತ್ರ ಮಗುವು ಬದುಕಲು ಸಾಧ್ಯ ಎಂದು ಹೇಳುತ್ತಾರೆ. ಆದರೆ ಇಡೀ ಊರಿನಲ್ಲಿ ಎಲ್ಲೇ ಹುಡುಕಿದರೂ ಒಂದೇ ಒಂದು ಹಸುವಿನ ಸುಳಿವಿಲ್ಲ. ಮಗುವಿನ ಪ್ರಾಣ ಉಳಿಸಲು ಕಸಾಯಿ ಹಸುವನ್ನು ಅರಸುತ್ತ ಕಾಡಿಗೆ ಹೋದ. ಆಗ ಕಸಾಯಿಗೆ ಎದುರಾದ ಹಸುವಿಗೆ ತನ್ನ ಸಮಸ್ಯೆಯನ್ನು ಹೇಳಿಕೊಂಡಾಗ ಕಸಾಯಿಯನ್ನು ಕುರಿತು ಆ ಹಸು “ಕಾಲ ಹೇಗಿದೆ ನೋಡು. ಅಂದು ನನ್ನ ಕೆಚ್ಚಲು ತುಂಬಿತ್ತು ಕರುವಿಗೆ ಹಾಲುಣಿಸಿ ಬರುತ್ತೇನೆ ಬಿಡು ಎಂದು ಹೇಳಿದಾಗ ನೀನು ಬಿಡಲಿಲ್ಲ. ಆದರೆ ಇಂದು ನಿನ್ನ ಮಗುವಿಗೆ ಅದೇ ಹಾಲು ಬೇಕು ಎಂದಾಗ ನಮ್ಮನ್ನು ಅರಸಿಕೊಂಡು ಬಂದೆಯಲ್ವಾ?” ಎಂದು ಕೇಳುತ್ತಲೇ ಕಸಾಯಿ ತಲೆ ತಗ್ಗಿಸಿ ನಿಂತುಕೊಂಡ. ಮತ್ತೇ ಮುಂದುವರೆದ ಹಸು “ನಾನು ನಿನ್ನ ಜೊತೆ ಬಂದರೆ ನನ್ನನ್ನು ಕೊಲ್ಲುತ್ತೀಯಾ ಎಂದು ಗೊತ್ತು. ಆದರೂ ನಾನು ಬಂದು ನಿನ್ನ ಮಗುವಿಗಾಗಿ ಹಾಲು ನೀಡುತ್ತೇನೆ. ಕಾರಣ ಇಷ್ಟೆ ನಾನು ಇರುವುದೇ ಬೇರೊಬ್ಬರಿಗಾಗಿ ನನ್ನ ಇಡೀ ಜೀವನ ಪರರಿಗೆ ಮೀಸಲು” ಎಂದು ಹೇಳಿದಾಗ ಕಣ್ಣೀರು ಸುರಿಸಿದ ಕಸಾಯಿ ತನ್ನ ಕಾರ್ಯವನ್ನು ಬಿಟ್ಟು ಹಸು ಸಾಕಿಕೊಂಡೆ ಜಿವನ ಸಾಗಿಸುತ್ತಾನೆ. ನೋಡಿ ಒಬ್ಬ ಕಟುಕನ ಮನಸ್ಸನ್ನು ಪರಿವರ್ತಿಸಲು ಹಸುವೇ ಮಾತಾಡಬೇಕಾಯಿತು ಎಂದಮೇಲೆ ಎಲ್ಲವನ್ನು ಅರಿತ ಕಸಾಯಿಗಳಂತೆ ಬದುಕುತ್ತಿರುವ ಮನುಷ್ಯರು ಇನ್ನಾದರೂ ಬದಲಾಗಬಾರದೇ...? ಮನುಷತ್ವದ ಗುಣಗಳನ್ನು ಕಲಿಸಿಕೊಟ್ಟ ಗೋಮಾತೆಯ ರಕ್ಷಣೆ ಮಾಡಲು ಮುಂದಾಗಬಾರದೇ...? ಅನ್ನ ಹಾಕಿದ ಮನೆಗೆ ಕನ್ನ ಹಾಕುವುದು ಎಂಥ ಘಾತುಕವೋ ಹಾಗೇ ಹಾಲುಣಿಸಿದ ಮಾತೆಯನ್ನು ಕೊಲ್ಲುವುದು ಅದಕ್ಕಿಂತ ಘಾತುಕವಾಗಿದೆ ಇನ್ನಾದರು ಅರ್ಥ ಮಾಡಿಕೊಳ್ಳಿ.
- * * * -