ಚಳಿಗಾಲದ ಹಿನ್ನೆಲೆ: ಬದರಿನಾಥ, ಕೇದಾರನಾಥ ದೇವಾಲಯ ಬಂದ್

ಉತ್ತರಾಖಂಡ, ಅ, 9:  ಚಳಿಗಾಲ ಆರಂಭವಾಗಲಿರುವ ಕಾರಣ ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳನ್ನು ಮುಚ್ಚಲಾಗುತ್ತಿದೆ. ಇದೇ  29ರಂದು ಕೇದಾರನಾಥ ದೇವಾಲಯ ಹಾಗೂ ನವೆಂಬರ್ 17ರಿಂದ ಬದ್ರೀನಾಥ ದೇವಾಲಯದ ಬಾಗಿಲುಗಳು ಮುಚ್ಚಲಿವೆ. 

ಬದರೀನಾಥ್ ದೇವಾಲಯದ ಮುಖ್ಯ ಅರ್ಚಕರಾದ ಈಶ್ವರಿ ಪ್ರಸಾದ್ ನಂಬೂದರಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಚಳಿಗಾಲದ ಕಾರಣ ನವೆಂಬರ್ 17ರಂದು ಸಂಜೆ 5.13ಕ್ಕೆ ಬದ್ರೀನಾಥ ದೇವಾಲಯವನ್ನು ಮುಚ್ಚಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. 

ಕೇದಾರನಾಥ ದೇವಾಲಯವನ್ನು ಇದೇ 29ರಂದು ಬೆಳಗ್ಗೆ 8.30ಕ್ಕೆ ಮುಚ್ಚಲಾಗುತ್ತಿದೆ. ಈ ವರ್ಷ ಕೇದಾರನಾಥ ಮತ್ತು ಬದರಿನಾಥ  ದೇವಾಲಯಗಳಿಗೆ ದಾಖಲೆ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆ. ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳು ಬಾಗಿಲು ಮುಚ್ಚುವಾಗ ಅನೇಕ ಧಾರ್ಮಿಕವಿಧಿ ವಿಧಾನಗಳು ನೆರವೇರಲಿವೆ. ಬದರಿನಾಥ  ಪ್ರಸಿದ್ಧ ಹಿಂದೂ ದೇವಾಲಯವಾಗಿದ್ದು, ಇಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತಿದೆ.  ಕೇದಾರನಾಥ, ಬದರಿನಾಥ , ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಈ ಪ್ರದೇಶಗಳಲ್ಲಿ ಅತಿಯಾದ ಹಿಮ ಸುರಿಯುವ ಕಾರಣ ಯಾರು ಹೋಗಲು ಆಗುವುದಿಲ್ಲ.