2 ಏಕದಿನ ಪಂದ್ಯಗಳಿಗೆ ವಿಲಿಯಮ್ಸನ್ ಇಲ್ಲ: ಮಾರ್ಕ್ ಚಾಪ್ಮನ್‌ಗೆ ಅವಕಾಶ

ನವದೆಹಲಿ, ಫೆ 4 ಭಾರತದ ವಿರುದ್ಧ ಮುಂಬರುವ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಿಗೆ ನಿಯಮಿತ ನಾಯಕ ಕೇನ್ ವಿಲಿಯಮ್ಸನ್ ಅವರು ಹೊರಗುಳಿಯಲಿದ್ದಾರೆ. ಇವರ ಬದಲು ನ್ಯೂಜಿಲೆಂಡ್ ಎ ಪರ ಅದ್ಭುತ ಪ್ರದರ್ಶನ ತೋರಿದ್ದ ಮಾರ್ಕ್ ಚಾಪ್ಮನ್ ಸ್ಥಾನ ಪಡೆದಿದ್ದಾರೆ.ಕಳೆದ ಬುಧವಾರ ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ಮೂರನೇ ಟಿ-20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಕೇನ್ ವಿಲಿಯಮ್ಸನ್ ಅವರ ಭುಜಕ್ಕೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಟಿ-20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಟಿ-20 ಸರಣಿಯಲ್ಲಿ ನ್ಯೂಜಿಲೆಂಡ್ 0-5 ಅಂತರದಲ್ಲಿ ಭಾರತದ ಎದುರು ವೈಟ್‌ವಾಷ್‌ ಅನುಭವಿಸಿತ್ತು.

"ಗಾಯಾಳು ಕೇನ್ ವಿಲಿಯಮ್ಸನ್ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಲಾಗಿತ್ತು. ಆದರೆ, ಅವರ ಗಾಯದ ಪ್ರಮಾಣ ಗಂಭೀರವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಅವರು ಇನ್ನೇರಡು ದಿನಗಳ ಕಾಲ ವಿಶ್ರಾಂತಿ ಪಡೆದ ಬಳಿಕ ತಂಡ ಕೂಡಿಕೊಳ್ಳಲಿದ್ದಾರೆ,'' ಎಂದು ತಂಡದ ಫಿಜಿಯೊ ವಿಜಯ್ ವಲ್ಲಭ್ ತಿಳಿಸಿದ್ದಾರೆ."ಫಿಟ್ನೆಸ್ ತರಬೇತಿಯನ್ನು ಅವರು ಆರಂಭಿಸಿದ್ದು, ಮುಂದಿನ ಶುಕ್ರವಾರ ಬ್ಯಾಟಿಂಗ್ ಅಭ್ಯಾಸ ನಡೆಸಲಿದ್ದಾರೆ. ಇವರ ಫಿಟ್ನೆಸ್ ಗಮನಿಸಿದ ಬಳಿಕ ಮುಂದಿನ ಮೂರು ಪಂದ್ಯಗಳಿಗೆ ಪರಿಗಣಿಸಲಾಗುವುದು,'' ಎಂದು ಹೇಳಿದ್ದಾರೆ. ಕೇನ್‌ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಟಾಮ್ ಲಥಾಮ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಬಾಂಗ್ಲಾದೇಶ ವಿರುದ್ಧದ  ಲಥಾಮ್ ತಂಡದ ಸಾರಥ್ಯ ವಹಿಸಿದ್ದರು.