ಬೆಂಗಳೂರು, ಮೇ 12, ಎಪಿಎಂಸಿ ಕಾಯಿದೆಯ ತಿದ್ದುಪಡಿಗಾಗಿ ಕೊರೊನಾ ಸಮಯದಲ್ಲಿ ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ತರುವ ಅವಶ್ಯಕತೆ ಇದೆಯೇ? ಎಂದು ಸರ್ಕಾರವನ್ನು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಈ ಕಾಯಿದೆ ಜಾರಿಯಿಂದ ರೈತರು ಉದ್ಧಾರವಾಗುವುದಿಲ್ಲ ಎಂದು ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಉಳಿಯಬೇಕಾದರೆ ಈ ಕಾಯಿದೆ ತಿದ್ದುಪಡಿಯ ವಿರುದ್ಧ ರೈತರೇ ಹೋರಾಟ ಮಾಡಬೇಕು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಪ್ರಧಾನಿಗಳ ಆದೇಶದ ಮೇರೆಗೆ ಕಾಯಿದೆ ಜಾರಿ ಮಾಡಲಾಗಿದೆ.ತಿದ್ದುಪಡಿ ಮಾಡುವುದರಿಂದ ಸರ್ಕಾರಕ್ಕೆ 600 ಕೋಟಿ ನಷ್ಟವಾಗುತ್ತದೆ ಎಂದಿದ್ದಾರೆ.
ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಲು ಈ ಕಾನೂನು ತರಲು ಮುಂದಾಗಿದ್ದಾರೆ. ಕಾಯಿದೆ ಜಾರಿಗೂ ಮುನ್ನ ಸರ್ಕಾರ ವಿಧಾನಮಂಡಲ ಅಧಿವೇಶನ ಕರೆದು ಚರ್ಚೆ ಮಾಡಲಿ. ತರಾತುರಿಯಲ್ಲಿ ಕಾಯಿದೆ ಜಾರಿಗೆ ತರುವುದು ಬೇಡ ಎಂದು ಆಗ್ರಹಿಸಿದರು.
ದೇಶ್ಯಾದ್ಯಂತ ಕೊರೊನಾ ತಾಂಡವ ಆಡುತ್ತಿದೆ. ಕೊರೊನಾ ಹರಡುವಿಕೆ ತಡೆಯುವತ್ತ ಲಕ್ಷ್ಯವಹಿಸಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಜನ ಲಾಕ್ ಡೌನ್, ಸಾಮಾಜಿಕ ಅಂತರದ ಪಾಲನೆ ಮಾಡಿದ್ದಾರೆ. ಶೇ. 80ರಷ್ಟು ಜನ ಸರ್ಕಾರದ ಎಲ್ಲಾ ಆದೇಶಕ್ಕೆ ಸ್ಪಂದನೆ ಮಾಡಿದ್ದಾರೆ. ಆದರೆ ಜನರು ಪ್ರಾರಂಭದಲ್ಲಿ ತೋರಿಸಿದ ವೇಗ ಈಗ ಕಡಿಮೆ ಆಗಿದೆ. ಲಾಕ್ ಡೌನ್ ರಿಲ್ಯಾಕ್ಸ್ ಮಾಡಲು ಪ್ರಾರಂಭ ಆಗಿದೆ. ರಾಜ್ಯದಲ್ಲಿ ಅನೇಕ ನಿಯಮ ಸಡಿಲಿಕೆ ಮಾಡಿದ್ದಾರೆ. ಸಡಿಲಿಕೆ ಮಾಡಲು ಪೂರ್ವ ಸಿದ್ಧತೆ ರಾಜ್ಯದಲ್ಲಿ ಆಗಿಲ್ಲ. ದಿನಕ್ಕೊಂದು ನಿರ್ಧಾರವನ್ನು ತೆಗೆದುಕೊಂಡು ಜನರಿಗೆ ಸರ್ಕಾರ ಗೊಂದಲ ಮೂಡಿಸಿದೆ ಎಂದರು.
ಮಹಾರಾಷ್ಟ್ರ ಸರ್ಕಾರ ಎಪಿಎಂಸಿ ಕಾಯಿದೆ ಜಾರಿಗೆ ತರಲು ಹೋಗಿ ಎಡವಿದೆ. ಅದನ್ನು ಕರ್ನಾಟಕದಲ್ಲಿ ಜಾರಿ ಮಾಡಲಾಗುತ್ತಿದೆ. ಕಷ್ಟಪಟ್ಟು ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾದರೂ ಏಕೆ? ಜನರ ಕಷ್ಟ ಪರಿಹರಿಸಲೋ?ರೈತರನ್ನು ರಕ್ಷಣೆ ಮಾಡಲೋ ಎಂದು ಕುಟುಕಿದರು.
ಪ್ರಧಾನಿಗಳ ಜನವಿರೋಧಿ ಕೆಲಸಗಳಿಗೆ ಯಡಿಯೂರಪ್ಪ ಕೈಜೋಡಿಸಬಾರದು. ಎಪಿಎಂಸಿ ಕಾಯಿದೆ ರೈತರ ಮೂಲಕ್ಕೆ ತೊಂದರೆಮಾಡುವುದಾಗಿದೆ. ರೈತರು ಇದನ್ನುಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ ಕುಮಾರಸ್ವಾಮಿ, ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಈಗ ರಾಜಕೀಯ ಮಾಡುವ ಸಮಯವಲ್ಲ. ಮಹಾಮಾರಿಯನ್ನು ಓಡಿಸುವ ಕೆಲಸವಾಗಬೇಕು. ಅದಕ್ಕಾಗಿ ತಾವು ಸರ್ಕಾರವನ್ನು ಟೀಕಿಸಲು ಹೋಗುವುದಿಲ್ಲ. ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಬರೀ ಘೋಷಣೆ ಆಗಿ ಉಳಿಯಬಾರದು. ಸರ್ಕಾರಕ್ಕೆ ಆಟೋದವರ ಮಾಹಿತಿ ಇದೆಯೇ?
ಬೆಂಗಳೂರಿನಲ್ಲಿ ಬಾಡಿಗೆ ಆಟೋ ಓಡಿಸುವವರೇ ಹೆಚ್ಚು ಜನರು ಪಾಳಿ ಲೆಕ್ಕದಲ್ಲಿ ಆಟೋ ಓಡಿಸುತ್ತಿದ್ದಾರೆ. ಇಂತಹವರಿಗೆ ಸರ್ಕಾರ ಯಾವ ಪ್ಯಾಕೇಜ್ ಕೊಡುತ್ತದೆ? ಮಾಲೀಕನ ಹೆಸರಲ್ಲಿ ಇರುವ ಆಟೋಗೆ ಚಾಲಕನಿಗೆ ಹೇಗೆ ಹಣ ಕೊಡಲು ಸಾಧ್ಯ?. ಕ್ಷೌರಿಕರು, ಮಡಿವಾಳ ಫಲಾನುಭವಿಗಳ ಆಯ್ಕೆ ಹೇಗೆ ಆಗಿದೆ ಎಂಬ ಬಗ್ಗೆ ಮಾಹಿತಿ ಇದೆಯಾ?. ಸರಿಯಾದ ಮಾಹಿತಿ ಇಲ್ಲದೆ ಪ್ಯಾಕೇಜ್ ಘೋಷಣೆ ಮಾಡಬಾರದು. ಸುಮಾರು 50 ಲಕ್ಷ ಜನರು ಈ ರೀತಿಯ ವಿವಿಧ ವರ್ಗದ ಜನರು ಇದ್ದಾರೆ. 50 ಲಕ್ಷ ಕುಟುಂಬಕ್ಕೆ 5 ಸಾವಿರ ಕೊಟ್ಟರೂ 2500 ಕೋಟಿ ಆಗಲಿದೆ. ಯಡಿಯೂರಪ್ಪ ಘೋಷಣೆ ಮಾಡಿದ ಪ್ಯಾಕೇಜ್ ಜಾರಿಗೆ ಬರುತ್ತದೆಯೋ ? ಇಲ್ಲವೋ ಬರಿ ಘೋಷಣೆ ಮಾತ್ರವೇ ಆಗಲಿದೆಯೋ? ಎಂದು ಸರ್ಕಾರವನ್ನು ಕುಮಾರಸ್ವಾಮಿ ಚುಚ್ಚಿದರು.
21 ಲಕ್ಷ ಜನ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಮಿಕರ ಹಣವನ್ನೇ ಅವರಿಗೆ ಸರ್ಕಾರ ಕೊಡ ಬಹುದು. ಇದರಿಂದ ಸರ್ಕಾರಕ್ಕೆ ಯಾವುದೇ ಹೊರೆ ಆಗುವುದಿಲ್ಲ.
ಹೂ ಬೆಳೆಗಾರರಿಗೆ ಸರ್ಕಾರ ಹಣ ಕೊಡುವುದಾಗಿ ಸರ್ಕಾರ ಹೇಳಿದೆ. ಹೂ ಬೇಳೆಗಾರರಿಗೆ ಕೇವಲ 31 ಕೋಟಿ ಬರಲಿದೆಯಷ್ಟೆ. ಹಿಂದೆ ತಾವು ಮುಖ್ಯಮಂತ್ರಿ ಆಗಿದ್ದಾಗ 140 ಕೋಟಿ ಹೂ ಬೆಳೆಗಾರರಿಗೆ ಅಭಿವೃದ್ಧಿ ಯೋಜನೆಗೆ ಹಣ ಇಡಲಾಗಿತ್ತು. ತಾವಿಟ್ಟ ಹಣದಲ್ಲಿಯೇ ಸರ್ಕಾರ ಹೂ ಬೆಳೆಗಾರರಿಗೆ ಪ್ಯಾಕೇಜ್ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಕಾರ್ಮಿಕ ಕಾಯ್ದೆ ತಿದ್ದುಪಡಿಗೂ ವಿರೋಧ ವ್ಯಕ್ತಪಡಿಸಿದ ಕುಮಾರಸ್ವಾಮಿ, 12 ಗಂಟೆ ಕೆಲಸ ಮಾಡಲು ಕಾಯ್ದೆ ತರಲು ಮುಂದಾಗಿದ್ದಾರೆ. ಸಮಯ ಹೆಚ್ಚಳಕ್ಕೆ ಹೆಚ್ಚು ಸಂಬಳ ಕೊಡುತ್ತೀರೋ? ಇಲ್ಲವೋ? ಎಂದು ಪ್ರಶ್ನಿಸಿದರು.
ಹೆಚ್ಚು ಕೆಲಸ ಮಾಡಲು ಕಾರ್ಮಿಕ ದೈಹಿಕ ಶಕ್ತಿ ಇದೆಯಾ? ಈ ಬಗ್ಗೆ ಸರ್ಕಾರ ಅರಿತಿದೆಯಾ?
ಈ ಕಾಯಿದೆ ತರಾತುರಿಯಲ್ಲಿ ಏಕೆ ತರುತ್ತಿದ್ದೀರಿ ಎಂದು ಸರಣಿ ಪ್ರಶ್ನೆಗಳನ್ನು ಹಾಕಿದ ಕುಮಾರಸ್ವಾಮಿ, ಯಾರನ್ನೋ ಕಾಪಾಡಲು ಈ ಕಾಯಿದೆ ಜಾರಿಗೊಳಿಸುತ್ತಿರುವುದು ಸರಿಯಲ್ಲ.
ಮಧ್ಯ ಪ್ರದೇಶ, ಉತ್ತರ ಪ್ರದೇಶದ ಮಾದರಿಯಲ್ಲಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡುವುದು ಸರಿಯಲ್ಲ. ಕೈಗಾರಿಕೆಗಳು ಉಳಿಯಬೇಕು. ಆದರೆ ಹೀಗೆ ತರಾತುರಿಯಲ್ಲಿ ತಿದ್ದುಪಡಿ ತರುವುದು ಸರಿಯಲ್ಲ. ಸಾರ್ವಜನಿಕ ಚರ್ಚೆಗೆ ಇಡದೇ ತರಾತುರಿಯಲ್ಲಿ ಸುಗ್ರೀವಾಜ್ಞೆ ತರುವುದು ಸರಿಯಲ್ಲ. ಕಾಯಿದೆಗೆ ಅಂಗೀಕಾರ ನೀಡದಂತೆ ರಾಜ್ಯಪಾಲರಿಗೂ ಪತ್ರ ಬರೆಯುವುದಾಗಿ ಸ್ಪಷ್ಟಪಡಿಸಿದರು.
ಬಳ್ಳಾರಿಯಲ್ಲಿ ಮೃತಪಟ್ಟ ಭೀಮಕ್ಕ ಎನ್ನುವ ಆಶಾ ಕಾರ್ಯಕರ್ತೆಗೆ ಸರ್ಕಾರ ಕೇವಲ 2 ಲಕ್ಷ ಕೊಟ್ಟಿದೆ.
ಮೋದಿ ವಾರಿಯರ್ಸ್ ಗೆ 50 ಲಕ್ಷ ಕೊಡಬೇಕು ಎಂದು ಹೇಳಿದ್ದಾರೆ. ಅದರಂತೆ ಕೂಡಲೇ ಸರ್ಕಾರ 50 ಲಕ್ಷ ಪರಿಹಾರ ನೀಡಬೇಕು. ವಿಮೆ ಜಾರಿಗೊಳಿಸಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದರು.
ಮಂಡ್ಯ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮಂಡ್ಯ ಕಾರ್ಖಾನೆಗೆ ಇತಿಹಾಸ ಇದೆ. ಸರ್ಕಾರದ ಪರಿಮಿತಿಯಲ್ಲಿ ಕಾರ್ಖಾನೆ ನಡೆಯಬೇಕು. ಕಾರ್ಖಾನೆ ಆಡಳಿತ ಮಂಡಳಿಯಿಂದ ಕಾರ್ಖಾನೆ ನಷ್ಟವಾಗಿದೆ. ಹೊಸ ಕಾರ್ಖಾನೆ ಮಾಡಲು ತಮ್ಮ ಅವಧಿಯಲ್ಲಿ 450 ಕೋಟಿ ಇಟ್ಟಿದ್ದು, ಡಿಸೆಂಬರ್ ನಲ್ಲಿ ಕಾರ್ಖಾನೆ ಖಾಸಗಿ ಅವರಿಗೆ ಕೊಡಲು ನಿರ್ಧಾರ ಮಾಡಿದ್ದಾರೆ. ಏಕೆ ಈ ನಿರ್ಧಾರ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದರು.ಮೈಶುಗರ್ ಕಾರ್ಖಾನೆ ಖಾಸಗಿ ಅವರಿಗೆ ಸರ್ಕಾರ ಕೊಡುತ್ತಿರುವುದು ರೈತರನ್ನು ಮುಳುಗಿಸುವ ಕೆಲಸ. ಉತ್ತರ ಕರ್ನಾಟಕದವರಲ್ಲಿ ಮುಗ್ಧ ರೈತರಿಗೆ ಮೋಸ ಮಾಡಿದ ಗಿರಾಕಿಗಳು ಬಂದು ಇಲ್ಲಿಗೆ ಸೇರಿಕೊಂಡರೆ ಉತ್ತರ ಕರ್ನಾಟಕದಲ್ಲಿ ನಡೆಯುವ ರೀತಿ ಮಂಡ್ಯದಲ್ಲಿ ನಡೆಯುತ್ತದೆ ಎಂದು ಕಿಡಿಕಾರಿದರು.
ಈ ವರ್ಷ ಟೆಂಡರ್ ಕೊಟ್ಟರೂ ಕೆಲಸ ಆರಂಭವಾಗದು ಎಂದು ಭವಿಷ್ಯ ನುಡಿದ ಅವರು,ಜೂನ್,ಜುಲೈಗೆ ಕಬ್ಬು ಅರೆಯಬೇಕು. ಕೂಡಲೇ ಸರ್ಕಾರ ಇದಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.ಐಡೆಕ್ ಎನ್ನುವ ಸಂಸ್ಥೆಗೆ ಈಗಾಗಲೇ ಕೊಡಲು ಮುಂದಾಗಿದ್ದಾರೆ.ಇದರಿಂದ ರೈತರಗೆ ಅನ್ಯಾಯ ಆಗಲಿದೆ. ಇದರ ಹಿಂದೆ ಬಿಜೆಪಿ ನಾಯಕರು ಇದ್ದಾರೆ ಎನ್ನುವುದು ಹಾಗೂ ಯಾರು ಹೋಗಿ ಕಾರ್ಖಾನೆ ನೋಡಿಕೊಂಡು ಬಂದಿದ್ದಾರೆ ಎಂಬುದೂ ಸಹ ತಮಗೆ ಗೊತ್ತು. ಸಮಯ ಬಂದಾಗ ಎಲ್ಲವನ್ನು ಬಹಿರಂಗಪಡಿಸುವುದಾಗಿ ಹೇಳಿದರು.
ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಕೇಂದ್ರ ಹಣ ಕೊಡುವುದರಲ್ಲಿ ಅನ್ಯಾಯ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪಗೆ ತಾವು ಕೇಂದ್ರಕ್ಕೆ ಹಣ ಕೇಳುವಂತೆ ಒತ್ತಾಯ ಮಾಡಿದ್ದು ಆ ಬಗ್ಗೆ ಯಡಿಯೂರಪ್ಪ ಏನು ಮಾಡಿದ್ದಾರೋ ಗೊತ್ತಿಲ್ಲ ಎಂದರು.
ಪ್ರಧಾನಿ ಮೋದಿ ಭಾಷಣದ ಬಗ್ಗೆ ತಮಗೇನು ನಿರೀಕ್ಷೆ ಇಲ್ಲ. ಮಾಮೂಲಿ ಭಾಷಣ ಮಾಡುತ್ತಾರೆ. ಅದಕ್ಕೆ ಜನ ಮರುಳಾಗುತ್ತಾರಷ್ಟೆ. ಪ್ರಧಾನಮಂತ್ರಿ ಸುರಕ್ಷಾ ನಿಧಿ ಬಗ್ಗೆ ಮಾಹಿತಿ ಮಾಹಿತಿ ಕೊಡದೇ ಇರುವುದೇ ಮೋದಿ ಆಡಳಿತವಾಗಿದೆ. ಮೋದಿ ಭಾಷಣ ಕೇಳಲು ಚೆಂದ. ಅದನ್ನು ಕೇಳಿಸಿಕೊಂಡು ಸುಮ್ಮನೆ ಇರಬೇಕು ಅಷ್ಟೇ. ಕಳೆದ ಏಳು ವರ್ಷಗಳಿಂದ ತಾವು ಕೇಳುತ್ತಲೇ ಇದ್ದು, ಹಾಗೆಯೇ ಮುಂದೆ ಕೂಡ ಕೇಳಿಕೊಂಡು ಇರಬೇಕು ಅಷ್ಟೇ ಕುಮಾರಸ್ವಾಮಿ ವ್ಯಂಗ್ಯವಾಡಿದರು.ಸರ್ಕಾರ ವಿಪಕ್ಷಗಳ ಸಲಹೆಗಳನ್ನು ಸ್ವೀಕಾರ ಮಾಡದೇ ಇದ್ದರೆ ರೈತರೆ ಹೋರಾಟಕ್ಕೆ ಇಳಿಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದ ಅವರು, ತಾವೇನು ವರ್ಗಾವಣೆಗಾಗಿ ಮುಖ್ಯಮಂತ್ರಿ ಬಳಿ ಹೋಗಬೇಕಿಲ್ಲ. ಹೀಗಾಗಿ ನಮ್ಮೆಲ್ಲ ಒತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.ಇಲ್ಲದೆ ಹೋದಲ್ಲಿ ಸರ್ಕಾರದ ವಿರುದ್ಧ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.