ಬೆಂಗಳೂರು, ಆ 21 ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುತ್ತದೆಯೋ ಅಥವಾ ಅಸ್ಥಿರಗೊಳ್ಳುತ್ತದೆಯೋ ಯಾವುದೂ ತಮಗೆ ಗೊತ್ತಿಲ್ಲ, ತಾವೆಲ್ಲಿಯೂ ಬಿಜೆಪಿ ಸೇರುವುದಾಗಿ ಹೇಳಿಕೆ ನೀಡಿಲ್ಲ ಎಂದು ಅನರ್ಹ ಶಾಸಕ ಮುನಿರತ್ನ ಸ್ಪಷ್ಟಪಡಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಅಸಮಾಧಾನಗೊಂಡಿರುವವರಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಸಚಿವ ಸ್ಥಾನ ನೀಡುವಂತೆ ನಾವು ಯಾರನ್ನೂ ಕೇಳಿಲ್ಲ. ಸಂಪುಟ ವಿಸ್ತರಣೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.
ಕಾಂಗ್ರೆಸ್ನವರಿಗೆ ನಾವು ಬೇಡ. ನಮಗೂ ಅವರು ಬೇಡ. ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ತಲೆಕೆಡಿಸಿಕೊಂಡಿದ್ದು, ಆ ಬಗ್ಗೆ ಮಾತ್ರ ತಮ್ಮೆಲ್ಲರ ಮೊದಲ ಆದ್ಯತೆ. ಉಳಿದ ಅನರ್ಹ ಸ್ನೇಹಿತರು ನ್ಯಾಯಾಲಯದಲ್ಲಿ ವಿಚಾರಣೆ ಸಂಬಂಧ ದೆಹಲಿಗೆ ಹೋಗಿದ್ದಾರೆ. ತಾವು ತಿರುಪತಿಗೆ ಹೋಗಬೇಕಾಗಿರುವುದರಿಂದ ರಮೇಶ್ ಜಾರಕಿಹೊಳಿ ಅವರ ಜೊತೆ ದೆಹಲಿಗೆ ತೆರಳಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.