ಶಿಂದೆ ಕೇಂದ್ರ ಸಂಪುಟ ಸೇರಲಿ ಫಡಣವೀಸ್ ಸಿಎಂ ಆಗಲಿ: ರಾಮದಾಸ್ ಅಠವಳೆ

ಬಿಜೆಪಿ ಮುಖಂಡ ರಾಮದಾಸ್ ಅಠವಳೆ

ನವದೆಹಲಿ 27: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಆಯ್ಕೆಯು ಕಗ್ಗಂಟಾಗಿದ್ದು, ಮಹಾಯುತಿಯ ಮಿತ್ರ ಪಕ್ಷಗಳಾದ ಬಿಜೆಪಿ, ಎನ್‌ಸಿಪಿ ಹಾಗೂ ಶಿವಸೇನೆ ನಡುವೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆಯೇ ಬಿಜೆಪಿಯು ದೇವೇಂದ್ರ ಫಡಣವೀಸ್ ಅವರು ಮುಖ್ಯಮಂತ್ರಿಯಾಗಲಿ, ಎನ್‌ಸಿಪಿಯ ಏಕನಾಥ ಶಿಂದೆ ಅವರು ಕೇಂದ್ರ ಸಂಪುಟ ಸೇರುವ ಮೂಲಕ ತ್ವರಿತ ನಿರ್ಧಾರವಾಗಲಿ ಎಂಬ ಸಲಹೆಯನ್ನು ಬಿಜೆಪಿ ಮುಖಂಡ ರಾಮದಾಸ್ ಅಠವಳೆ ಹೇಳಿದ್ದಾರೆ.

‘288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ ಪಕ್ಷಗಳ ಸಾಲಿನಲ್ಲಿ ಬಿಜೆಪಿ ಮೊದಲಿದೆ. ಹೀಗಾಗಿ ಕೇಸರಿ ಪಕ್ಷಕ್ಕೇ ಮುಖ್ಯಮಂತ್ರಿ ಸ್ಥಾನ ಲಭಿಸಬೇಕು’ ಎಂದು ಅಠಾವಳೆ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯವರು ಫಡಣವೀಸ್ ಅವರ ಹೆಸರನ್ನು, ಶಿವಸೇನೆಯವರು ಏಕನಾಥ ಶಿಂದೆ ಆಗಬೇಕೆಂದು ಬಯಸುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ನಾನಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಯಾವುದೇ ವಿಳಂಬವಿಲ್ಲದೆ, ಇಬ್ಬರಲ್ಲಿ ಒಬ್ಬರನ್ನು ತ್ವರಿತವಾಗಿ ಆಯ್ಕೆ ಮಾಡಬೇಕಿದೆ’ ಎಂದಿದ್ದಾರೆ.

ಫಡಣವೀಸ್ ಅವರು ಮುಖ್ಯಮಂತ್ರಿಯಾಗಬೇಕು. ಶಿಂದೆ ಅವರು ಉಪಮುಖ್ಯಮಂತ್ರಿಯಾಗಲಿ ಅಥವಾ ಕೇಂದ್ರ ಸರ್ಕಾರವನ್ನು ಸೇರಿಕೊಳ್ಳಲಿ ಎಂಬ ಸಲಹೆಯನ್ನು ಅಠವಳೆ ನೀಡಿದರು.