ದಿಶೆ ನಿಶ್ಚಯವಾದಾಗ ವಿಕಾಸದ ದಾರಿಯೂ ಸುಗಮವಾಗುತ್ತದೆ!

ವಿಕಾಸದ ದಾರಿಯತ್ತ ಸಾಗುವ ಪ್ರತಿಯೊಬ್ಬ ಮನುಷ್ಯನಿಗೂ ಕೂಡಾ ತನ್ನ ಆ ಜೀವನದಲ್ಲಿ ಹಲವು ಮಜಲುಗಳು ಬರುತ್ತವೆ. ಹಾಗೆ ಬರುವ ಪ್ರತಿಯೊಂದು ಮಜಲುಗಳಲ್ಲಿಯೂ ಕೂಡಾ ಸಾಕಷ್ಟು ರೀತಿಯ ಅಡಚಣೆ, ಕಷ್ಟ ತಾಪತ್ರೆಗಳು ಬರುತ್ತಲೇ ಇರುತ್ತವೆ. ಹಾಗೆ ಬರುವ ಎಲ್ಲಾ ರೀತಿಯ ಕಷ್ಟಗಳನ್ನು ಆತ ತನ್ನ ಪರಿಶ್ರಮ, ಕೌಶಲ್ಯ ಹಾಗೂ ಚಾಣಾಕ್ಷತನದಿಂದ ಬರುವ ಎಲ್ಲಾ ರೀತಿಯ ಅಡ್ಡಿ ಆತಂಕಗಳನ್ನು  ನಿವಾರಣೆ ಮಾಡಿಕೊಂಡು ಜ್ಞಾನದ ಸಫಲತೆಯ ದಿಕ್ಕಿನತ್ತ ಹೋಗುತ್ತಾನೆ. ಹಾಗಾದಾಗ ಮಾತ್ರ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಮತ್ತು ಈ ಸಮಾಜಕ್ಕೆ ಆತನ ಬಗ್ಗೆ ವಿಶ್ವಾಸ ಬರುತ್ತದೆ. ಮುಖ್ಯವಾಗಿ ಆಗ ಜಗತ್ತು  ಗೌರವಿಸುತ್ತದೆ. ವಿಕಾಸ ಹಾಗಂದ್ರೆ ಏನು ಅಂತ ಎಲ್ಲರ ಕಣ್ಮುಂದೆ ಸಾಮಾನ್ಯವಾಗಿ ಮೂಡುವ ಪ್ರಶ್ನೆ. ವಿಕಾಸ ಅಂದ್ರೆ ಕಟ್ಟಡಗಳೆ? ರಸ್ತೆಗಳೆ? ಶೌಚಾಲಯ ಒಳ ಚರಂಡಿಗಳೆ? ಶಾಲೆ, ಕೃಷಿ ಕಾರ್ಖಾನೆಗಳೆ? ಈ ಎಲ್ಲವೂ ಕೂಡಾ ಹೌದು. ಆದರೆ ಇವೆಲ್ಲವೂ ಸರಳವಾಗಿ ಆಗಬೇಕು ಅಂದ್ರೆ ಅದಕ್ಕೆ ಮೊದಲು ಮನುಷ್ಯನ ವಿಕಾಸ ಆಗಬೇಕು. ಅದು ಆಗದೆ ಹೋದರೆ ಇದ್ಯಾವುದೂ ಆಗಲು ಸಾಧ್ಯವಿಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ.  

ಮೊಟ್ಟಮೊದಲಿಗೆ ನಮ್ಮಲ್ಲಿ ಇರುವಂತಹ ತತ್ವಜ್ಞಾನವನ್ನು ಕೃತಿ ರೂಪದಲ್ಲಿ ಇಳಿಸಬೇಕು. ಆ ತತ್ವಜ್ಞಾನ ವಿಜ್ಞಾನವಾಗಿ, ವಿಜ್ಞಾನ ತಂತ್ರಜ್ಞಾನವಾಗಿ ಪರಿವರ್ತನೆ ಗೊಂಡು ಆ ತಂತ್ರಜ್ಞಾನವು ಯೋಜನೆಯಾಗಿ ರೂಪಗೊಂಡು  ಕೃತಿರೂಪದಲ್ಲಿ ಬರಬೇಕು ಮತ್ತದು ನಮ್ಮ ಕಣ್ಣಿಗೆ ಕಾಣಿಸಿದಾಗ ಮಾತ್ರ ಆ ತತ್ವ ಜ್ಞಾನವನ್ನು ಕೃತಿರೂಪಕ್ಕೆ ಇಳಿಸಿದ ಶ್ರೇಯಸ್ಸು, ಯಶಸ್ಸಿನ ಕೀರ್ತಿ ಆಗ ನಮಗೆ ಸಿಗುತ್ತದೆ. ಆ ಮಹಾನ್ ಕಾರ್ಯ ಸಾಕಾರಗೊಳ್ಳಲು ಮನುಷ್ಯನಲ್ಲಿ ಶಕ್ತಿ ಬೇಕು. ಅದು ಶಾರೀರಿಕ ಬಲ, ಮನೋಬಲ, ಭೌದ್ಧಿಕ ಬಲ ಮತ್ತು ಆತ್ಮ ಬಲ.  ಈ ನಾಲ್ಕು ಬಲಗಳು ಪ್ರತಿಯೊಬ್ಬ ಮನುಷ್ಯನಲ್ಲಿ ಇರಲೇಬೇಕಾಗುತ್ತದೆ. ಇವು ಇಲ್ಲದೇ ಹೋದರೆ ತತ್ವಜ್ಞಾನವನ್ನು ಕೃತಿ ರೂಪದಲ್ಲಿ ಇಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇದರ ಸಾಕಾರಕ್ಕಾಗಿ ಧಣಿವರಿಯದೇ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಯಾವುದೇ ಒಂದು ಉದ್ದೇಶವನ್ನು ಸಾಧಿಸಲು ಹೊರಟಾಗ ಮನುಷ್ಯನಿಗೆ ಅನೇಕ ರೀತಿಯ ಒತ್ತಡಗಳು, ಕಷ್ಟಗಳು ಬಂದೆ ಬರುತ್ತವೆ. ಹಾಗೆ ಬರುವ ಕಷ್ಟ, ಒತ್ತಡಗಳಿಗೆ ಯಾವುದೇ ಕಾರಣಕ್ಕೂ ತಲೆಬಾಗಬಾರದು. ಮುಖ್ಯವಾಗಿ ಸಾಧಿಸುವ ಛಲಗಾರ ಮತ್ತೊಬ್ಬರ ಖರೀದಿಗೆ ಸಿಗಬಾರದಯ. ಈ ತರಹದ ವ್ಯಕ್ತಿಗಳಿಂದ ಇದು ಬಹುಬೇಗ ಸಾಧ್ಯವಾಗುತ್ತದೆ! ಯಾಕೆಂದರೆ ಇವತ್ತಿನ ದುನಿಯಾದಲ್ಲಿ ಅಧಿಕಾರಿ ಹಾಗೂ ರಾಜಕಾರಣಿಗಳ ಖರೀದಿ ಅಂತು ಸರ್ವೇ ಸಾಮಾನ್ಯವಾಗಿ ನಡೆಯುತ್ತಲೇ ಇದೆ. ಹಾಗೆ ಖರೀದಿಗೆ ಸಿಗುವ ವ್ಯಕ್ತಿಗಳ ರೇಟುಗಳು ಮಾತ್ರ ಭಿನ್ನ ವಿಭಿನ್ನ  ವಾಗಿರುತ್ತವೆ. ಗ್ರಾಮ ಪಂಚಾಯತಿ ಸದಸ್ಯನ ದರ ಒಂದಿಷ್ಟಾದರೆ, ಜಿಲ್ಲಾ ಪಂಚಾಯತ, ವಿಧಾನ ಸಭಾ ಸದಸ್ಯರ ರೇಟುಗಳು ಬೇರೆ ಬೇರೆ ಆಗಿರುತ್ತವೆ. ಆದರೆ ಎಲ್ಲರೂ ಖರೀದಿಗೆ ಸಿಗುತ್ತಾರೆ! ವಿಶ್ವವಿದ್ಯಾಲಯದ ಕುಲಪಯಾಗಲು ಐದಾರು ಕೋಟಿ ಕೊಡುವವರಿಂದ ಹಿಡಿದು ಅನೇಕ ಆಯೋಗಗಳ ಅಧ್ಯಕ್ಷ, ಸದಸ್ಯರಾಗಲು ಹತ್ತಾರು ಕೋಟಿ ಕೊಟ್ಟು, ಅಧಿಕಾರದ ಗದ್ದುಗೆ ಏರುವವರಿಂದ ಮಾತ್ರ ಯಾವುದೇ ರೀತಿಯ ವಿಕಾಸ ಆಗಲು ಸಾಧ್ಯವಿಲ್ಲ!.  ಯಾವುದೇ ಒಂದು ಕ್ಷೇತ್ರ ವಿಕಾಸಗೊಳ್ಳಬೇಕಾದರೆ, ಈ ರೀತಿಯಲ್ಲಿ ಖರೀದಿಗೆ ಸಿಗದೇ ಇರುವಂತಹ ವ್ಯಕ್ತಿಗಳಿರಬೇಕು.  ಅವರ ಗುರಿ ಏನಿದೆ ಅನ್ನೊದು ಬಹಳ ಮುಖ್ಯ. ಒಬ್ಬ ವ್ಯಕ್ತಿ ಯಾವುದೇ ಗುರಿ ಉದ್ದೇಶ ಇಲ್ಲದೆ ಆತ ದಿನಕ್ಕೆ ಹನ್ನೆರಡು ಗಂಟೆ ಕೆಲಸ ಮಾಡಿದರೆ, ಆತ ಕೇವಲ ಒಬ್ಬ ಕೂಲಿ! ಆದರೆ ಆತ ಒಬ್ಬ ನೇತಾರ, ದೃಷ್ಟಾರ ಆಗಬೇಕೆಂದರೆ, ‘Think Globally Act locally’ ಇದನ್ನು ಅನುಸರಿಸಬೇಕಾಗುತ್ತದೆ.  

ಪ್ರತಿವರ್ಷ ‘international industrial development organization’ ಅನ್ನೊ ವಿಶ್ವಸಂಸ್ಥೆಯ ಭಾಗವಾದ ತಂತ್ರಜ್ಞಾನ ಸಂಸ್ಥೆಯ ವಿಭಾಗದ ವತಿಯಿಂದ ಸಮ್ಮೇಳನ ನಡೆಯುತ್ತದೆ. ಹಿಂದೊಮ್ಮೆ ನಡೆದಿದ್ದ ಆ ಸಮ್ಮೇಳನದಲ್ಲೊಮ್ಮೆ ‘ವಿಜ್ಞಾನವೇ ವಿಕಾಸದ ಮೂಲ ಎನ್ನುವ ನಿರ್ಣಯವನ್ನು ಪಾಸ್ ಮಾಡಿದ್ದರು’. ಆದರೆ ಮರುವರ್ಷ ನಡೆದ ಮತ್ತೊಂದು ಸಭೆಯಲ್ಲಿ ‘ಕೇವಲ ವಿಜ್ಞಾನದಿಂದ ಅಷ್ಟೇ ವಿಕಾಸವನ್ನು ಸಾಧಿಸಲು ಸಾಧ್ಯವಿಲ್ಲ,  ಜೊತೆಗೆ  ತಂತ್ರಜ್ಞಾನದ ಅವಶ್ಯಕತೆಯೂ ಇದೆ ಎಂಬ ಅಂತಿಮ ನಿರ್ಣಯವನ್ನು ಮಂಡಿಸಲಾಗಿತ್ತು. ವಿಜ್ಞಾನ ಹಾಗೂ ತಂತ್ರಜ್ಞಾನದ ಒಟ್ಟಿಗೆ ಹಲವು ವರ್ಷಗಳ ಕಾಲ ಕೆಲಸ ಮಾಡುತ್ತಾರೆ.  ತದ ನಂತರ ಮತ್ತೆ ಅವರಿಗೆ ಅನಿಸಿದ್ದು ಈ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕಿಂತ ಮೊದಲು ಮನುಷ್ಯ ಸರಿ ಆಗಬೇಕು, ಆತನ ಪರಿಪೂರ್ಣ ವಿಕಾಸವಾಗದೆ ಇದ್ಯಾವುದೂ ಸಾಧ್ಯವಿಲ್ಲ ಅನ್ನೋ ಪ್ರಮುಖ ನಿರ್ಣಯವನ್ನು ಪಾಸ್ ಮಾಡಿದ್ದರು. ನಾವು ವಿಕಾಸದ ಬಗ್ಗೆ ಯೋಚಿಸಬೇಕಾದರೆ ಮೊದಲು ಮನುಷ್ಯನ ಬಗ್ಗೆಯೇ ಯೋಚಿಸ ಬೇಕು. ಯಾಕೆಂದರೆ ತಂತ್ರಜ್ಞಾನ, ವಿಜ್ಞಾನ, ತತ್ವಜ್ಞಾನ ಎಷ್ಟೇ ಇದ್ದರೂ ಅದು ಪರಿಪೂರ್ಣ ವಿಕಾಸವಲ್ಲ. ಎಷ್ಟೇ ದೊಡ್ಡ ದೊಡ್ಡ ಕಟ್ಟಡಗಳನ್ನ ಕಟ್ಟಿದರೂ ಆ ಕಟ್ಟಡ ಕಟ್ಟಿದ ವ್ಯಕ್ತಿ ಅದನ್ನು ಸರಿಯಾಗಿ ಕಟ್ಟದೆ ಹೋದರೆ ಅದು ಯಾವಾಗ ಬೇಕಾದರೂ ಬಿದ್ದು ಹೋಗಬಹುದು. ಹಾಗಾಗಿ ಮೊದಲು ಮನುಷ್ಯ ಸರಿಯಾಗಬೇಕು.  

ಇತ್ತೀಚಿಗೆ ಜಗತ್ತು ನೋಡುವ ದೃಷ್ಟಿ ಮನುಷ್ಯನ ವಿಕಾಸದ ಬುನಾದಿಯನ್ನು. ಈ ಮೊದಲು ಪಶ್ಚಿಮ ದೇಶಗಳ ಚಿಂತನೆಯ ದಾರಿದ್ರ್ಯ ಎಷ್ಟಿತ್ತೆಂದರೆ, ‘Man is a fundal of desires’ ಇದು ಅವರು ಮನುಷ್ಯನನ್ನು ನೋಡಿದಂತಹ ದೃಷ್ಟಿಕೋನ. ಮಾನವನ ವಿಕಾಸದ ಕುರಿತು ಭಾರತಕ್ಕಿರು ದೃಷ್ಟಿಕೋನವನ್ನು ಇದೀಗ ಜಗತ್ತು ಒಪ್ಪಿಕೊಳ್ಳುತ್ತಿದೆ. ಮನುಷ್ಯ ಅಂದ್ರೆ ಆತನಿಗೊಂದ ಶರಿರ ಇದೆ, ಬುದ್ದಿ ಇದೆ ಅಂತ ಮಾತ್ರ ಜಗತ್ತು ಈ ಮೊದಲು ಒಪ್ಪಿಕೊಂಡಿತ್ತು. ಆದರೆ ಮನುಷ್ಯನಿಗೆ ಮನಸ್ಸು ಅನ್ನುವುದೊಂದಿದೆ ಎನ್ನುವುದನ್ನು ಜಗತ್ತು ಇತ್ತೀಚಿನ ವರೆಗೂ ಒಪ್ಪಿಕೊಂಡಿರಲಿಲ್ಲ. ಈಗ ಒಪ್ಪಿಕೊಂಡಿದೆ. ಆ ಮನಸ್ಸೆ, ಭಾರತದ ‘ಯೋಗ’. ಕೇವಲ ಕೈಕಾಲುಗಳನ್ನು ತಿರುಗಿಸುವುದು ಮಾತ್ರ ಯೋಗ ಅಲ್ಲ. ಒಂದುವೇಳೆ  ಕೈಕಾಲುಗಳನ್ನಷ್ಟೆ ತಿರುಗಿಸುವುದು ಯೋಗ ಆಗಿದ್ದರೆ, ಜಿಮ್ನಾಸ್ಟಿಕ್ ಯೋಗದ ಅಪ್ಪ ಅಂತ ಕರೆಯಿಸಿಕೊಳ್ಳುತ್ತಿತ್ತಲ್ಲವೇ? ಬದಲಾಗಿ ’ಯಮಾ, ನಿಯಮ’ ಮೊದಲು, ಆಮೇಲೆ ಆಸನ, ಪ್ರಾಣಾಯಾಮ ನಂತರ ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಈ ಎಂಟು ಅಂಗಗಳಿವೆ. ಒಂದೊಂದು ಮೆಟ್ಟಿಲುಗಳನ್ನು ದಾಟಿ ಹಂತ ಹಂತವಾಗಿ ವಿಕಾಸ ಹೊಂದುತ್ತ  ಹೋಗಬೇಕು.  

ಮನಸ್ಸಿನ ಜೊತೆಗೆ ಆತ್ಮವೂ ಇದೆ ಅನ್ನೊದನ್ನು ಜಗತ್ತು ಇವತ್ತಿಗೂ ಒಪ್ಪಿಕೊಂಡಿಲ್ಲ. ತಪಸ್ಸಿನಿಂದ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವ, ಆತ್ಮವನ್ನು ದರ್ಶಿಸುವ ಆ ಒಂದು ಸಂಶೋಧನೆ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನಡೆದು ಹೋಗಿದೆ. ಶರೀರ, ಬುದ್ದಿ, ಮನಸ್ಸು, ಆತ್ಮ ಈ ನಾಲ್ಕು ಶಕ್ತಿಗಳ ಸಮುತ್ಕರ್ಷವೆ ಮಾನವ. ಶರೀರಕ್ಕೆ ಚುಚ್ಚಿದರೆ ಮನಸ್ಸಿಗೆ ನೋವಾಗುತ್ತದೆ, ಆಗ ಬುದ್ದಿ ಯೋಚಿಸುತ್ತದೆ ಹಾಗಾಗಿ ಮಾನವ ಪ್ರಜ್ಞಾವಂತ. ಮನುಷ್ಯ ಯೋಚಿಸುವುದಕ್ಕೂ ಮತ್ತು  ಪ್ರಾಣಿಗಳ ಬುದ್ಧಿಶಕ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ನಾಯಿಗೆ ಕಲ್ಲಿನಿಂದ ಹೊಡೆದರೆ ಅದು ಅಲ್ಲಿಂದ ಓಡಿಹೋಗುತ್ತದೆ. ಅಥವಾ ಕಚ್ಚೊಕೆ ಬರಬಹುದು. ಇಲ್ಲ ಅಂದ್ರೆ ಬೊಗಳಬಹುದು. ಅದಕ್ಕೆ ಕೇವಲ ಈ ಮೂರು ಪ್ರತಿಕ್ರಿಯೆಗಳನ್ನು ಮಾತ್ರ ಮಾಡಲು ಸಾಧ್ಯ ಆಗುತ್ತದೆ ವಿನಹ: ನಾಲ್ಕನೆಯ  ಯಾವುದೇ ಪ್ರತಿಕ್ರಿಯೆಯನ್ನು  ಅದಕ್ಕೆ ಮಾಡಲು ಬರುವುದಿಲ್ಲ. ಉದಾ: ಧಾರವಾಡದ ಚಿಗರಿ ಬಸ್ಸುಗಳಲ್ಲಿ, ಮೆಟ್ರೋ ರೈಲುಗಳಲ್ಲಿ ಅನೌನ್ಸ್‌ ಮಾಡುವ ಸಿಸ್ಟಮ್ ಇರುತ್ತದೆಯಲ್ಲ, ಅದನ್ನು ಪ್ರೋಗ್ರಾಮ್ ಮಾಡಿ ಹಾಕಿರುತ್ತಾರೆ. ಹಾಗಾಗಿ ಅದು ಅಷ್ಟೇ ಅನೌನ್ಸ್‌ ಮಾಡುತ್ತದೆ ಹೊರತು ತನಗೆ ತಿಳಿದ ಹಾಗೆ ಅನೌನ್ಸ್‌ ಮಾಡಲು ಅದರಿಂದ ಸಾಧ್ಯವಿಲ್ಲ. ಹಾಗೇಯೇ ಪ್ರಾಣಿಗಳ ಬುದ್ದಿ ಶಕ್ತಿ ಕೂಡಾ ಒಂದು ರೀತಿ ಪ್ರೊಗ್ರಾಮ್ಡ್‌ ರೀತಿಯಲ್ಲಿರುತ್ತದೆ. ಯಾಕೆಂದರೆ ಅವುಗಳ ಬೆನ್ನೆಲುಬು ನೆಲಕ್ಕೆ ಸಮಾನ. ಭಗವಂತ ಸೃಷ್ಠಿಸಿರುವ ಜೀವಿಗಳ ಪೈಕಿ ಮನುಷ್ಯನ ಬೆನ್ನೆಲುಬು ಮಾತ್ರ ಲಂಬವಾಗಿರುತ್ತದೆ. ಮನುಷ್ಯ ಬೆಳವಣಿಗೆ ಆಗಬೇಕಿರುವುದು ಏರುಮುಖವಾಗಿ. ಅವನ ಸರ್ವಾಂಗೀಣ ವಿಕಾಸ ಶರೀರ ವಿಕಾಸದಿಂದಲೇ ಆಗಬೇಕು. ಯಾಕೆಂದರೆ ಶರೀರದ ವಿಕಾಸ ಆಗದೇ ಮನಸ್ಸಿನ ವಿಕಾಸ ಆಗಲ್ಲ. ಮನಸ್ಸಿನ ವಿಕಾಸ ಆಗದೆ ಬುದ್ದಿಯ ವಿಕಾಸ ಆಗುವುದಿಲ್ಲ. ಬುದ್ದಿಯ ವಿಕಾಸ ಆಗದಿದ್ದರೆ ಆತ್ಮದ ವಿಕಾಸ ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಂದು ವಿಕಾಸ ಕ್ರಮೇಣವಾಗಿ ಮುಂದೆ ಹೋಗಬೆಕು. ಮನೋಭಲ ಇಚ್ಛಾಶಕ್ತಿಯು ದಿನಕ್ಕೆ ನೂರಕ್ಕಿಂತ ಹೆಚ್ಚು ಸೂರ್ಯ ನಮಸ್ಕಾರ ಮಾಡುವುದರಿಂದ ಹೆಚ್ಚಾಗುತ್ತದೆ. ಆ ಇಚ್ಚಾ ಶಕ್ತಿಯ ಮೂಲಕ ಶರೀರವನ್ನು ಧನಿಸಿ ಮಾಡುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.   

ಶರೀರದ ಮೇಲೆ ಮನಸ್ಸಿನ ಹಿಡಿತ, ಮನಸ್ಸಿನ ಮೇಲೆ ಬುದ್ದಿಯ ಹಿಡಿತ ಭಾವನೆಗಳ ಮೇಲೆ ವಿವೇಕದ ಹಿಡಿತ ಇದ್ದರೆ, ಈ ಮೂರರ ಮೇಲೂ ಆತ್ಮದ ಹಿಡಿತ ಇರುತ್ತದೆ, ಅದುವೇ ಸಾರಥಿ. ಈ ನಾಲ್ಕನ್ನು ವಿಕಾಸಗೊಳಿಸಬೇಕಾದರೆ ನಾವು ಮೊದಲು ಯಾವ ದಿಶೆಯ ಕಡೆಗೆ ಹೋಗಬೇಕು ಎಂಬುದನ್ನು ನಿಶ್ಚಯಗೊಳಿಸಬೇಕು. ಬಸ್ ನಿಲ್ದಾಣಕ್ಕೆ ಹೋದ ನಂತರ ಎಲ್ಲಿಗೆ ಹೋಗಬೇಕು ಎಂದು ನಿಶ್ಚಯಿಸುವುದಲ್ಲ, ಯಾವ ಊರು ಅಂತ ಮೊದಲು ನಿಶ್ಚಯ ಮಾಡಿಯೇ ಮನೆಯಿಂದ ಹೊರಡಬೇಕು. ಹಾಗಾಗಿ ವಿಕಾಸ ಎಂದರೆ ಆ ದಿಶೆಯ ಸ್ಪಷ್ಟತೆ ಇರಬೇಕು. ಹಾಗೂ ಆತನಲ್ಲಿ ಗೊಂದಲಗಳಿರಬಾರದು. ಯಾವ ಮನುಷ್ಯ ತನ್ನೊಳಗೆ ಗೊಂದಲಗಳನ್ನು ಇಟ್ಟುಕೊಂಡಿರುತ್ತಾನೊ ಆತ ಬೇರೆಯವರು ಹೇಳಿದ ಹಾಗೆಯೇ ಕೇಳುತ್ತಾನೆ. ಗೊಂದಲಗಳಿರದಿದ್ದರೆ ಆತ ಹೇಳಿದವರಿಗೆ ಸರಿಯಾದ ಉತ್ತರವನ್ನು ಕೊಡುತ್ತಲಿರುತ್ತಾನೆ. ಆದ್ದರಿಂದ ದಿಶೆಯ ಸ್ಪಷ್ಟತೆಯೂ ಕೂಡಾ ವಿಕಾಸದ ಅಂಶ.  

ದಿಶೆ ನಿಶ್ಚಯವಾದಮೇಲೆ ವಿಕಾಸದ ದಾರಿಯನ್ನು ನಿರ್ಣಯ ಮಾಡಬೇಕಾಗುತ್ತದೆ. ಯಾರೆಲ್ಲ ಈ ದೇಶದ  ತತ್ವಜ್ಞಾನವನ್ನು ಅಧ್ಯಯನ ಮಾಡಿ ಅದನ್ನು ಕೃತಿರೂಪಕ್ಕೆ ಇಳಿಸಿ ಅದರ ಅನುಭವವನ್ನು ತೆಗೆದುಕೊಂಡಿದ್ದಾರೋ, ಅಂತವರ ಮಾರ್ಗದರ್ಶನವನ್ನು ಸದಾ ಪಡೆದುಕೊಳ್ಳುತ್ತ, ಅವರ ದಾರಿಯಲ್ಲಿಯೇ ನಾವು ಸಾಗಬೇಕಾಗುತ್ತದೆ. ಆಗ ನಮ್ಮಲ್ಲಿರುವ ಗೊಂದಲಗಳು ತನ್ನಿಂದ ತಾನೆ ನಿವಾರಣೆ ಆಗುತ್ತವೆ. ಕರ್ನಾಟಕ ವಿಶ್ವವಿದ್ಯಾಲಯದ ಸುಂದರವಾದ ಬೃಹತ್ ಕಟ್ಟಡದ ಮೇಲೆ  ’ಅರಿವೇ ಗುರು’ ಅಂತ ಫಲಕ ಹಾಕಲಾಗಿದೆ. ಅರಿವು ಇದ್ದರೆ ಗೊಂದಲಗಳಿರುವುದಿಲ್ಲ. ಅರಿವಿಲ್ಲದೆ ಕೇವಲ ಗೊಂದಲಗಳನ್ನೇ ತುಂಬಿಕೊಂಡಿರುವ ಮನುಷ್ಯನಿಗೆ,  ಸ್ವತಃ ದೇವರೇ ಪ್ರತ್ಯಕ್ಷವಾಗಿ ತನ್ನ ಹತ್ತೂ ಕೈಗಳನ್ನು ಮೇಲಕ್ಕೆ ಎತ್ತಿ ನೀನು ಉದ್ದಾರ ಆಗು ಮಗು ಅಂತ ಆಶಿರ್ವಾದ ಮಾಡಿಬಿಟ್ಟರೆ! ಆಗ ಗೊಂದಲವಿರುವ ಆ ಮನುಷ್ಯ ಓ...ದೇವರೇ! ನೀನು ಬಂದಿದ್ದು ನಿಜಾನಾ? ನೀನು ಪ್ರತ್ಯಕ್ಷವಾಗಿದ್ದು ಸತ್ಯವೇ? ಅಂತ ಕೇಳುತ್ತಾನೆ. ಹಾಗಾಗಿ ಯಾವುದೇ ಕಾರಣಕ್ಕೂ ಗೊಂದಲಗಳಿರಬಾರದು.  

ಹಿಂದೊಮ್ಮೆ ನಮ್ಮ ದೇಶದಲ್ಲಿ ಗೊಂದಲಗಳಿಗೆ ಅವಕಾಶವೇ ಇರಲಿಲ್ಲ. ಅನುಭವದಿಂದ ಬಂದಂತಹ ದಾರ್ಶನಿಕರ ತತ್ವಗಳಿದ್ದವು. ತಂತ್ರಜ್ಞಾನವಿತ್ತು, ಅದರ ಹಿಂದೆ ವಿಜ್ಞಾನವಿತ್ತು. ತತ್ವಜ್ಞಾನದಿಂದ ಹಿಡಿದು ಅನುಭವದ ವರೆಗೆ ಈಗಿರುವಷ್ಟು ಗೊಂದಲಗಳಿರಲಿಲ್ಲ. ಬದಲಾಗಿ ಸಾಧನೆಯ ಯಾತ್ರೆ ಇತ್ತು. ಆದರೆ ಅದೆಲ್ಲವನ್ನು ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಸಾಧಿಸಲಂತೂ ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ಇಂದಿನ ವಿದ್ಯಾರ್ಥಿಗಳ ವಾಸ್ತವ ಸ್ಥಿತಿ ಹೇಗಿದೆ ಗೊತ್ತಾ? ಮೂರು ತಾಸು ಪರೀಕ್ಷೆ ಬರೆದು ನೂರಕ್ಕೆ ನೂರು ಅಂಕಗಳನ್ನು ತೆಗೆದುಕೊಳ್ಳುತ್ತಾರೆ. ನೂರಕ್ಕೆ ನೂರು ಅಂಕ ತೆಗೆದುಕೊಂಡ ವಿದ್ಯಾರ್ಥಿಗೆ  ಬಹಳಷ್ಟು ಪ್ರಶ್ನೆ ಕೇಳಿದರೆ ಆತ ಆತ್ಮಹತ್ಯೆಯನ್ನೇ ಮಾಡಿಕೊಂಡು ಬಿಡುತ್ತಾನೆ! ಹಾಗಾಗಿ ಇಂದಿನ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿಯಂತೂ ಬಹಳಷ್ಟು ಗಂಭೀರದ ಸ್ಥಿತಿಯಲ್ಲಿದೆ. ಅಂಕಗಳಿಂದ ಮನುಷ್ಯನನ್ನು ಅಳೆಯುವ ಮೂಲಕ ನಮ್ಮ ವಿಕಾಸದ ಮಾರ್ಗ ಕಡು ಭ್ರಷ್ಟವಾಗಿಬಿಟ್ಟಿದೆ. ಅಂಕಗಳಿಂದ ತಮ್ಮ ಮಕ್ಕಳನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡುವಂತಹ ಅತ್ಯಂತ ಕೆಟ್ಟ ನೀಚ ಪದ್ದತ್ತಿಗೆ ಇವತ್ತಿನ ತಂದೆ ತಾಯಿಗಳು ಬಂದು ನಿಂತಿದ್ದಾರೆ. ಒಂದೆ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ ತಂಗಿಯರಲ್ಲಿ ಒಬ್ಬರಿಗೊಬ್ಬರನ್ನು ಹೋಲಿಸಿ ಅವರಿಬ್ಬರ ಮನಸ್ಸನ್ನು ಹಾಳು ಮಾಡಿ, ಅವರಿಬ್ಬರೂ ಪರಸ್ಪರ ದ್ವೇಷಿಸುವಂತೆ ಮಾಡಿ, ಕೊನೆಗೊಮ್ಮೆ ಅವರಿಬ್ಬರೂ ಸೇರಿಯೇ ಈ ತಂದೆ ತಾಯಿಯರನ್ನೇ ದ್ವೇಶಿಸುತ್ತಾರೆ. ಅಷ್ಟರ ಮಟ್ಟಿಗಿದೆ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ.  

ವಿಕಾಸದ ಹಾದಿ ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗುವುದು. ಕತ್ತಲು ಅಂದ್ರೆ ಏನು ಎಂಬುದು ಬಹಳ ಸ್ಪಷ್ಟವಿರಬೇಕು. ಕೆಲವರು ಕತ್ತಲಲ್ಲಿ ಹುಟ್ಟಿ, ಕತ್ತಲಲ್ಲಿ ಬೆಳೆದು ಆ ಕತ್ತಲಲ್ಲೇ ಸಾಯುತ್ತಾರೆ. ಅವರಿಗೆ ನಾವು ಕತ್ತಲೆಯಲ್ಲಿ ಇದ್ದಿವಿ ಅಂತ ಅನ್ನುವುದೇ ಗೊತ್ತಾಗುವುದಿಲ್ಲ, ಅದನ್ನೇ ಬೆಳಕು ಅಂತ ಭಾವಿಸಿರುತ್ತಾರೆ. ಕತ್ತಲಾದ ಮೇಲೆ ಬಹಳಷ್ಟು ಕ್ರಿಯಾಶೀಲ ರಾಗುತ್ತಾರೆ, ಬೆಳಕಾದ ಕೂಡಲೆ ಸುಮ್ಮನಾಗುತ್ತಾರೆ. ಮತ್ತೊಂದಿಷ್ಟು ಜನರು ಬೆಳಕಿನ ಕಡೆಗೆ ಹುಟ್ಟಿ ಬೆಳಕಿನಡೆಗೆ ಹೋಗುವಂತವರು. ಮುಖ್ಯವಾಗಿ ಕತ್ತಲಲ್ಲಿ ಹುಟ್ಟಿ ಬೆಳಕಿನ ಕಡೆಗೆ ಹೋಗುವುದು, ಮೃತ್ಯುವಿನಿಂದ ಅಮರತ್ವದ ಕಡೆಗೆ ಸಾಗುವುದು, ಅಸತ್ಯದಿಂದ ಸತ್ಯದ ಕಡೆಗೆ ಪ್ರಯಾಣಿಸುವುದು. ಪ್ರಕೃತಿಯ ನಿಯಮ ಕೂಡಾ ಹಾಗೆಯೇ ಇದೆ. ಉದಾ: ಒಂದು ಸಣ್ಣ ಪ್ಲಾಸ್ಟಿಕ್ ಡಬ್ಬಿಯಲ್ಲಿ ಮಣ್ಣು, ಗೊಬ್ಬರ, ನೀರು ಹಾಕಿ ಅದರಲ್ಲಿ ಒಂದು ಸಣ್ಣ ಸಸಿಯನ್ನು ನೆಟ್ಟು, ಆ ಡಬ್ಬವನ್ನು ಪ್ಯಾಕ್ ಮಾಡಿ, ಒಂದು ಕಡೆ ಸಣ್ಣದೊಂದು ತೂತು ಮಾಡಿ ಇಟ್ಟರೆ ಅದು ಯಾವ ಕಡೆಗೆ ಬೆಳೆಯುತ್ತದೆ ಅಂದ್ರೆ, ತೂತಿನಿಂದ ಬೆಳಕು ಬರುತ್ತಿರುವ ಆ ದಿಕ್ಕಿನ ಕಡೆಯೇ ಆ ಸಸಿ ಬೆಳೆಯುತ್ತದೆ. ನಾವ್ಯಾರೂ ಆ ಸಸಿಗೆ ಹೀಗೆ ಬೆಳೆಯಬೇಕು ಅಂತ ಹೇಳಿಕೊಟ್ಟಿಲ್ಲ. ಬದಲಾಗಿ ಅದು ಬೆಳಕಿನ ಕಡೆಗೆ ಬೆಳೆಯುತ್ತದೆ. ಬೆಳಕಿನ ಕಡೆಗೆ ಬೆಳೆಯುವಂತಹ ಆ ಸಣ್ಣ ಸಸಿಗೆ ಇರುವಂತಹ ಅರಿವು ಮನುಷ್ಯನಿಗೆ ಇರಬೇಕಲ್ಲವೆ?. ದಿಶೆ ನಿಶ್ಚಯವಾದ ಬಳಿಕ ಅದರ ಹಾದಿ ಅತ್ಯಂತ ಕಠಿಣತೆಯಿಂದ ಕೂಡಿದರೂ, ಆ ದಿಕ್ಕಿನಲ್ಲಿಯೇ ಸಾಗಬೇಕು.  

ನಾವು ನಿತ್ಯ ಗಂಗೆಗೆ ಪೂಜೆ ಮಾಡುತ್ತೇವೆ.  ಆ ನದಿಯನ್ನು ಯಾಕೆ ಗಂಗೆ ಅಂತ ಕರೆಯಲಾಯಿತು? ನಾವೆಲ್ಲರೂ ಗಂಗೆಗೆ ಯಾಕೆ ಪೂಜೆ ಮಾಡುತ್ತೇವೆ? ಯಾರಿಗೆ ಹುಟ್ಟುವಾಗಲೇ ಜೀವನದ ಅಂತಿಮ ಲಕ್ಷ್ಯದ ಅರಿವು ಇರುತ್ತದೆಯೋ ಅಂತವರು ಪೂಜ್ಯರಾಗುತ್ತಾರೆ ಅನ್ನೊ ಮಾತಿದೆ. ಹಾಗಾಗಿಯೇ ಗಂಗೆಗೆ ಹುಟ್ಟುವಾಗಲೇ ಗೊತ್ತು ನನ್ನ ಲಕ್ಷ್ಯ ಸಮುದ್ರವನ್ನು ಸೇರುವುದು ಅಂತ. ಹಾಗಾಗಿ ಗಂಗೆ ಪೂಜ್ಯಳು. ಆ ಲಕ್ಷ್ಯವನ್ನು ತಲುಪಲಿಕ್ಕೆ ನಾವೆಲ್ಲ ಆಯ್ಕೆ ಮಾಡಿಕೊಳ್ಳಬೇಕಿರುವ ದಾರಿ ಕೂಡಾ ಬಲು ಕಷ್ಟಗದ ದಾರಿಯೇ ಆಗಿರಬೇಕು, ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಗಂಗೆಯೂ ಕಷ್ಟದ ದಾರಿಯನ್ನೇ ಸ್ವೀಕಾರ ಮಾಡಿಕೊಳ್ಳುತ್ತಾಳೆ. ಗಂಗೆಯ ಆ ಪಯಣ ಹೇಗಿದೆ ನೋಡಿ! ಆಕೆ ಎಲ್ಲಿಂದಲೋ ಧುಮುಖಿ ಕೊರಕಲುಗಳಲ್ಲಿ ಹರಿಯುತ್ತ,  ದೊಡ್ಡ ದೊಡ್ಡ ಕೊರಕಲು ಬಂಡೆಗಳು ಬಂದರೂ ಆ ಬಂಡೆಗಳನ್ನು ಸವರಿಕೊಂಡು ಹೊಗುತ್ತಾಳೆ. ತನಗೆ ವಿರೋಧಿಸಿಲು ಬಂದವರನ್ನ ಪ್ರೀತಿಯಿಂದ ನಯವಾಗಿ ಸುತ್ತುತ್ತಾಳೆ, ಆಕೆಗೆ ಅಡ್ಡಬಂದ ಕಲ್ಲುಗಳೇ ಶಿವಲಿಂಗವಾಗಿ ಭಕ್ತಿಯಿಂದ ಪೂಜಿಸಲ್ಪಡುತ್ತವೆ. ಬಂದ ಅಡಚಣೆಗಳನ್ನು ನಿವಾರಿಸಿಕೊಂಡು ಕೊರಕಲ್ಲುಗಳಲ್ಲಿ ಹರಿಯುತ್ತ, ಬಲು ಎತ್ತರದ ಜಾಗದಿಂದ ಕೆಳಕ್ಕೆ ಧುಮುಕಿ ಕೊನೆಗೆ ಸಮುದ್ರವನ್ನು ಸೇರಿ ತನ್ನ ಅಸ್ತಿತ್ವವನ್ನು ಸಮುದ್ರದೊಂದಿಗೆ ವೀಲೀನ ಮಾಡಿಕೊಳ್ಳುತ್ತಾಳೆ. ಅದಕ್ಕಾಗಿ ಗಂಗೆ ಬಲು ಪೂಜ್ಯಳು.   

ಲಕ್ಷ್ಯದ ಜೊತೆಗೆ ಏಕರೂಪವಾಗುವುದು, ಲಕ್ಷ್ಯವೇ ತಾನಾಗುವುದು. ವಿಕಾಸದ ದಾರಿಯೂ ಕೂಡಾ ಹೀಗೆಯೇ ಅತ್ಯಂತ ಕಷ್ಟದ ಹಾದಿಯಾಗಿರುತ್ತದೆ. ಇದು ಸಾರ್ಥಕವಾಗಬೇಕಾದರೆ ಬ್ರಹ್ಮಚರ್ಯದಲ್ಲಿ ಕಠಿಣತೆಯನ್ನು ಸ್ವೀಕಾರ ಮಾಡಬೇಕು, ಅಧ್ಯಯನದ ಮುಖಾಂತರ ಆಳಕ್ಕೆ ಇಳಿದು ಚಿಂತನೆ ಮಾಡಿ, ಪ್ರಶ್ನೆ ಸಂವಾದ ಅನುಭವದ ಮುಖಾಂತರವೇ ಜ್ಞಾನವನ್ನು ಸಂಪಾದಿಸಬೇಕು. ವಿಕಾಸದತ್ತ ಸಾಗುವ ವೇಳೆಯಲ್ಲಿ "ಜಲ್, ಜಮೀನ್, ಜಂಗಲ್, ಜಾನ್ ವಾರ, ಜನ್" ಈ ಐದಕ್ಕೂ ದಕ್ಕೆಯಾಗದಂತೆ. ಜಲ ಸಂರಕ್ಷಣೆ, ಭೂಮಿ ಹಾಗೂ ಯಾವುದೇ ಜೀವ ಜಂತುಗಳು ವಿನಾಶಕ್ಕೆ ಕಾರಣವಾಗಬಾರದು. ಕಾಡು ನಾಶವಾಗದೇ ಸಸ್ಯರಾಶಿಗಳು ಉಳಿಯಬೇಕು, ಮತ್ತು ಯಾವುದೇ ಸಮುದಾಯಗಳ ವಿನಾಶಕ್ಕೂ ಕಾರಣವಾಗಬಾರದು. ಈ ದಿಶೆಯಲ್ಲಿ ವಿಕಾಸ ಎನ್ನುವುದು ಪ್ರಕೃತಿ ಸ್ನೇಹಿ ಆಗಿರಬೇಕು. ಆ ಮೂಲಕ ಮನುಷ್ಯ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಸರ್ವಾಂಗೀಣ ವಿಕಾಸದ ಕಡೆಗೆ ಹೆಜ್ಜೆ ಹಾಕಬೇಕು. ಹಾಗಾದಾಗ ಎಲ್ಲವೂ ಸಾಧ್ಯವಾಗುತ್ತದೆ.  

- * * * -