ಬೆಂಗಳೂರು, ಏ 06, ರಾಜ್ಯವೂ ಸೇರಿದಂತೆ ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಲಾಕ್ ಡೌನ್ ಇದ್ದರೂ ಸಹ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ‘ದೇಶ ಕೊರೋನಾ ಮುಕ್ತ ಅಂತ ಘೋಷಣೆಯಾಗೋದು ಯಾವಾಗ’ ಎಂದು ನಟ ಉಪೇಂದ್ರ ಪ್ರಶ್ನಿಸಿದ್ದಾರೆ.ನಿನ್ನೆ 9 ಗಂಟೆಗೆ 9 ನಿಮಿಷ ದೀಪ ಬೆಳಗಿಸಿದ ಬಳಿಕ ಈ ಕುರಿತು ಟ್ವೀಟ್ ಮಾಡಿರುವ ಉಪ್ಪಿ, “ಎಲ್ಲ ಜನನಾಯಕರಿಗೆ ಒಂದು ನೇರ ಪ್ರಶ್ನೆ..... ಕೊರೋನಾ ಮುಕ್ತ ಭಾರತ ಎಂದು ಯಾವಾಗ ಘೋಷಿಸುವಿರಿ ? ನೂರಾ ಮೂವತ್ತು ಕೋಟಿ ಜನರನ್ನೂ ತಪಾಸಣೆ ಮಾಡಿದ ನಂತರವೇ ? ಅಲ್ಲಿಯವರೆಗೂ ಲಾಕ್ಡೌನ್ ಮುಂದುವರೆಯುವುದೇ ? ಅದಕ್ಕೆ ಮುಂಚೆ ಲಾಕ್ಡೌನ್ ತೆರವು ಮಾಡಿದರೆ ಪ್ರಜೆಗಳಿಗೆ ಅಪಾಯವಲ್ಲವೇ ? ಎಂದು ಕೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಕೊರೋನಾ ಸೋಂಕು ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ಹಂತದ ಲಾಕ್ಡೌನ್ ಸೂಚಿಸಿದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಇದು ನಿಜವೇ? ಎಂದು ಪ್ರಶ‍್ನಿಸಿದ್ದಾರೆ.ಮೊದಲ ಹಂತದಲ್ಲಿ ಒಂದು ದಿನದ ಲಾಕ್ಡೌನ್, ಎರಡನೇ ಹಂತ 21 ದಿನಗಳ ಲಾಕ್ಡೌನ್, ಮೂರನೇ ಹಂತ 5 ದಿನ, ನಾಲ್ಕನೇ ಹಂತ 28 ದಿನ, 5ನೇ ಹಂತದಲ್ಲಿ ಮತ್ತೆ 5 ದಿನಗಳ ಲಾಕ್ಡೌನ್ ಅವಧಿಯನ್ನು ಸೂಚಿಸಿದೆ ಎನ್ನಲಾಗುತ್ತಿದೆ. ಇದು ನಿಜವೇ ಎಂದು ಕೇಳಿದ್ದಾರೆ. ಆದರೆ ಲಾಕ್ಡೌನ್ ಸಂದರ್ಭದಲ್ಲಿಕ ಪ್ರಜಾಕೀಯ ಪಕ್ಷ ಕೈಗೊಂಡಿರುವ ಉಪಕ್ರಮಗಳು ಅಥವಾ ಸಹಾಯದ ಕುರಿತು ಈ ಟ್ವೀಟ್ ಗಳಲ್ಲಿ ಉಪೇಂದ್ರ ತಿಳಿಸಿಲ್ಲ.