ಕೇಂದ್ರ ಸಚಿವ ಸಂಪುಟ ಸೂಚಿಸಿರುವ ತಿದ್ದುಪಡಿಯನ್ನು ಮಕ್ಕಿಕಮಕಿ ನಕಲು ಮಾಡಲು ಹೊರಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ವಂತಿಕೆಯನ್ನು ಮರೆತು ಕೇಂದ್ರ ಸರ್ಕಾರದ ಕೀಲು ಗೊಂಬೆಯಂತೆ ಕೆಲಸ ಮಾಡುತ್ತಿರುವುದು ಘನತೆಗೆ ತಕ್ಕುದಾದ ಶೋಭೆಯಲ್ಲ. ರೈತ ನಾಯಕರಾಗಿ ಬೆಳೆದ ಯಡಿಯೂರಪ್ಪ ಎಪಿಎಂಸಿ ಕಾಯಿದೆ ತಿದ್ದುಪಡಿ ಬಗ್ಗೆ ಚರ್ಚಿಸಲು ವಿಧಾನಮಂಡಲ ಅಧಿವೇಶನ ಕರೆಯಬೇಕು. ಪ್ರಸ್ತುತ ಎಪಿಎಂಸಿಗಳಲ್ಲಿ ಇರುವ ದಲ್ಲಾಳಿಗಳ ತೊಂದರೆಯನ್ನು ತಪ್ಪಿಸಬೇಕು ಹಾಗೂ ಕಮಿಷನ್ ಹಾವಳಿಯನ್ನು ತಪ್ಪಿಸಬೇಕು ಎಂದು ಪಕ್ಷ ಆಗ್ರಹಿಸಿದೆ.
ಎಪಿಎಂಸಿ ಹಾಗೂ ಕೃಷಿ ಇಲಾಖೆ ಸಮನ್ವಯದಲ್ಲಿ ಕೆಲಸ ನಿರ್ವಹಿಸಿ ರೈತರು ಬೆಳೆಯುವ ಬೆಳೆಗಳ ಪೂರ್ವ ಸಮೀಕ್ಷೆಯನ್ನು ಕೈಗೊಂಡು ಬೆಲೆ ನಿಗದಿ ಮಾಡಬೇಕು.ಅನೇಕ ಎಪಿಎಂಸಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಬಳಕೆ ಮಾಡಲೇ ಬೇಕು ಎಂದು ಆದೇಶವಿದ್ದರೂ ಇದನ್ನು ಗಾಳಿಗೆ ತೂರಲಾಗಿದೆ, ಈ ಆದೇಶವನ್ನು ಬಲಪಡಿಸಬೇಕು. ಬಲಹೀನಗೊಂಡಿರುವ ನ್ಯಾಫೆಡ್ ಖರೀದಿ ಕೇಂದ್ರವನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದೆ.
ಎಪಿಎಂಸಿಯಿಂದ ರೈತರಿಗೆ ಉತ್ತಮ ಬೆಲೆ ದೊರೆಯುತ್ತದೆ ಎನ್ನುವ ಕನಸು ಕಳೆದ 50 ವರ್ಷಗಳಿಂದ ನನಸಾಗಿಯೆ ಉಳಿದಿರುವ ಈ ಹೊತ್ತಿನಲ್ಲಿ ಈ ರೀತಿಯ ಮಾರುಕಟ್ಟೆ ವ್ಯವಸ್ಥೆ ಬೇಕೇ ಬೇಡವೇ ಎನ್ನುವ ಕಾಲಘಟ್ಟದಲ್ಲಿ ನಾವು ಇರುವ ಸಂದರ್ಭದಲ್ಲಿ ಈ ಕುರಿತು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕು. ಜತೆಗೆ ಕೃಷಿ ವಿಜ್ಞಾನಿಗಳು, ರೈತ ಸಂಘಟನೆಗಳು, ವ್ಯಾಪಾರಿಗಳ ಜತೆ ಸಂವಾದ ಹಾಗೂ ಅತ್ಯಂತ ಪ್ರಮುಖವಾಗಿ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಚರ್ಚೆ ಆಗಿ ಒಂದು ನಿರ್ಧಾರಕ್ಕೆ ಬಂದ ನಂತರ ಸಾಧಕ ಭಾದಕಗಳನ್ನು ತಿಳಿದುಕೊಳ್ಳುವುದು ಉತ್ತಮ ನಡೆ.
ಇಡೀ ರಾಜ್ಯದ ಮುಕ್ಕಾಲು ಪಾಲು ಆರ್ಥಿಕ ವ್ಯವಸ್ಥೆ ಕೃಷಿಯನ್ನೆ ಅವಲಂಬಿಸಿ ಕೊಂಡಿದೆ. ಈಗ ಪ್ರಸ್ತುತ ಸರ್ಕಾರ ತೆಗೆದುಕೊಂಡಿರುವ ಈ ನಿರ್ದಾರ ಹೇಗೆ ರೈತರಿಗೆ ಉಪಯೋಗಕಾರಿ ಎಂದು ತಿಳಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಈ ನಿರ್ಧಾರಗಳ ಹಿಂದೆ ಬಹುರಾಷ್ಟ್ರೀಯ ಕಂಪನಿಗಳ ಯಾವುದೇ ಮಸಲತ್ತು ಇಲ್ಲ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು.ಕೃಷಿ ಎನ್ನುವುದು ಈಗ ಲಾಭದಾಯಕವಾಗಿ ಉಳಿದಿಲ್ಲ ಇಂತಹ ಸಂಧರ್ಭದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ತರುವ ಮೂಲಕ ಬೀದಿಗೆ ಬೀಳುವ ಲಕ್ಷಾಂತರ ನೌಕರರ, ಹಮಾಲರ ಜೀವನ ನಿರ್ವಹಣೆ ಹೇಗೆ ಎನ್ನುವ ಕನಿಷ್ಠ ಕಲ್ಪನೆಯೂ ಸರ್ಕಾರಕ್ಕೆ ಇದ್ದಂತೆ ಇಲ್ಲ.ಪ್ರಸ್ತುತ ಎಪಿಎಂಸಿ ಮಾರುಕಟ್ಟೆಯಲ್ಲೆ ಅನೇಕ ಲೋಪದೋಷಗಳು ಇದ್ದರೂ ಸಹ ಅಲ್ಪ ಸ್ವಲ್ಪ ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ 180 ಕೃಷಿ ಉತ್ಪನ್ನ ಮಾರುಕಟ್ಟೆಗಳಿದ್ದು ಇವುಗಳನ್ನೆ ನೆಚ್ಚಿಕೊಂಡು ಬದುಕುತ್ತಿರುವವರಿಗೆ ಯಾವ ಭದ್ರತೆಯನ್ನು ಈ ತಿದ್ದುಪಡಿ ನೀಡುತ್ತದೆ ಎನ್ನುವುದನ್ನು ಸರ್ಕಾರ ಸ್ಪಷ್ಟ ಪಡಿಸಬೇಕು ಎಂದು ಸರ್ಕಾರವನ್ನು ಆಪ್ ಪ್ರಕಟಣೆಯಲ್ಲಿ ಒತ್ತಾಯಿಸಿದೆ.