ಕಳೆದವಾರ ನಡೆದಂತಹ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ತಿಲಾಂಜಲಿ ಇಟ್ಟ ಮತದಾರ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದಾನೆ. ಆದರೆ ಬಿಜೆಪಿ ಪಕ್ಷ ಇಷ್ಟೊಂದು ಹೀನಾಯವಾಗಿ ನೆಲಕಚ್ಚುತ್ತದೆ ಅಂತ ಯಾರೊಬ್ಬ ಬಿಜೆಪಿ ನಾಯಕರೂ ಊಹಿಸಿರಲಿಲ್ಲ. ಇದೀಗ ಅತ್ಯಂತ ಹೀನಾಯವಾಗಿ ಸೋತ ಬಿಜೆಪಿ ಪಕ್ಷ ತನ್ನ ಸೋಲಿಗೆ ಮೂಲ ಕಾರಣಗಳನ್ನು ಹುಡುಕಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಬಾರಿ ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆ, ನಾವಿಲ್ಲದೇ ಯಾರೂ ಸರ್ಕಾರ ರಚನೆ ಮಾಡುವುದಕ್ಕೆ ಸಾಧ್ಯವಿಲ್ಲ ಅನ್ನೊ ಅಹಂನಿದ ಬೀಗುತ್ತಿದ್ದ ಕುಮಾರಸ್ವಾಮಿಗೂ ಬುದ್ದಿಬಂದಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಬಹುತೇಕ ಘಟಾನುಘಟಿ ನಾಯಕರು ಹಾಗೂ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿದ್ದ ಅನೇಕರು ಸೋತಿದ್ದಾರೆ. ಬಿಜೆಪಿಯ ಭದ್ರಕೋಟೆಯಂತೆ ತಯಾರಾಗುತ್ತಿದ್ದ ಮಧ್ಯ ಕರ್ನಾಟಕ, ಚಿಕ್ಕಮಗಳೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಜನರು ಈ ಬಾರಿ ಬಿಜೆಪಿಯನ್ನು ಕೈ ಹಿಡಿಯಲಿಲ್ಲ. ಎರಡು ದಶಕಗಳಿಂದ ಬಿಜೆಪಿಯ ಭದ್ರ ಕೋಟೆ ಕೊಡಗಿನಲ್ಲಿ ಕಾಂಗ್ರೆಸ್ ಬೇರೂರಿದೆ. ಬೆಂಗಳೂರು ಉಡುಪಿ ಮತ್ತು ಮಂಗಳೂರು ಜಿಲ್ಲೆ ಹೊರತುಪಡಿಸಿದರೆ ಬಿಜೆಪಿ ರಾಜ್ಯದ ಯಾವ ಭಾಗದಲ್ಲಿಯೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಸುಮಾರು ಒಂಬತ್ತು ಜಿಲ್ಲೆಗಳಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರವನ್ನು ಗೆದ್ದುಕೊಂಡಿಲ್ಲ.
ಹಿಂದುತ್ವದ ನೆಲ ಎಂದು ಕರೆಸಿಕೊಳ್ಳುವ ಕರಾವಳಿ ಜಿಲ್ಲೆಗಳಲ್ಲಿಯೂ ಕೂಡ ಈ ಬಾರಿ ಜಾತಿ ಲೆಕ್ಕಾಚಾರಗಳಿಗೆ ಗೆಲುವು ಸಿಕ್ಕಿದೆ ಹೊರತು ತೀರಾ ಹಿಂದುತ್ವ ಅಲ್ಲಿ ಗೆದ್ದಿಲ್ಲ. ಯಾಕಂದ್ರೆ ಬಹುಮುಖ್ಯವಾಗಿ ಕರ್ನಾಟಕದಲ್ಲಿ ಜಾತಿ ಮತ್ತು ಹಣದ ಪ್ರಭಾವ ಚುನಾವಣೆಯಲ್ಲಿ ಕೆಲಸ ಮಾಡುತ್ತವೆ. ಉತ್ತರ ಭಾರತದಲ್ಲಿ ನಡೆಯುವ ಹಾಗೆ ಹಿಂದುತ್ವದ ರಾಜಕಾರಣಕ್ಕೆ ಕರ್ನಾಟಕದಲ್ಲಿನ್ನೂ ಗ್ರೌಂಡ್ ಸಿದ್ದವಾಗಿಲ್ಲ. ಚುನಾವಣೆಯ ಸಂದರ್ಭದಲ್ಲಿ ಇಡೀ ರಾಜ್ಯಾದ್ಯಂತ ಬಹುತೇಕ ಕ್ಷೇತ್ರಗಳಲ್ಲಿ ಈ ಬಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಣದ ಹಂಚಿಕೆಯಾಗಿದೆ. ಈ ಹಣದ ಹೊಳೆಯ ನಡುವೆಯೂ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಈ ಬಾರಿ ಮತದಾರರು ನಮ್ಮನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸದಿಂದ ಪಂಚರತ್ನ ಯಾತ್ರೆ ಕೈಗೊಂಡಿದ್ದರು. ಗೆಲುವಿನ ಭ್ರಮೆಯಲ್ಲಿ ಇದ್ದ ಅವರನ್ನು ಜನ ಧಿಕ್ಕರಿಸಿಬಿಟ್ಟರು.
ಬಿಜೆಪಿಯ ಸೋಲಿಗೆ ಕಾರಣಗಳು:- ಬಿಜೆಪಿಯ ನಾಲ್ಕು ವರ್ಷಗಳ ಆಡಳಿತ ಹೇಗಿತ್ತೆಂದರೆ, ಅಲ್ಲಿ ಕೇವಲ ಮಂತ್ರಿಗಳನ್ನ ಹೊರತುಪಡಿಸಿದರೆ ಯಾರನ್ನೂ ನೆಮ್ಮದಿಯಿಂದ ಇರಲಿಕ್ಕೆ ಬಿಟ್ಟಿಲ್ಲ. ತಮ್ಮದೇ ಸರಕಾರ ಇದ್ದರೂ ಕೂಡಾ ಅಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎನ್ನುವ ಪ್ರಭಲವಾದಂತಹ ಆರೋಪ ಸ್ವಪಕ್ಷೀಯ ಕಾರ್ಯಕರ್ತನದಾಗಿತ್ತು. ಬೊಮ್ಮಾಯಿ ಅವರ ಅವಧಿಯಲ್ಲಂತೂ ಭ್ರಷ್ಟಾಚಾರ ಅನ್ನುವುದು ಮಿತಿಮೀರಿತ್ತು. ಕಾರಣ, ಆಪರೇಷನ್ ಕಮಲದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತಂದ ರಮೇಶ್ ಜಾರಕಿಹೊಳಿ, ಡಾ. ಸುಧಾಕರ್ ಸೇರಿದಂತೆ ಕಾಂಗ್ರೆಸ್ ಪಕ್ಷ ಬಿಟ್ಟು ಬಂದ ಎಲ್ಲರನ್ನೂ ಬಿಜೆಪಿ ಮಂತ್ರಿ ಮಾಡಿತ್ತು. ಅವರೆಲ್ಲರೂ ಕೂಡಾ ಸಾಕಷ್ಟು ಭ್ರಷ್ಟಾಚಾರ ಮಾಡಿದರೂ ಅವರನ್ನ ಯಾರೂ ಕೇಳುವಂತಿರಲಿಲ್ಲ. ಪಿ.ಎಸ್.ಐ ನೇಮಕಾತಿಯಲ್ಲಿ ಹಗರಣ, ಕಾಂಟ್ರಾಕ್ಟರ್ ಗಳಲ್ಲಿ ಕಮಿಷನ್. ವರ್ಗಾವಣೆಗಳಲ್ಲಿ ಲಂಚ. ಖರೀದಿಗಳಲ್ಲಿ ಅವ್ಯವಹಾರ ಹೀಗೆ ಸರ್ಕಾರದ ವಿವಿಧ ಇಲಾಖೆ ಹಾಗೂ ಆಯೋಗಗಳ ಸದಸ್ಯರ ನೇಮಕಾತಿಗಳಲ್ಲಿ ಕೋಟಿ ಕೋಟಿ ಲಂಚಾಚಾರ. ಆಯಾ ಕಟ್ಟಿನ ಜಾಗಗಳಲ್ಲಿ ಒಂದೇ ಜಾತಿಯ ಜನ. ಸರಕಾರದ ಎಲ್ಲಾ ಹುದ್ದೆಗಳ ನೇಮಕಾತಿಗಳಲ್ಲಿ ಕಮಿಷನ್ ಏಜೆಂಟ್ ಗಳು ಹೀಗೆ ಒಟ್ಟಾರೆ ರಾಜ್ಯ ಬಿಜೆಪಿ ಸರಕಾರ ಎನ್ನುವುದು ಭ್ರಷ್ಟರ ತವರುಮನೆಯಂತೆ ತಯಾರಾಗಿತ್ತು. ಇದೆಲ್ಲದರ ಪರಿಣಾಮ ಸ್ವತಃ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರೂ ಕೂಡಾ ಬಿಜೆಪಿ ಆಡಳಿತದ ವಿರುದ್ಧ ಅಸಹ್ಯಪಟ್ಟುಕೊಳ್ಳುವ ಹಾಗಾಗಿತ್ತು.
ವಲಸೆ ಹಕ್ಕಿ ರಮೇಶ್ ಜಾರಕಿಹೊಳಿ ಮಾತು ಕೇಳಿದ ಬಿಜೆಪಿ ಚುನಾವಣೆಯಲ್ಲಿ ಸರಿಯಾದ ರೀತಿಯಲ್ಲಿಯೇ ಮಣ್ಣುಮುಕ್ಕಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಹೇಳಿದವರಿಗೆ ಟಿಕೆಟ್ ಕೊಡುವ ಬದಲು ಲಕ್ಷ್ಮಣ ಸವದಿ ಅವರನ್ನು ಗಣನೆಗೆ ತೆಗೆದುಕೊಂಡಿದ್ದರೆ ಬಿಜೆಪಿ ಮತ್ತೊಂದಿಷ್ಟು ಸ್ಥಾನಗಳನ್ನಾದರೂ ಗೆಲ್ಲುತ್ತಿತ್ತು. ಮತ್ತು ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆಯನ್ನು ಅನುಭವಿಸುವುದಾದರೂ ತಪ್ಪುತ್ತಿತ್ತು. ಪ್ರಮುಖವಾಗಿ ಹೇಳಬೇಕೆಂದರೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದಲ್ಲಂತೂ ಯಾವುದೇ ರೀತಿಯ ಸತ್ವ, ಗಂಧ, ಗಾಳಿ ಇರಲಿಲ್ಲ. ಅವರ ಜಾಹೀರಾತುಗಳು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿದ್ದವು. ಜನರಿಗೆ ತಾವು ಏನು ಹೇಳಬೇಕು ಅನ್ನೋ ಬಗ್ಗೆ ಒಂದು ಸ್ಪಷ್ಟತೆ ಅನ್ನೋದು ಪಕ್ಷದ ಯಾವುದೇ ನಾಯಕರಲ್ಲಿ ಇರಲಿಲ್ಲ. ಚುನಾವಣೆ ಗೊಂದು ನರೇಟಿವ್ ಫಿಕ್ಸ್ ಮಾಡುವುದರಲ್ಲಿ ಕೂಡ ಬಿಜೆಪಿ ಸಂಪೂರ್ಣವಾಗಿ ವಿಫಲವಾಗಿತ್ತು. ನಾಲ್ಕು ವರ್ಷಗಳ ಆಡಳಿತ ನಡೆಸಿದ ಬಿಜೆಪಿಗೆ ನಾವು ಏನು ಮಾಡಿದ್ದೇವೆಂದು ಹೇಳಲು ವಿಷಯವಂತೂ ಇರಲೇ ಇಲ್ಲ. ಹಾಗಾಗಿ ಬಿಜೆಪಿಯ ಕೆಲ ನಾಯಕರಂತೂ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಬಜರಂಗದಳ ಬ್ಯಾನ್ ಆಗುತ್ತದೆ, ಹಿಜಾಬ್ ಹಾಕಿಸ್ತಾರೆ, ಹಲಾಲ್ ಕಟ್ ಮಾಡುತ್ತಾರೆ, ಹೀಗಾಗುತ್ತೆ ಹಾಗಾಗುತ್ತೆ ಅನ್ನೋ ಅವರ ಮಾತುಗಳು ಮತ್ತು ಹೇಳಿಕೆಗಳು ಮತದಾರನಿಗೆ ಮತ ಹಾಕುವುದಕ್ಕೆ ಪ್ರಮುಖ ಅಂಶಗಳು ಅಂತ ಅನ್ನಿಸಲೇ ಇಲ್ಲ. ವಾಸ್ತವವಾಗಿ ಮತದಾರನ ನೀರೀಕ್ಷೆ ಬೇರೆಯೇ ಇತ್ತು. ಅದನ್ನು ತಿಳಿದುಕೊಳ್ಳುವುದರಲ್ಲಿ ಬಿಜೆಪಿ ಸಂಪೂರ್ಣವಾಗಿ ವಿಫಲ ಆಯಿತು.
ಮೋದಿಯ ಜಪ:- ಮೋದಿ ಬರುತ್ತಾರೆ ಅವರ ಮುಖ ನೋಡಿ ಜನ ನಮಗೆಲ್ಲ ಮತ ಹಾಕಿ ನಮ್ಮನ್ನು ಗೆಲ್ಲಿಸುತ್ತಾರೆ ಅನ್ನೋ ಭ್ರಮೆಯಲ್ಲಿ ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ಕಾದು ಕುಳಿತಿದ್ದರು. ಆದರೆ ಅದು ಕಿಂಚಿತ್ತೂ ವರ್ಕೌಟ್ ಆಗಲಿಲ್ಲ ಅದಕ್ಕೆ ಚುನಾವಣೆಯ ಫಲಿತಾಂಶವೇ ಸಾಕ್ಷಿ. ಅನೇಕ ಕ್ಷೇತ್ರಗಳಲ್ಲಿ ನರೇಂದ್ರ ಮೋದಿಯವರು ಸಾಕಷ್ಟು ಪ್ರಚಾರದ ಭಾಷಣಗಳನ್ನು ಮಾಡಿದರು. ಆದರೆ ಮತದಾರನ ಮನಸ್ಥಿತಿ ಹೇಗಿತ್ತೆಂದರೆ ಇದು ಮೋದಿ ಅವರ ಚುನಾವಣೆ ಅಂತೂ ಖಂಡಿತವಾಗಿ ಅಲ್ಲ. ಇದು ಕರ್ನಾಟಕದ ವಿಧಾನಸಭೆ ಚುನಾವಣೆ. ಇಲ್ಲಿ ಗೆದ್ದರೆ ಮುಖ್ಯಮಂತ್ರಿ ಆಗುವವರು ಬೇರೆ. ಮೋದಿ ಬಂದು ಇಲ್ಲಿ ಮುಖ್ಯಮಂತ್ರಿ ಆಗುವುದಿಲ್ಲ ಎಂಬುದು ಜನರ ಮನಸ್ಸಿನೊಳಗೆ ನಾಟಿತ್ತು. ಅದರಿಂದ ಮೋದಿ ಅವರ ಮುಖ ನೋಡಿ, ಅವರ ಭಾಷಣ ಕೇಳಿ ಯಾರೊಬ್ಬರೂ ಕೂಡಾ ಬಿಜೆಪಿಗೆ ಮತ ನೀಡುವ ಗೋಜಿಗೆ ಹೋಗಲಿಲ್ಲ.
ಉದಾಹರಣೆಗೆ:- ಯಾವುದೇ ರೋಗಿಯೂ ಡಾಕ್ಟರ್ ಕೊಟ್ಟ ಟ್ರೀಟ್ಮೆಂಟ್ ತೆಗೆದುಕೊಳ್ಳುವಂತಹ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ಇಲ್ಲ ಅಂದ್ರೆ ವೈದ್ಯರನ್ನ ಎಲ್ಲಿಂದ ಕರೆಸಿದರೆ ಏನು ಲಾಭ? ಅಮೇರಿಕಾ ಸಿಂಗಾಪುರದಿಂದ ವೈದ್ಯರು ಬಂದರು ರೋಗಿ ಗುಣಮುಖ ಆಗೋದಕ್ಕೆ ಸಾಧ್ಯವಿಲ್ಲ! ರಾಜ್ಯ ಬಿಜೆಪಿ ಪರಿಸ್ಥಿತಿ ತೀರಾ ಕ್ರಿಟಿಕಲ್ ಆಗಿತ್ತು. ಹಾಗಾಗಿ ಇಲ್ಲಿ ಮೋದಿ ಅಂತಹ ಸರ್ಜನ್ ಬಂದರೂ ಕೂಡಾ ಅದರಿಂದ ಯಾವುದೇ ಉಪಯೋಗ ಆಗಲಿಲ್ಲ.
ಒಂದೊಮ್ಮೆ ರಾಜ್ಯ ಬಿಜೆಪಿ ಅಂದ್ರೆ ಅದು ಲಿಂಗಾಯತರ ಪಕ್ಷ ಎಂಬ ಭಾವನೆ ಜನರಲ್ಲಿ ಇತ್ತು. ಯಡಿಯೂರ್ಪನವರನ್ನು ಇಡೀ ಲಿಂಗಾಯತ ಸಮುದಾಯ ತಮ್ಮ ನಾಯಕ ಅಂತ ಮನಃಪೂರ್ವಕವಾಗಿ ಒಪ್ಪಿಕೊಂಡಿತ್ತು. ಅದೇ ರೀತಿ ಯಡಿಯೂರ್ಪನವರು ಕೂಡಾ ಅಧಿಕಾರದಲ್ಲಿ ಇದ್ದಷ್ಟು ದಿನ ಲಿಂಗಾಯತ ಮಠಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಮಹತ್ವವನ್ನು ಕೊಡುತ್ತಿದ್ದರು. ಬಿಜೆಪಿ ಸರಕಾರ ಅಂದ್ರೆ ಅದು ಲಿಂಗಾಯತರದ್ದೇ ಸರಕಾರ ಅನ್ನೋ ಭಾವನೆ ಆ ಸಮುದಾಯದಲ್ಲಿ ಮೂಡಿಸುವಂತೆ ಮಾಡಿ, ಅವುಗಳನ್ನು ವೋಟ್ ಬ್ಯಾಂಕನ್ನಾಗಿ ಕನ್ವರ್ಟ್ ಮಾಡಿ ಹಿಡಿದಿಟ್ಟುಕೊಂಡಿದ್ದರು ಯಡಿಯೂರ್ಪ. ಯಾವಾಗ ಯಡಿಯೂರ್ಪರನ್ನು ಕೆಳಗೆ ಇಳಿಸಲಾಯಿತೊ ಆಗಿನಿಂದ ರಾಜ್ಯ ಬಿಜೆಪಿಯ ಅವನತಿ ಶುರುವಾಗಿತ್ತು.
ಚುನಾವಣೆಗೂ ಮೊದಲು ಯಡಿಯೂರ್ಪನವರನ್ನು ಕಡೆಗಣಿಸಿದ ಆ ಸಮಯದಲ್ಲಿ ಅಮಿತ್ ಶಾ ಅವರಿಗೆ ಯಡಿಯೂರ್ಪನವರು ಬಹಳ ಸ್ಪಷ್ಟವಾಗಿ ಒಂದು ಮಾತನ್ನು ಹೇಳುತ್ತಾರೆ, ’ಇದು ಕರ್ನಾಟಕ, ಇಲ್ಲಿ ಯಾವುದೇ ಕಾರಣಕ್ಕೂ ಉತ್ತರ ಪ್ರದೇಶ ಹಾಗೂ ಗುಜರಾತ್ ಮಾದರಿಯಲ್ಲಿ ಚುನಾವಣೆ ಮಾಡಲಿಕ್ಕೆ ಸಾಧ್ಯವಿಲ್ಲ, ದಯವಿಟ್ಟು ಇಲ್ಲಿ ಹೊಸ ಪ್ರಯೋಗವನ್ನು ಮಾಡುವ ಗೊಜಿಗೆ ಹೋಗಬೇಡಿ’ ಆದರೆ ಯಾವ ಕಾರಣಕ್ಕೊ ಗೊತ್ತಿಲ್ಲ, ಕೆಲವರ ಮಾತನ್ನು ಕೇಳಿಕೊಂಡು ಯಡಿಯೂರ್ಪನವರ ಮಾತನ್ನು ಧಿಕ್ಕರಿಸಿ ಹೊಸ ಪ್ರಯತ್ನವನ್ನು ಮಾಡಿದ ಅಮಿತ್ ಷಾ ರವರೀಗ ಪಶ್ಚಾತಾಪ ಪಡುವಂತಾಗಿದೆ. ಇದರ ಪರಿಣಾಮ, ಒಟ್ಟಾರೆ 75 ಹೊಸ ಮುಖಗಳನ್ನು ಕಣದಲ್ಲಿ ಇಳಿಸಲಾಗಿತ್ತು. ಆದರೆ ಅದರಲ್ಲಿ ಜಯಗಳಿಸಿದ್ದು ಮಾತ್ರ ಕೇವಲ 14 ಜನರು. ಇವರಿಗೆ ಟಿಕೆಟ್ ಕೊಟ್ಟಾಗಲೇ ಯಡಿಯೂರ್ಪನವರು ಅಮಿತ್ ಶಾ ರವರನ್ನು ಪದೇ ಪದೇ ಎಚ್ಚರಿಸಿದ್ದರು. ಮತ್ತೊಂದು ಪ್ರಮುಖ ಅಂಶ ಅದು ಲಿಂಗಾಯತ ಮತ ಬ್ಯಾಂಕ್, ಯಡಿಯೂರ್ಪನವರನ್ನು ಕಡೆಗಣಿಸಿದಾಗಿನಿಂದ ಅದು ಬಿಜೆಪಿಯಿಂದ ದೂರ ಉಳಿದಿದೆ. ಲಿಂಗಾಯತರ ಪ್ರಭಾವದ ಒಟ್ಟು 67 ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಸುಮಾರು 42 ಕಡೆ ಗೆದ್ದಿದೆ. ಕಳೆದ ಬಾರಿಗಿಂತ ಈ ಸಲ ಕಾಂಗ್ರೆಸ್ಸಿಗೆ 22 ಪ್ಲಸ್ ಆಗಿದೆ. ಬಿಜೆಪಿ ಗೆದ್ದಿದ್ದು ಕೇವಲ 20 ಸ್ಥಾನಗಳಲ್ಲಿ ಮಾತ್ರ, ಹಾಗಾಗಿ ಇದೀಗ ಲಿಂಗಾಯತರ ವಿಶ್ವಾಸವನ್ನು ಗಳಿಸುವುದರಲ್ಲಿ ಕಾಂಗ್ರೆಸ್ ಮತ್ತೆ ಯಶಸ್ವಿಯಾಗಿದೆ. ಲಿಂಗಾಯತರ ಭದ್ರಕೋಟೆಯಂತಿರುವ ಕಿತ್ತೂರು ಕರ್ನಾಟಕದಲ್ಲಿ ಅಂತೂ ಬಿಜೆಪಿಗೆ ಅತ್ಯಂತ ತೀವ್ರ ಹಿನ್ನಡೆಯಾಗಿದೆ. ಅವರನ್ನು ಕಡೆಗಣಿಸಿದರೂ ಪರವಾಗಿಲ್ಲ ಆದರೆ ಅವರ ಸಲಹೆಯನ್ನಾದರೂ ಪರಿಗಣಿಸಿದ್ದರೆ ಬಿಜೆಪಿಗೆ ಇಂತಹ ಹೀನಾಯ ಸೋಲು ಆಗುತ್ತಿರಲಿಲ್ಲ.
ಆದರೆ ಬಿಜೆಪಿ ಯಾವಾಗ ಯಡಿಯೂರ್ಪನವರನ್ನು ಕೆಳಗಿಳಿಸಿ ಬೊಮ್ಮಾಯಿಗೆ ಪಟ್ಟ ಕಟ್ಟಿತ್ತೊ ಅಂದಿನಿಂದ ಲಿಂಗಾಯತರು ಮುನಿಸಿಕೊಳ್ಳಲಾರಂಭಿಸಿದರು. ಯಾಕೆಂದರೆ ಬಸವರಾಜ್ ಬೊಮ್ಮಾಯಿ ಅವರಂತೂ ಮೂಲ ಸಂಘ ಪರಿವಾರದ ಕಾರ್ಯಕರ್ತರಲ್ಲ, ಪ್ರಬಲ ಹಿಂದುತ್ವವಾದಿಯೂ ಅಲ್ಲ, ಆದ್ದರಿಂದ ಅವರನ್ನು ಸ್ವ ಪಕ್ಷದ ಬಹುತೇಕ ಕಾರ್ಯಕರ್ತರು ಒಪ್ಪಿಕೊಳ್ಳಲೇ ಇಲ್ಲ. ಅದರಲ್ಲೂ ಬೊಮ್ಮಾಯಿ ಅವರ ಅವಧಿಯಲ್ಲಿ 40ಅ ಪರ್ಸೆಂಟ್ ಕಮಿಷನ್ ಆರೋಪ ಹೊರ ಬಂದಾಗ ಅದನ್ನೇ ಕಾಂಗ್ರೆಸ್ ಬಹುದೊಡ್ಡ ಅಸ್ತ್ರವನ್ನಾಗಿ ಬಳಸಿಕೊಂಡು ಫೇ ಸಿ.ಎಂ ಅಭಿಯಾನ ಮಾಡಿತ್ತು. ಇದಕ್ಕೆ ಕೌಂಟರ್ ಕೊಡಬಲ್ಲ ಯಾವೊಂದು ಅಸ್ತ್ರ ಕೂಡ ಬಿಜೆಪಿಯ ಬಳಿ ಇರಲಿಲ್ಲ. ಆ ಸಂದರ್ಭದಲ್ಲಿ ಬಿ.ಜೆ.ಪಿ ನಾಯಕರ ಜಾಣ ಮೌನವೇ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಅನ್ನೋ ಅಂಶವನ್ನು ಜನ ಸಾಮಾನ್ಯರ ಮನಸ್ಸಿನಲ್ಲಿ ಮೂಡಿಸಿತ್ತು.
ಬಿಜೆಪಿ ಯಡಿಯೂರ್ಪನವರನ್ನು ಕೆಳಗಿಳಿಸಿದ ನಂತರ ಯಡಿಯೂರ್ಪ ನವರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬಹಳ ಜಾಣ್ಮೆಯನ್ನು ಪ್ರದರ್ಶಿಸಿತ್ತು. ಬಿಎಸ್ ವೈ ಅವರನ್ನು ಎಲ್ಲಿಯೂ ಕೂಡಾ ಟಾರ್ಗೆಟ್ ಮಾಡದೆ ಅವರ ಬಗ್ಗೆ ಬಹಳ ಸಾಫ್ಟ್ ಕಾರ್ನರ್ ಪ್ರೀತಿಯ ಮಾತುಗಳನಾಡುತ್ತಾ, ಯಡಿಯೂರ್ಪನವರಿಗೆ ಬಿಜೆಪಿಯಲ್ಲಿ ಬಹಳ ಅನ್ಯಾಯವಾಗಿದೆ ಎಂಬಂತೆ ಬಿಂಬಿಸಿದರು. ಪ್ರಮುಖವಾಗಿ ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡುತ್ತಾರೆ, ಬೊಮ್ಮಾಯಿ ಜಾಗದಲ್ಲಿ ಪ್ರಹ್ಲಾದ್ ಜೋಶಿ ಬರುತ್ತಾರೆ ಅನ್ನೋ ಸಣ್ಣ ಹುಳುವನ್ನು ಬಿಟ್ಟಿದ್ದರು ಕುಮಾರಸ್ವಾಮಿ. ಅದನ್ನೇ ಕಾಂಗ್ರೆಸ್ ಸಮರ್ಥವಾಗಿ ಬಳಕೆ ಮಾಡಿತು. ಅದರಿಂದ ಲಿಂಗಾಯತರಿಗೆ ಗಾಯದ ಮೇಲೆ ಬರೆ ಎಳೆದ ಹಾಗಾಯಿತು. ಒಂದು ವೇಳೆ ಬಸವರಾಜ್ ಬೊಮ್ಮಾಯಿ ಅವರು ಸಮರ್ಥವಾಗಿ ಕಾಣಿಸಿಕೊಂಡಿದ್ದೆ ಆಗಿದ್ದರೆ ಬಿಜೆಪಿಗೆ ಹೊಡೆತ ಆಗುತ್ತಿರಲಿಲ್ಲ. ಆದರೆ ಬಸವರಾಜ್ ಬೊಮ್ಮಾಯಿ ಅವರು ಯಾವುದೇ ಆ್ಯಂಗಲ್ ನಲ್ಲಿ ಜನರ ಮನಸ್ಸನ್ನು ಮುಟ್ಟಲೇ ಇಲ್ಲ, ಯಡಿಯೂರ್ಪನವರ ಕೊರತೆಯನ್ನು ನೀಗಿಸಬಲ್ಲ ಲಿಂಗಾಯತ ನಾಯಕ ಅಂತ ಆ ಸಮುದಾಯಕ್ಕೊಂದು ಭರವಸೆಯ ಬೆಳಕು ಮೂಡಿಸುವುದರಲ್ಲಿ ಬಸವರಾಜ್ ಬೊಮ್ಮಾಯಿ ಸಂಪೂರ್ಣವಾಗಿ ವಿಫಲವಾದರು. ಡಿ ಸುಧಾಕರ್ ಸೇರಿದಂತೆ ವಲಸಿಗ ಹಕ್ಕಿಗಳನ್ನೇ ತನ್ನ ಸುತ್ತಲೂ ಇಟ್ಟುಕೊಂಡ ಬೊಮ್ಮಾಯಿ ಅವರು ನಿಷ್ಠಾವಂತ ಶಾಸಕ ಮಂತ್ರಿಗಳನ್ನು ನಿರ್ಲಕ್ಷ ಮಾಡಿದರು. ಸರಕಾರದ ಅತಿ ಮುಖ್ಯ ಗೃಹ ಇಲಾಖೆಗೆ ಅರಗ ಜ್ಞಾನೇಂದ್ರರನ್ನು ಮಂತ್ರಿ ಮಾಡಲಾಯಿತು ನಿಜ. ಹೆಸರಿಗೆ ಮಾತ್ರ ಅರಗ ಜ್ಞಾನೇಂದ್ರ ಗೃಹಮಂತ್ರಿ, ಆದರೆ ಗೃಹ ಇಲಾಖೆಯ ಹಿಡಿತ ಮಾತ್ರ ಸಂಪೂರ್ಣವಾಗಿ ಬಸವರಾಜ್ ಬೊಮ್ಮಾಯಿ ಅವರ ಕೈಯಲ್ಲಿಯೇ ಇತ್ತು! ಹಾಗಾಗಿ ಇದು ಅರಗ ಜ್ಞಾನೇಂದ್ರ ಅವರಿಗೆ ಅಸಮರ್ಥ ಗೃಹ ಸಚಿವ ಎಂಬ ಹೆಸರು ಬರೋದಕ್ಕೆ ಕಾರಣವಾಯಿತು. ರಾಜ್ಯದ ಬಹುತೇಕ ಕಡೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳನ್ನು ಸರಕಾರವು ಸಮರ್ಥವಾಗಿ ನಿಭಾಯಿಸಲಿಲ್ಲ ಅನ್ನೋ ಕಾರಣಕ್ಕೆ ಹಿಂದೂ ಕಾರ್ಯಕರ್ತರೆಲ್ಲ ಬಿಜೆಪಿಯಿಂದ ದೂರಾದರು. ಇನ್ನು ಎಸ್‌ಟಿ ಮೀಸಲಾತಿ ಬಿಜೆಪಿಗಂತೂ ಲಾಭ ಕೊಡಲೇ ಇಲ್ಲ, ಪಂಚಮಸಾಲಿ ಮೀಸಲಾತಿ ಕೈಹಿಡಿಯಲಿಲ್ಲ, ಎಸ್ಸಿ ಎಡಗೈ ಪಂಗಡ ಬಿಜೆಪಿಯ ಜೊತೆ ನಿಲ್ಲುತ್ತದೆ ಅನ್ನೋ ಬಿಜೆಪಿಯ ವಿಶ್ವಾಸ ಕೂಡ ಸುಳ್ಳಾಗಿ ಹೋಯಿತು. ಕಾರಣ ಆ ವರ್ಗಗಳಲ್ಲಿ ಅದರ ಅರಿವು ಮೂಡಿಸುವಲ್ಲಿ ಬಿಜೆಪಿ ವಿಫಲ ಆಯಿತು.
ಯಡಿಯೂರ್ಪನವರು ನಿರ್ಣಾಯಕ ಅನ್ನುವಂತಹ ಅಂಶ ಈ ಚುನಾವಣೆಯಲ್ಲಿ ಬಿಜೆಪಿಗೊಂದು ಮರ್ಮಘಾತ ಕೊಡುವುದರಲ್ಲಿ ಯಶಸ್ಸನ್ನು ಕಾಣಲಾಗಿದೆ. ಸಾಕಷ್ಟು ಕಡೆಗಳಲ್ಲಿ ಯಡಿಯೂರ್ಪನವರ ವಿರುದ್ಧ ಮಾತನಾಡಿ ನಾಯಕರಾಗಲು ಪ್ರಯತ್ನಿಸಿದ ಬಿಜೆಪಿಯ ನಾಯಕರ ಸೋಲಿಗೆ ಯಡಿಯೂರ್ಪನವರ ತಂತ್ರ ಕೆಲಸ ಮಾಡಿದೆ. ಚಿಕ್ಕಮಗಳೂರು ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಯಡಿಯೂರ್ಪನವರ ಶಿಷ್ಯರಂತೆ ಗುರುತಿಸಿಕೊಂಡಿದ್ದವರು ಬಿಜೆಪಿಯ ಬಿಟ್ಟು ಕಾಂಗ್ರೆಸ್ ಸೇರಿ ಬಿಜೆಪಿಯ ವಿರುದ್ಧ ಸ್ಪರ್ಧೆ ಮಾಡಿ ಗೆಲುವನ್ನು ಕೂಡಾ ಸಾಧಿಸಿದ್ದಾರೆ. ಆ ಮೂಲಕ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿಗೆ ಯಡಿಯೂರ್ಪ ಕೂಡ ಈ ಬಾರಿ ಜೊತೆಗಿದ್ದೇ ಒಂದು ಶಾಕ್ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಮಗ ವಿಜಯೇಂದ್ರನಿಗೆ ಪಕ್ಷದ ನಾಯಕತ್ವ ಸಿಗುವುದಕ್ಕೆ ಬೇಕಾದ ವೇದಿಕೆಯೊಂದನ್ನೂ ಕೂಡಾ ಸಿದ್ದ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣಗಳು:- ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿಗಿಂತ ಬಹಳ ಮುಂದೆಯೇ ಇತ್ತು. ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ರೀತಿಯಾದಂತಹ ಗೊಂದಲವನ್ನು ಮಾಡಿಕೊಂಡಿರಲಿಲ್ಲ. ಅವರು ತಮ್ಮ ಪ್ರಣಾಳಿಕೆಗಳನ್ನು ಜಾರಿಗೆ ತರುವುದಕ್ಕಿಂತ ಮುಂಚೆಯೇ ತಮ್ಮ ಗ್ಯಾರಂಟಿ ಸ್ಕೀಮ್ ಗಳನ್ನು ಜನರ ಮನಸ್ಸಿನಲ್ಲಿ ರಿಜಿಸ್ಟರ್ ಮಾಡಿದ್ದರು. 200 ಯೂನಿಟ್ ಕರೆಂಟ್ ಫ್ರೀ, 10 ಕೆಜಿ ಅಕ್ಕಿ, ನಿರುದ್ಯೋಗಿ ಪದವಿ ಯುವಕರಿಗೆ 3000 ಹಣ, ಮನೆ ಯಜಮಾನಿ ಮಹಿಳೆಯರಿಗೆ 2,000 ಹಣ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಹೀಗೆ ಈ ಎಲ್ಲಾ ಸ್ಕೀಮ್ ಗಳ ಬಗ್ಗೆ ಕಾಂಗ್ರೆಸ್ ಮಾಡಿದ ಪ್ರಚಾರ ಜನರ ಮನಸ್ಸನ್ನು ಮುಟ್ಟಿತ್ತು. ಯಾಕಂದ್ರೆ ಬಹುತೇಕ ಜನಸಾಮಾನ್ಯರ ಆಲೋಚನೆ ಹಾಗೆಯೇ ಇರುತ್ತದೆ. ದೇಶ ಉದ್ಧಾರ ಆಗುತ್ತೋ ಬಿಡುತ್ತದೆಯೋ ಅದಂತೂ ಎರಡನೇ ಮಾತು, ಮೊದಲು ನನಗೇನು ಸಿಗುತ್ತದೆ, ನನ್ನ ಮನೆಗೆ ಏನೆಲ್ಲ ಬರುತ್ತದೆ ಅನ್ನೋದರ ಬಗ್ಗೆ ಯೋಚಿಸುತ್ತಾರೆ. ಅಂತಹ ಮನಸ್ಸುಗಳನ್ನು ತಿಳಿದುಕೊಂಡ ಕಾಂಗ್ರೆಸ್ ಯಶಸ್ಸು ಸಾಧಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸಂಘಟನಾತ್ಮಕವಾದಂತ ಹೋರಾಟ ಎದ್ದು ಕಾಣುತ್ತಿತ್ತು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಮನಸ್ಸಿನೊಳಗೆ ಎಂ ಸ್ಥಾನಕ್ಕಾಗಿ ಎಷ್ಟೇ ವಾರ ಇದ್ದರೂ ಕೂಡಾ ಅದನ್ನು ಬಹಿರಂಗವಾಗಿ ಅವರು ಎಲ್ಲಿಯೂ ತೋರಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಡಿ.ಕೆ ಶಿವಕುಮಾರ್ ಅವರು ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ತಮ್ಮ ಪ್ರಭಾವವನ್ನು ಬೀರಿದ್ದರು. ವಕ್ಕಲಿಗರ ಮತಗಳಿರುವ ಕಡೆಗಳೆಲ್ಲವೂ ಕೂಡ ಕಾಂಗ್ರೆಸ್ ಗೆ ಬಹುದೊಡ್ಡ ಜಯ ಸಿಕ್ಕಿದೆ. ಕಳೆದ ಬಾರಿ ಜೆಡಿಎಸ್ 37 ಸ್ಥಾನ ಗೆದ್ದಿತ್ತು ಈ ಬಾರಿ ಕೇವಲ 19 ಸ್ಥಾನಗಳಿಗಳನ್ನು ಮಾತ್ರ ಗೆದ್ದಿದೆ. ಅದರ ಅರ್ಧದಷ್ಟು ಸ್ಥಾನಗಳು ಈ ಬಾರಿ ಕಾಂಗ್ರೆಸ್ ನ ಪಾಲಾಗಿವೆ. ಇನ್ನು ಕುರುಬ ಸಮುದಾಯವೂ ಕೂಡಾ ಸಿದ್ದರಾಮಯ್ಯನವರನ್ನು ಕೈಹಿಡಿದಿದೆ. ಇತ್ತ ಬಿಜೆಪಿಯ ಪರ ಇದ್ದಂತಹ ಲಿಂಗಾಯತ ಸಮುದಾಯದ ಮತಗಳು ಈ ಬಾರಿ ಬಿಜೆಪಿಗೆ ಬರಲಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷ ಲಿಂಗಾಯತರ ಪ್ರಭಾವವಿರುವ ಕ್ಷೇತ್ರಗಳಲ್ಲಿ ಬಹಳ ಚಾಣಾಕ್ಷತನದಿಂದ ಅವರ ಓಲೈಕೆಗೆ ಮುಂದಾಗಿತ್ತು. ಮತ್ತು ಲಿಂಗಾಯತ ಸಮುದಾಯದ ಪ್ರಬಲ ನಾಯಕರಾದಂತಹ ಎಂ ಬಿ ಪಾಟೀಲ್ ಹಾಗೂ ಶಾಮನೂರ್ ಶಿವಶಂಕರ್ಪನವರು ಬಹಳ ಆಕ್ಟಿವ್ ಆಗಿ ಕೆಲಸ ಮಾಡಿದರು. ಈ ಬಾರಿ ಕಾಂಗ್ರೆಸ್ 51 ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೇಟ್ ಕೊಟ್ಟಿತ್ತು. ಬಿಜೆಪಿಯಿಂದ ಟಿಕೆಟ್ ವಂಚಿತ ಶೆಟ್ಟರ್ ಹಾಗೂ ಸೌದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರ ಪರಿಣಾಮ ಶೆಟ್ಟರ್ ಗೆಲ್ಲಲಿಲ್ಲ ಆದರೂ ಕೂಡ ಒಂದಿಷ್ಟು ಲಿಂಗಾಯತ ಮತಗಳು ಬಿಜೆಪಿಯಿಂದ ದೂರ ಆಗೋದಕ್ಕೆ ಶಟ್ಟರ್ ಹಾಗೂ ಸೌದಿ ಅವರ ಪಕ್ಷಾಂತರ ಕಾರಣವಾಗಿತ್ತು. ಹೀಗಾಗಿ ಆಡಳಿತಾರೂಢ ಬಿಜೆಪಿಯ ಅನೇಕ ವೈಫಲ್ಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡ ಕಾಂಗ್ರೆಸ್ ಈ ಒಂದು ಚುನಾವಣೆಯಲ್ಲಿ ಅಭೂತಪೂರ್ವ ಜಯವನ್ನು ಸಾಧಿಸಿದೆ. ಇನ್ನೇನಿದ್ದರೂ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೊಟ್ಟಂತಹ ಭರವಸೆಗಳನ್ನೆಲ್ಲ ಈಡೇರಿಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಮುಂದಿನ ದಿನಮಾನಗಳಲ್ಲಿ ಅದನ್ನೆಲ್ಲಾ ಯಾವ ರೀತಿ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡೋಣ.
- * * * -