ಹೊಸ ವರ್ಷದಲ್ಲಿ ಗೋಡೆಯ ಮೇಲಿನ ಕ್ಯಾಲೆಂಡರ್ ಹೊರತು ಬದುಕಿನಲ್ಲಿ ಬದಲಾಗಿದ್ದೇನು...?

ನಿನ್ನೆಯಿಂದಲೂ ಒಬ್ಬರಾದ ಮೇಲೆ ಒಬ್ಬರು ಹೊಸ ವರ್ಷದ ಶುಭಾಶಯಗಳು ಎಂದು ಹೇಳುವಾಗ ನನಗೇನೊ ಒಂದು ತರಹದ ಕಸಿವಿಸಿಯ ಭಾವನೆ. ಅದೂ ಅಲ್ಲದೇ ಹೊಸ ವರ್ಷದ ಈ ಸೂಸಂದರ್ಭದಲ್ಲಿ ತಮ್ಮೆಲ್ಲ ಕನಸುಗಳು ಈಡೇರಲಿ ಎನ್ನುವ ಮಾತನ್ನು ಕೇಳುವಾಗ ಅಕ್ಷರಶಃ ಮೊಗದಲ್ಲಿ ಹುಸಿ ನಗು. ಕುಣಿಯೋದಕ್ಕೆ, ಕುಡಿಯೋದಕ್ಕೆ, ಉಲಿಯೋದಕ್ಕೆ, ನಲಿಯೋದಕ್ಕೆ ಒಂದು ದಿನವನ್ನು ಬಳಸಿಕೊಂಡು ಅದಕ್ಕೆ ಹೊಸ ವರ್ಷ ಎಂದು ಹೇಳುವುದನ್ನು ಕಂಡಾಗ ಇದ್ಯಾವ ಬಗೆಯ ಆಚರಣೆ ಎನ್ನುವುದು ನನಗೆ ಅರ್ಥವಾಗದೇ ಹೋಯಿತು. ನಾನಿಲ್ಲಿ ಆಚರಣೆ ಮಾಡುವುದನ್ನು ವಿರೋಧಿಸುತ್ತಿಲ್ಲ. ಅವರವರ ಭಾವಕ್ಕೆ ಅವರವರ ಭಕ್ತಿ ಎನ್ನುವ ಮಾತಿನಂತೆ ಅವರವರ ಆಚರಣೆ ಅವರವರಿಗೆ ಬಿಟ್ಟಿದ್ದು. ಅರ್ಥವಿಲ್ಲದ ಆಚರಣೆಗಳೂ ಈ ದೇಶದಲ್ಲಿ ಸಾಕಷ್ಟು ನಡೆಯುವಾಗ ನಾನೇಕೆ ಇದನ್ನು ವಿರೋಧಿಸಲಿ ಹೇಳಿ? ಅಮ್ಮನಿಗೊಂದು ದಿನ, ಅಪ್ಪನಿಗೊಂದು ದಿನ, ಪ್ರೀತಿಗೆ ಒಂದು ದಿನ, ಸ್ನೇಹಕ್ಕೆ ಒಂದು ದಿನ, ರೋಗಕ್ಕೆ ಒಂದು ದಿನ, ಆವಿಷ್ಕಾರಕ್ಕೆ ಒಂದು ದಿನ. ಸ್ವಾರ್ಥಕ್ಕೆ ಮಾತ್ರ ಪ್ರತಿದಿನವನ್ನು ಬಳಸಿಕೊಂಡು ಬದುಕುತ್ತಿರುವ ನಮಗಳಿಗೆ ಈ ರೀತಿಯ ಆಚರಣೆ ಏನು ವಿಭಿನ್ನವಲ್ಲ ಬಿಡಿ. ಆದರೆ  ಹೊಸ ವರ್ಷ ಬಂದಿದೆ ಬದಲಾವಣೆ ತಂದಿದೆ ಎನ್ನುವ ಟ್ಯಾಗ್‌ಲೈನ್‌ಗಳನ್ನು ಬಳಸಿಕೊಂಡು ಪಕ್ಕದಲ್ಲಿ ತನ್ನದೇ ಒಂದು ಪೋಟೋ ಸಿಕ್ಕಿಸಿಕೊಂಡು ವಾಟ್ಸ್‌ಪ್ ಡಿಪಿಯನ್ನು ಅಥವಾ ಮುಖಪುಟದ ಪೋಟೋವನ್ನು ಇಟ್ಟುಕೊಂಡು ಮಜಾ ಮಾಡುವ ಜನಗಳನ್ನು ಕಂಡು ನನ್ನನ್ನು ನಾನೇ  ಪರಾಮರ್ಷಿಸಿಕೊಂಡು ನೋಡಬೇಕಾಯಿತಲ್ಲ ಎನ್ನುವ ಭಾವನೆ ಅಷ್ಟೆ. ಇವರು ಹೇಳುವಂತೆ ಬದಲಾವಣೆ ಏನಾಗಿದೆ? ಅಥವಾ ಏನಾಗುತ್ತದೆ? ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಡಿಸೆಂಬರ್ ಮಧ್ಯರಾತ್ರಿಯ ವರೆಗೂ ನಿದ್ದೆಗೆಟ್ಟು ಕುಳಿತು, ರಾತ್ರಿ 12 ಗಂಟೆಯಾಗುತ್ತಲೇ ಪಟಾಕಿ ಸಿಡಿಸಿ, ಕೇಕು ಕತ್ತರಿಸಿ ಒಬ್ಬರ ಮುಖಕ್ಕೆ ಒಬ್ಬರು ಕೇಕು ಮೆತ್ತಿಕೊಂಡು ಮನಸೋ ಇಚ್ಚೆ ಕುಣಿದು, ಮನ ತಣಿಯುವಂತೆ ಕುಡಿದು ಕುಪ್ಪಳಿಸಿ, ಬೆಳಗಾಗುವ ಹೊತ್ತಿಗೆ ತಲೆಗೇರಿದ ಮತ್ತಿನಿಂದ ಹೊರ ಬಂದು ನೋಡಿದಾಗ ನಿಸರ್ಗದಲ್ಲಿ ಯಾವ ಬದಲಾವಣೆಯೂ ಇಲ್ಲ. ಬದುಕಿನಲ್ಲಿಯೂ ಯಾವ ಬದಲಾವಣೆಯೂ ಇಲ್ಲ. ರಾತ್ರಿ ತಾನೇ ಹೊಸ ವರ್ಷ ಆಚರಣೆ ಮಾಡಿದೆವು. ಆದರೆ ಯಾವುದು ಬದಲಾವಣೆ ಆಗಿಲ್ಲ ಎಂದು ನೋಡುವುದರೊಳಗೆ ಹನ್ನೆರಡು ತಿಂಗಳ ಹಿಂದೆ ಗೋಡೆ ಏರಿ ರಾರಾಜಿಸಿದ್ದ ಹಳೆಯ ಕ್ಯಾಲೆಂಡರ್ ಕೆಳಗಡೆ ಬಿದ್ದು ಹೊರಳಾಡುತ್ತಿದ್ದರೆ, ಅದೇ ತಾನೇ ಹಳೆಯ ಕ್ಯಾಲೆಂಡರ್ ಜಾಗವನ್ನು ಆಕ್ರಮಿಸಿಕೊಂಡ ಹೊಸ ಕ್ಯಾಲೆಂಡರ್ ಬೀಸುವ ಗಾಳಿಗೆ ತಕ್ಕಂತೆ ಕುಣಿದಾಡುತ್ತಿರುತ್ತದೆ. ಮೂಲೆ ಸೇರುವುದಕ್ಕೆ ಸಿದ್ಧವಾದ ಹಳೆ ಕ್ಯಾಲೆಂಡರ್ “ಎಷ್ಟು ಹಾರಾಡ್ತಿ ಹಾರಾಡು ಇಂದಿಗೆ ವಂದು ವರ್ಷದ ಹಿಂದೆ ನಾನು ಹಾರಾಡಿ ಹಾರಾಡಿ ಇಂದು ಮೂಲೆ ಸೇರುತ್ತಿದ್ದೇನೆ. ಮುಂದಿನ ವರ್ಷ ನನ್ನ ಹಾಗೆ ನೀನು ಮೂಲೆ ಸೇರಿದರೆ ಮತ್ತೊಬ್ಬ ಬಂದು ನಿನ್ನ ಜಾಗ ಸೇರುತ್ತಾನೆ. ಇಷ್ಟೇ ಕಣೋ ಹೊಸ ವರ್ಷ” ಎಂದು ಗಹಗಹಿಸಿ ನಗುತ್ತಿತ್ತು. ಅಲ್ಲಿಗೆ ಈ ಹೊಸ ವರ್ಷದಲ್ಲಿಯೂ ಬದಲಾಗಿದ್ದು ಕ್ಯಾಲೆಂಡರ್ ವಿನಃ ಬದುಕಿನಲ್ಲಿ ಏನು ಬದಲಾಗಲಿಲ್ಲ. 

ಪ್ರತಿ ವರ್ಷವೂ ಏನಾದರೂ ಬದಲಾವಣೆಯಾಗುತ್ತಿದ್ದರೆ ಅದಕ್ಕೆ ಹೊಸ ವರ್ಷ ಎಂದು ಕರೆದರೆ ಅರ್ಥವಿರುತ್ತದೆ. ಆದರೆ ಬದಲಾವಣೆ ಇಲ್ಲದ ದಿನವನ್ನು ಹೊಸ ವರ್ಷ ಎಂದುಕೊಂಡಾಗ ನಗು ಉಕ್ಕಿ ಬರುತ್ತದೆ. ಎಲ್ಲರೂ ಹೇಳಿದಂತೆ ಇಲ್ಲಿ ಏನಾದರೂ ಬದಲಾವಣೆಯಾಗುತ್ತಿದ್ದರೆ ನಮ್ಮ ಕನಸುಗಳು ಕೈಗೂಡಬೇಕಿತ್ತು. ಭಾರತದ ಬಡತನ ಬದಲಾಗಬೇಕಿತ್ತು. ದೇಶದ ಪ್ರಗತಿಯಾಗಬೇಕಿತ್ತು. ಕಿತ್ತುಹೋದ ಸಂಬಂಧಗಳು ಮತ್ತೆ ಕೂಡಿಕೊಳ್ಳಬೇಕಿತ್ತು. ಸಮಸ್ಯೆಗಳ ಸುಳಿಯಿಂದ ಜಗತ್ತು ಹೊರ ಬರಬೇಕಿತ್ತು. ಆದರೆ ಅದರಲ್ಲಿ ಒಂದೂ ಆಗಿಲ್ಲವೆಂದ ಮೇಲೆ ಇದನ್ನು ನಾನು ಹೊಸ ವರ್ಷವೆಂದು ಹೇಗೆ ಒಪ್ಪಿಕೊಳ್ಳಲಿ ಹೇಳಿ? ಭಾರತೀಯರು ಆಚರಿಸುವ ಯುಗಾದಿ ಹಬ್ಬದಲ್ಲಿ ಕನಿಷ್ಟ ಪ್ರಕೃತಿಯಲ್ಲಿ ಬದಲಾವಣೆಯಾದರೂ ಆಗುತ್ತದೆ. ನಿಸರ್ಗವೇ ಬದಲಾವಣೆಗೆ ತೆರದುಕೊಳ್ಳುತ್ತದೆ. ದಿನವಿರುವದಕ್ಕಿಂತ ವಿಭಿನ್ನವಾದ ವಾತಾವರಣದೊಂದಿಗೆ ನಿಸರ್ಗ ರಾರಾಜಿಸುತ್ತದೆ. ಅದಕ್ಕೆ ಹೊಸ ವರ್ಷ ಎನ್ನುವುದರಲ್ಲಿ ಒಂದು ಅರ್ಥ ಸಿಗುತ್ತದೆ. ಯಾವುದೇ ಬದಲಾವಣೆ ಇಲ್ಲದ ಈ ದಿನವನ್ನು ಹೊಸ ವರ್ಷ ಎನ್ನುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ಹೂಂ...! ಎನ್ನುವುದಾದರೆ ನಾನು ಕೂಡ ನಡು ರಾತ್ರಿ ಎದ್ದು ಕೇಕು ಕತ್ತರಿಸುತ್ತೇನೆ ಆದರೆ ಮರುದಿನವೇ ಮನಸ್ಸುಗಳ ಮಧ್ಯದಲ್ಲಿ ಎದ್ದಿರುವ ದ್ವೇಷ ಅಸೂಹೆ ಎನ್ನುವ ಬಳ್ಳಿಗಳು ಕತ್ತಿರಿಸುತ್ತವೆಯೇ? ನಾನು ಮಧ್ಯರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಲು ಸಿದ್ಧನಿದ್ದೇನೆ ಆದರೆ ಧರ್ಮಗಳ ಮಧ್ಯದಲ್ಲಿ ಉರಿಯುವ ಬೆಂಕಿಯು ಮರುದಿನವೇ ಶಾಂತವಾಗುತ್ತದೆಯೆ? ಇದ್ಯಾವುದು ಆಗುವುದಿಲ್ಲ ಎಂದ ಮೇಲೆ ಇದ್ಯಾವ ತರಹದ ಹೊಸ ವರ್ಷ? ಇದನ್ನೇಕೆ ಆಚರಿಸಬೇಕು? ಇಂಥಹ ಹೊಸ ವರ್ಷಕ್ಕಾಗಿ ನಾವು ವ್ಯರ್ಥ ಹಣ ಖರ್ಚು ಮಾಡುವುದು ಯಾವ ಪುರುಷಾರ್ಥಕ್ಕೆ? ಆದರೂ ಆಚರಿಸುತ್ತೇವೆ, ಸಂಭ್ರಮಿಸುತ್ತೇವೆ, ಶುಭಾಷಯಗಳನ್ನು ಹೇಳುತ್ತೇವೆ, ಸಿಹಿ ಹಂಚಿಕೊಳ್ಳುತ್ತೇವೆ, ಕುಣಿದು, ದಣಿದು ಕೊನೆಗೆ ಮತ್ತೆ ಯಾವುದು ಏನಿತ್ತೋ ಅದರೊಂದಿಗೆ ಹೊಂದಿಕೊಂಡು ಹೊರಟು ಬಿಡುತ್ತೇವೆ. 

ಹೊಸ ವರ್ಷವನ್ನು ಮಧ್ಯರಾತ್ರಿ ಎದ್ದು ಕುಳಿತು ಆಚರಿಸುವ ಜನಗಳನ್ನು ಕಂಡಾಗ ನನ್ನಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹೊಸ ವರ್ಷಕ್ಕೆಂದು ರಾತ್ರಿ ಇಡೀ ಎಚ್ಚರವಿದ್ದು ಶುಭಾಷಯಗಳ ವಿನಿಮಯ ಮಾಡಿಕೊಳ್ಳುವ ಯುವ ಮಿತ್ರರಿಗೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಮಧ್ಯ ರಾತ್ರಿ 12 ಗಂಟೆಗೆ ಎನ್ನುವುದರ ಪರಿವೆ ಇದೆಯೆ? ಮಧ್ಯರಾತ್ರಿಯ ಸ್ವಾತಂತ್ರ್ಯವನ್ನು ಮರುದಿನ ಆಚರಣೆಗೆ ಬಳಸಿಕೊಳ್ಳುವ ನಾವು ಬೆಳಗಿನ 9 ಗಂಟೆಗೆ ಧ್ವಜ ಹಾರಿಸಿ ಸಂಭ್ರಮಿಸುತ್ತೇವೆ. ಹೊಸ ವರ್ಷಕ್ಕಾದರೆ ಮಧ್ಯರಾತ್ರಿಯಲ್ಲಿ ಎಚ್ಚರವಿದ್ದು ಬೆಳಗೆದ್ದು ಮಲಗಿ ಬಿಡುತ್ತೇವೆ. ಆದರೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾತ್ರ ದೀರ್ಘನಿದ್ದೆಯಲ್ಲಿದ್ದು ನಂತರ ಎದ್ದು, ಯಾರೋ ಧ್ವಜ ಹಾರಿಸುತ್ತಾರೆ, ಮತ್ಯಾರೋ ಚಪ್ಪಾಳೆ ತಟ್ಟುತ್ತಾರೆ, ಇನ್ಯಾರೋ ಸಿಹಿ ಹಂಚುತ್ತಾರೆ, ಅವರಾ​‍್ಯರೋ ಭಾಷಣ ಬಿಗಿಯುತ್ತಾರೆ. ಇಲ್ಲಿ ಸರ್ಕಾರದ ಆದೇಶವಿದೆ ಎಂಬ ಕಾರಣಕ್ಕಾಗಿ ಶಾಲೆಗಳಲ್ಲಿ ದಿನಾಚರಣೆ ಮಾಡುತ್ತಾರೆ. ಇಲ್ಲದೇ ಹೋಗಿದ್ದರೆ ಅದನ್ನು ಆಚರಿಸುವ ಗೊಡವೆಗೂ ಹೋಗುತ್ತಿರಲಿಲ್ಲ. ಅಷ್ಟಕ್ಕೂ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುವುದು ಕೇವಲ ಸರ್ಕಾರಿ ನೌಕರರು, ಶಾಲಾ ಕಾಲೇಜುಗಳ ಶಿಕ್ಷಕರು ಜೊತೆಗೆ ಶಾಲಾ ಮಕ್ಕಳು. ಕೆಲವೇ ಕೆಲವು ಜನಗಳು ಮಿಕ್ಕವರಿಗೆ ಅದರ ಅವಶ್ಯಕತೆಯೇ ಇಲ್ಲ. ಅದೇ ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಮನೆ ಮನೆಯಲ್ಲೆಲ್ಲ ಹಬ್ಬ. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಮಾತ್ರ ಕೆಲವರಿಗೆ ಮೀಸಲು. ಅದಕ್ಕೆ ಹೇಳಿದ್ದು ಇದು ಕೇವಲ ತೋರಿಕೆಗಾಗಿ ಹಾಗೂ ಸ್ವಾರ್ಥವನ್ನು ಸಾಧಿಸಿಕೊಳ್ಳುವುದಕ್ಕಾಗಿಯೇ ಹೊರತು ಬೇರಾವುದಕ್ಕೂ ಅಲ್ಲ. 

ಹೀಗೆ ನಾನು ಹೇಳುತ್ತ ಸಾಗಿದರೆ ಒಬ್ಬೊಬ್ಬರು ನನ್ನ ಬಗ್ಗೆ ಒಂದೊಂದು ರೀತಿಯಲ್ಲಿ ಅಲೋಚನೆ ಮಾಡುತ್ತಾ ಸಾಗುತ್ತಾರೆ. ಇವನ್ನೊಬ್ಬ ರಾಷ್ಟ್ರೀಯವಾದಿಯಾಗಿರಬೇಕು. ಇವನೊಬ್ಬ ಹಿಂದುತ್ವಾದಿಯಾಗಿರಬೇಕು. ಇವನೊಬ್ಬ ಆರ್‌ಎಸ್‌ಎಸ್ ವ್ಯಕ್ತಿ ಇರಬೇಕು ಎಂದು. ಆದರೆ ನಾನು ಇದ್ಯಾವುದು ಅಲ್ಲ. ನಾನು ಕೂಡ ಅರಿಸ್ಟಾಟಲ್ ತರಹ ಒಬ್ಬ ವಾಸ್ತವ ವಾದಿ ಅಷ್ಟೆ. ವಿದೇಶಿಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದಕ್ಕೆ ನನ್ನ ವಿರೋಧವಿಲ್ಲ. ಹಾಗೆಂದು ಎಲ್ಲವನ್ನು ಒಪ್ಪಿಕೊಳ್ಳುವಂತ ದಡ್ಡ ಮನಸ್ಸು ನನ್ನದಲ್ಲ. ಆ ದೇಶದ ಜನತೆ ತನ್ನ ಸಂಸ್ಕೃತಿಯನ್ನು ಆಚರಿಸುತ್ತಿದೆಯೇ ಹೊರತು ಅನ್ಯ ದೇಶದ ಸಂಸ್ಕೃತಿಯನ್ನಲ್ಲ. ಹಾಗೆ ನಮ್ಮ ದೇಶದವರು ಕೂಡ ನಮ್ಮ ದೇಶದ ಸಂಸ್ಕೃತಿಗೆ ಬದ್ಧವಾಗಿ ಬದುಕಿದರೆ ಅನ್ಯ ದೇಶದವರು ಮುಂದೆ ನಮ್ಮ ತರಹ ಬದುಕಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ನಾವದನ್ನು ಬಿಟ್ಟು ಅವರ ಸಂಸ್ಕೃತಿಯನ್ನೇ ನಮ್ಮದು ಎನ್ನುವ ಮಟ್ಟದಲ್ಲಿ ಆಚರಿಸುತ್ತಿರುವುದು ಕೊಂಚ ಇರುಸು ಮುರುಸು ಉಂಟು ಮಾಡಿತು ಅಷ್ಟೆ. ಇರಲಿ ಇದನ್ನೇ ಹೊಸ ವರ್ಷ ಎಂದು ಆಚರಣೆ ಮಾಡುತ್ತೇವೆ ಎನ್ನುವುದು ನಿಮ್ಮ ವಾದವಾದರೆ ಅದಕ್ಕೆ ನನ್ನ ಸಮ್ಮತಿ ಇದೆ. ಆದರೆ ಆಚರಣೆ ಎನ್ನುವುದು ಕೇವಲ ಕೇಕು ಕತ್ತರಿಸುವುದಕ್ಕೆ, ಮಧ್ಯದಲ್ಲಿ ಮಿಂದೆದ್ದು ಕುಣಿಯುವುದಕ್ಕೆ ಸೀಮಿತವಾದರೆ ಅದಕ್ಕೇನು ಅರ್ಥವಿದೆ ಹೇಳಿ? ಯಾವುದೇ ಆಚರಣೆಯಾದರೂ ಕೂಡ ಅದನ್ನು ಅರ್ಥಪೂರ್ಣವಾಗಿ ಆಚರಿಸಿದರೆ ಅದಕ್ಕೆ ನಿಜವಾಗಲು ಬೆಲೆ ಇರುತ್ತದೆ. ಕೇವಲ ಮೋಜು ಮಸ್ತಿಗಾಗಿ ಹೊಸ ವರ್ಷ ಎಂದುಕೊಂಡು ಸಂಭ್ರಮಿಸಿದರೆ ಹೇಗೆ? ಹೊಸ ವರ್ಷದ ಶುಭಾಷಯಗಳು ಎಂದು ಹೇಳುತ್ತ ಸಂದೇಶಗಳನ್ನು ಹರಿಬಿಟ್ಟು, ಬದುಕಿನಲಿ ಇನ್ನು ಮುಂದಾದರು ಬದಲಾವಣೆ ಆಗಲಿ ಎನ್ನುವ ಮಾತನ್ನು ಹೇಳುತ್ತೇವೆ. ಈ ವರ್ಷದಿಂದಾದರೂ ತಮ್ಮ ಬದುಕಿನಲ್ಲಿ ಸಂತೋಷ ತುಂಬಿಕೊಳ್ಳಲಿ ಎಂದು ಹೇಳಿಕೊಳ್ಳುತ್ತ ಸಾಗುತ್ತೇವೆ. ಹಾಗಾದರೆ ಸಂತೋಷ ತುಂಬ ಬೇಕಾದರೆ ನಾವೇನು ಮಾಡಬೇಕು ಎನ್ನುವುದನ್ನು ಯಾವತ್ತೂ ಅಲೋಚನೆ ಮಾಡಲೇ ಇಲ್ಲ ಅಲ್ಲವೆ? ಒಬ್ಬ ವ್ಯಕ್ತಿಗೆ ಸಾವು ಬರಬೇಕು ಎಂದರೂ ಕೂಡ ಪ್ರಾಣ ಕೊಡಬೇಕು. ಅಂದಮೇಲೆ ಸಂತೋಷ ಸಿಗಬೇಕು ಎಂದರೆ ಅದಕ್ಕೆ ಪ್ರತಿಯಾಗಿ ನಾವು ದುಃಖದಿಂದ ಹೊರಬರಬೇಕು. ಮತ್ತೊಬ್ಬರ ದುಃಖದಲ್ಲಿ ಪಾಲುದಾರನಾಗಿ ಅವರನ್ನು ಸಂತೋಷವಾಗಿರಿಸಲು ಯತ್ನಿಸಬೇಕು ಅದರಲ್ಲಿಯೇ ಸಂತೋಷ ಅಡಗಿದೆ ಎನ್ನುವ ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ನಾವು ಸಂದೇಶದಲ್ಲಿ ಹೇಳಿದಂತೆ ಸಂತೋಷ ಎನ್ನುವುದು ನಮ್ಮ ಬದುಕನ್ನು ತುಂಬಲು ಸಾಧ್ಯ. 

ಅಸಾದುಲ್ಲಾ ಬೇಗ ಎಂಬ ಕವಿಯೊಬ್ಬರು ಹೊಸ ವರ್ಷದ ಕುರಿತು ಹೇಳಿದ ಮಾತು ನಿಜಕ್ಕೂ ಈ ಕ್ಷಣ ನನ್ನನ್ನು ಕಾಡುತ್ತದೆ. ಒಂದು ದಿನಕ್ಕೆ ಹೊಸವರ್ಷ ಹೊಸತನ ಎನ್ನುತ್ತ ಬದುಕುವ ಜನಗಳು ಅವರ ಈ ಮಾತನ್ನು ಕೇಳಿದರೆ ನಿಜವಾದ ಬದುಕು ನಿಜವಾದ ಹೊಸತನ ಹೇಗಿರುತ್ತದೆ ಎನ್ನುವುದು ನಮಗರ್ಥವಾಗುತ್ತದೆ. 

“ಹೊಸದೇನಿದೆ...? ಹೊಸದೆಲ್ಲಿದೆ...? ಹೊಸದ್ಹೇಗಿದೆ...? 

ಹೊಸತು ಹೊಸತು ಎಂದರೆ ದಿನವೆಲ್ಲ ಹೊಸತೆ 

ಪ್ರತಿ ಮನದ ನೊವನ್ನು ಮರೆತೆದ್ದರೆ 

ಪ್ರತಿ ದಿನವೂ ಹೊಸತೆ” 

ಎನ್ನುವ ಇವರ ಚಿಂತನೆ ಅದೆಷ್ಟು ಅದ್ಭುತವಾಗಿದೆ ಅಲ್ಲವೇ? ಮನಸ್ಸಿನಲ್ಲಿ ನೂರೆಂಟು ವಿಷಾಧಗಳನ್ನು ತುಂಬಿಕೊಂಡು, ಸತ್ತು ಹೋಗಿರುವ ನೆನಪುಗಳನ್ನು ಮನದಲ್ಲೇ ಮಣ್ಣು ಮಾಡಿಕೊಂಡು ನಂದನವನವಾಗಬೇಕಿದ್ದ ಮನಸ್ಸನ್ನು ಸ್ಮಶಾನವನ್ನಾಗಿ ಮಾಡಿಕೊಂಡು ಕಣ್ಣೀರು ಹಾಕುತ್ತ ಬದುಕಿದರೆ ಯಾರ ಬಾಳಲ್ಲಿಯೂ ಕೂಡ ಎಂದಿಗೂ ಹೊಸ ವರ್ಷ ಬರುವುದಕ್ಕೆ ಸಾಧ್ಯವೇ ಇಲ್ಲ. ಅಂತವರ ಮನೆಯಲ್ಲಿ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ ಹೊರತು ಬದುಕು ಬದಲಾಗುವುದಿಲ್ಲ. ಬದುಕು ಬದಲಾಯಿಸಿಕೊಳ್ಳಬೇಕು ಎಂದವರು ಕ್ಯಾಲೆಂಡರ್ ಬದಲಾವಣೆಯ ದಿನಕ್ಕಾಗಿ ಕಾಯುವುದಿಲ್ಲ. ಹೀಗಿರುವಾಗ ಹೊಸ ವರ್ಷ ನಮ್ಮ ಬಾಳಲ್ಲಿ ಬರಬೇಕು, ಸಂತೋಷ ನಮ್ಮ ಜೀವನದಲ್ಲಿ ಸುಳಿಯಬೇಕು ಎಂದರೆ ಮೊದಲು ನಾವು ನಮ್ಮ ಮನಸ್ಸಿನಲ್ಲಿಯೇ ಬತ್ತಿ ಹೋಗಿರುವ ಸಂತೋಷದ ಚಿಲುಮೆಗೆ ಮರು ಜೀವ ಕೊಡಬೇಕು. ಇಲ್ಲಿ ನೋವು ನಲಿವುಗಳು ಎನ್ನುವುದು ನಮ್ಮ ಭಾವನೆಗಳಲ್ಲಿಯೇ ಬಿಂಬಿತವಾಗುತ್ತದೆಯೇ ಹೊರತು ಯಾರೋ ಹೇಳುವ ಶುಭಾಷಯಗಳಲ್ಲಿ ಅಲ್ಲ. ಅವರು ಹೇಳಿದ ಶುಭಾಷಯಕ್ಕೆ ಒಂದು ಅರ್ಥ ಬರಬೇಕೆಂದರೆ ನಾವು ನಮ್ಮಲ್ಲಿಯೇ ಮತ್ತೇ ಜೀವಂತವಾಗಬೇಕು. “ಜೀವನವನ್ನು ಹಿಂದೆ ನೋಡಿ ತಿಳಿಯಬೇಕು, ಮುಂದೆ ನೋಡಿ ಬದುಕಬೇಕು ಕೊನೆಗೆ ಕೆಟ್ಟ ನೆನಪುಗಳೆಂಬ ಶವಗಳನ್ನು ಸುಟ್ಟು ಸುಮ್ಮನಾಗಬೇಕು” ಸತ್ತ ವ್ಯಕ್ತಿಗಳ ದೇಹವನ್ನು ಹೊತ್ತೊಯ್ಯುವುದು ಚಿತೆಯ ವರೆಗೂ ಮಾತ್ರ. ಅಲ್ಲೇ ಅದನ್ನು ಸುಟ್ಟು, ಕೆಟ್ಟವರಿದ್ದರೆ ಅವರ ನೆನಪುಗಳನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ. ಚಿತೆಗೇರಿದ ಶವವನ್ನು ಮತ್ತೆ ಹೊತ್ತು ತರುವುದಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಬದುಕಿನಲ್ಲಿ ನಡೆದು ಹೋದ ಘಟನೆಗಳಿಗೆ ಮತ್ತೆ ಮತ್ತೆ ನೆನೆದು ಅತ್ತರು ಅದು ಬದಲಾಗುವುದಿಲ್ಲ. ಅದಕ್ಕೆ ಹೇಳಿದ್ದು “ಇತಿಹಾಸವನ್ನು ಮರುಸೃಷ್ಠಿಸಬಹುದೇ ಹೊರತು ಇತಿಹಾಸವನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ” ಎಂದು. ಅಂದರೆ ನಡೆದು ಹೋದ ಘಟನೆಗಳನ್ನು ನೆನೆದು ಅಳುವುದರ ಬದಲು ಮುಂದೆ ನಡೆಯಬಹುದಾದ ಬದುಕಿಗೆ ಕನ್ನಡಿ ಹಿಡಿಯುವ ಕಾರ್ಯವಾದರೆ ಮಾತ್ರ ಹೊಸ ವರ್ಷವನ್ನು ಆಚರಣೆ ಮಾಡಿದ್ದಕ್ಕೂ ಸಾರ್ಥಕತೆ ಬರುತ್ತದೆ. 

ಹಾಗಿದ್ದರೆ ಅರ್ಥವಿಲ್ಲದ ಆಚರಣೆ ಎಂದು ಕೈ ಬಿಟ್ಟು ಕೂರಬೇಕೆ? ಎನ್ನುವ ಪ್ರಶ್ನೆ ಮುಂದಿಡುವ ಜನಗಳೇ ಅರ್ಥ ಮಾಡಿಕೊಳ್ಳಿ ಇದನ್ನು ಬಿಟ್ಟು ಬಿಡಿ ಎಂದು ಹೇಳುವುದಿಲ್ಲ. ಆದರೆ ಕಸದಿಂದ ರಸ ತೆಗೆಯುವ ಹಾಗೆ ಇದನ್ನು ಕೂಡ ನಾವು ಧನಾತ್ಮಕತೆ ಎಡೆಗೆ ತಿರುಗಿಸಿಕೊಳ್ಳೋಣ. ಅದು ಹೇಗೆ ಎನ್ನುತ್ತೀರಾ? ಹೊಸ ವರ್ಷ ಎನ್ನುವುದನ್ನು ಕೇವಲ ಕುಡಿತಕ್ಕೆ ಕುಣಿತಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟು ಬದಲಾವಣೆಗೆ ಏಕೆ ಬಳಸಿಕೊಳ್ಳಬಾರದು. ಅಂದರೆ ಈ ವರ್ಷದಲ್ಲಿ ನಮ್ಮ ಬದುಕಿನಲ್ಲಿ ಸಂತೋಷ ಬೇಕೆ? ಹಾಗಾದರೆ ಕೆಟ್ಟ ನೆನಪುಗಳನ್ನು ಇಂದೇ ಬಿಟ್ಟು ಬಿಡುವ ನಿರ್ಧಾರಕ್ಕೆ ಬರೋಣ. ಈ ವರ್ಷದಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆ? ಹಾಗಾದರೆ ಈ ವರ್ಷ ಅತೀ ಹೆಚ್ಚು ಶ್ರಮವಹಿಸಿ ಕಾರ್ಯ ಮಾಡೋಣ. ಈ ವರ್ಷ ಶ್ರೀಮಂತರಾಗಬೇಕೆ? ಹಾಗಾದರೆ ಆ ಶ್ರೀಮಂತಿಕೆಯನ್ನು ಪಡೆಯುವ ಮಾರ್ಗವನ್ನು ಇಂದಿನಿಂದಲೇ ಅನ್ವೇಷಿಸೋಣ. ಈ ವರ್ಷ ನೆಮ್ಮದಿಯಾಗಿರಬೇಕೆ? ಹಾಗಾದರೆ ಅನ್ಯರ ಬಗ್ಗೆ ವಿಚಾರ ಮಾಡುವುದನ್ನು ಬಿಟ್ಟು ಬಿಡೋಣ. ಈ ವರ್ಷ ಖುಷಿಯಿಂದ ಕಳೆಯಬೇಕೆ? ಹಾಗಾದರೆ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸುತ್ತ ನಡೆದು ಬಿಡೋಣ. ಈ ವರ್ಷ ಸಾರ್ಥಕತೆಯನ್ನು ಪಡೆದುಕೊಳ್ಳಬೇಕೆ? ಹಾಗಾದರೆ ಎಲ್ಲರೊಂದಿಗೆ ಪ್ರೀಯಿಯಿಂದಿದ್ದು ಬಿಡೋಣ. ಈ ವರ್ಷ ಬದುಕಿನ ಕತ್ತಲನು ಗೆದ್ದು ನಿಲ್ಲಬೇಕೆ? ಹಾಗಾದರೆ ಮನಸ್ಸಿನ ಮನೆಯ ಹೊಸಿಲಿನ ಮೇಲೊಂದು ನೀರೀಕ್ಷೆಯ ದೀಪವನ್ನುರಿಸಿ, ಅದರ ಬೆಳಕಲ್ಲಿ ಪಯಣ ಆರಂಭಿಸೋಣ. ಈ ರೀತಿ ಮಾಡಿದರೆ ಅದಕ್ಕೊಂದು ಅರ್ಥ ಬರುತ್ತದೆ. ಇಲ್ಲದೇ ಹೋದಲ್ಲಿ ಹತ್ತರಲ್ಲಿ ಹನ್ನೊಂದರಂತೆ ಹೊಸ ವರ್ಷವೂ ಕೂಡ ವ್ಯರ್ಥವಾಗುತ್ತದೆ.  

ವಿದೇಶಿ ಆಚರಣೆ ಎಂದು ಅದನ್ನು ತಿರಸ್ಕರಿಸಿ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ತಿರಸ್ಕರಿಸಿ ಎಂದು ಹೇಳಿದರೆ ಅದನ್ನು ಯಾರೂ ಕಿವಿಗೂ ಹಾಕಿಕೊಳ್ಳುವುದಿಲ್ಲ. ಕಾರಣ ಅದಾಗಲೇ ಈ ಎಲ್ಲ ಆಚರಣೆಗಳು ನಮ್ಮ ಬದುಕಿನುದ್ದಕ್ಕೂ ಬೆರೆತು ಹೋಗಿವೆ. ಆದರೆ ಅದನ್ನು ವ್ಯರ್ಥವಾಗಿ ಬಳಸಿಕೊಳ್ಳುವುದು ಬೇಡ ಎನ್ನುವ ಕಾರಣಕ್ಕಾಗಿಯೇ ಈ ರೀತಿ ಆಚರಣೆ ಮಾಡೋಣ ಎಂದು ಹೇಳಿದ್ದು. ಹೊಟ್ಟೆ ತುಂಬಿದವರೊಂದಿಗೆ ಸೇರಿ ಹಣ ಹಾಳು ಮಾಡುವ ಬದಲು ಹಸಿದ ಹೊಟ್ಟೆಗಳನ್ನು ಹುಡುಕಿಕೊಂಡು ಹೋಗಿ ಅನ್ನ ಹಾಕಿದರೆ ಅದೇ ದಿನ ಹೊಸ ವರ್ಷವಾಗುತ್ತದೆ. ಅಳುವ ಮನಸ್ಸಿಗೆ ನೆಮ್ಮದಿ ನೀಡಿದರೆ ಅಂದೇ ಹೊಸ ವರ್ಷವಾಗುತ್ತದೆ. ಸೂತವನಿಗೆ ಹೆಗಲು ನೀಡಿದರೆ ಅಂದೇ ಹೊಸತನ ಹುಟ್ಟಿಕೊಳ್ಳುತ್ತದೆ. ಈ ರೀತಿಯಾಗಿ ನಾವು ಹೊಸ ವರ್ಷವನ್ನು ಆಚರಿಸಬೇಕೆ ವಿನಃ 50 ರೂಪಾಯಿಯ ಕ್ಯಾಲೆಂಡರ್ ಬದಲಾಯಿಸುವುದಕ್ಕಾಗಿ 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಕುಡಿದು ಕುಣಿದು ಹಾಳುಮಾಡಿದರೆ ಏನು ಫಲ ಅಲ್ಲವೇ? ನನ್ನ ಯುವ ಮಿತ್ರರು ಅರ್ಥ ಮಾಡಿಕೊಂಡು ಹೆಜ್ಜೆ ಇಟ್ಟರೆ ಹೊಸವರ್ಷ ಎನ್ನುವ ಹೆಸರನ್ನು ಸಾರ್ಥಕ ಮಾಡಬಹುದು ಏನಂತಿರಾ? 

- * * * -