ನವದೆಹಲಿ, ಜ 27 ಗಾಯದಿಂದ ತಂಡದಿಂದ ಹೊರಗುಳಿದಿದ್ದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಇದೀಗ ಚೇತರಿಸಿಕೊಂಡಿದ್ದರೂ ಅಂತಿಮ 11ರಲ್ಲಿ ಅವಕಾಶ ಸಿಗದೆ ಬೆಂಚ್ ಕಾಯುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ದೆಹಲಿ ಯುವ ಆಟಗಾರನ ಪರ ಬ್ಯಾಟ್ ಬೀಸಿದ್ದಾರೆ.ಮಹೇಂದ್ರ ಸಿಂಗ್ ಧೋನಿ ಉತ್ತರಾಧಿಕಾರಿಯಾಗಿರುವ ರಿಷಭ್ ಪಂತ್ ಅವರ ಸ್ಥಾನದಲ್ಲಿ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ಯಶಸ್ಸಿನ ಉತ್ತುಂಗಕ್ಕೇರತ್ತಿರುತ್ತಿದ್ದಾರೆ. ಇದು ಪಂತ್ ಪಾಲಿಗೆ ಮುಳುವಾಗಿ ಪರಿಣಮಿಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಂಟಿಂಗ್,"ರಿಷಭ್ ಪಂತ್ ಅದ್ಭುತ ಪ್ರತಿಭಾವಂತ ಎನ್ನುವುದರಲ್ಲಿ ಅನುಮಾನವೇ ಇಲ್ಲ. ತಡವಾದರೂ ಭಾರತ ತಂಡದ ಅಂತಿಮ 11ಕ್ಕೆ ಪ್ರವೇಶ ಮಾಡಲಿದ್ದಾರೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ರಿಕಿ ಪಾಂಟಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿದ್ದಾರೆ. "ಮುಂದಿನ ಆವೃತ್ತಿಯ ವಿಶ್ವದ ಅತ್ಯಂತ ಶ್ರೀಮಂತ್ ಲೀಗ್ ಆದ ಐಪಿಎಲ್ ಟೂರ್ನಿಯಲ್ಲಿ ಪಂತ್ ಅವರೊಂದಿಗೆ ಕೆಲಸ ನಿರ್ವಹಿಸುತ್ತೇನೆ,'' ಎಂದಿದ್ದಾರೆ."ರಿಷಭ್ ಪಂತ್ ಅಪಾರ ಪ್ರಮಾಣದ ಪ್ರತಿಭೆಯನ್ನು ಹೊಂದಿರುವ ಯುವಕ. ಐಪಿಎಲ್ ಸಮಯದಲ್ಲಿ ಅವರೊಂದಿಗೆ ಮತ್ತೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಮತ್ತು ಅವರು ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಪಾಂಟಿಂಗ್ ಟ್ವಿಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಎರಡೂ ಜವಾಬ್ದಾರಿ ನಿರ್ವಹಿಸುವಂತೆ ಟೀಮ್ ಮ್ಯಾನೇಜ್ ಮೆಂಟ್ ನಿರ್ಧರಿಸಿದೆ. ಹಾಗಾಗಿ, ಪಂತ್ ಅವರಿಗೆ ಅಂತಿಮ 11ರಲ್ಲಿ ಅವಕಾಶ ಸಿಗುತ್ತಿಲ್ಲ. ತಂಡ ನೀಡಿರುವ ಹೊಸ ಜವಾಬ್ದಾರಿಯನ್ನು ಕನ್ನಡಿಗ ರಾಹುಲ್ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.ಮೊದಲ ಎರಡು ಪಂದ್ಯಗಳಲ್ಲಿ ಭಾರತದ ಗೆಲುವಿನಲ್ಲಿ ಕರ್ನಾಟಕ ಆಟಗಾರ ಎರಡು ಅರ್ಧಶತಕ ಸಿಡಿಸುವ ಮೂಲಕ ಪ್ರದಾನ ಪಾತ್ರ ವಹಿಸಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಈಗಾಗಲೇ 2-0 ಮುನ್ನಡೆ ಪಡೆದಿದೆ.