ಬೆಂಗಳೂರು,ಫೆ 10: ಆರ್ ಎಸ್ಎಸ್ ನವರಿಗೆ ಊಟ ಹಾಕುತ್ತೇವೆ ಎನ್ನುತೀರಲ್ಲಾ ನೀನೇನು ಟಾಟಾನಾ, ಬಿರ್ಲಾನಾ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘದವರಿಗೆ ನೀವೇನು ಊಟ ಹಾಕಿಸೋ ಅಗತ್ಯತೆ ಇಲ್ಲ. ಆ ನೈತಿಕತೆಯೂ ಅವರಿಗಿಲ್ಲ. ಡಿ.ಕೆ.ಶಿವಕುಮಾರ್ ಹೇಳಿಕೆ ಅಹಂಕಾರದ ಪರಮಾವಧಿ.ಅವರು ಊಟ ಹಾಕುವುದಾ ದರೆ,ಈಗ ಹಲವು ಕಾಂಗ್ರೆಸ್ ನಾಯಕರು ನಿರ್ಗತಿಕರಾಗಿದ್ದಾರೆ. ಫುಟ್ ಪಾತ್ ನಲ್ಲಿರುವ ಕಾಂಗ್ರೆಸ್ ನವರಿಗೆ ಊಟ ಹಾಕಿಸಲಿ ಎಂದು ವಾಗ್ದಾಳಿ ನಡೆಸಿದರು.
ರಾಮನಗರ ಭಾಗದಲ್ಲಿ ಹಿಂದೂ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಡಿ.ಕೆ.ಶಿವಕುಮಾರ್ ಹೆದರಿದ್ದಾರೆ.ಅವರಿಗೆ ಈಗ ಉಳಿದು ಕೊಂಡಿರುವುದು ಕನಕಪುರ ಕ್ಷೇತ್ರ ಒಂದೇ. ಮೊದಲು ಅವರು ಆ ಕ್ಷೇತ್ರವನ್ನು ಉಳಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು.
ಕಪಾಲಬೆಟ್ಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ತೀವ್ರಗೊಂಡಿರೋದು ನಿಜ.ಒಂದೇ ಕೋಮಿನ ಜನರಿಗೆ ಭೂಮಿ ಹಂಚಲಾ ಗುತ್ತಿದೆ.ಅಲ್ಲದೆ ಸರ್ಕಾರಿ ಭೂಮಿ ಲಪಟಾಯಿಸುವ ಹುನ್ನಾರವೂ ನಡೆದಿದೆ.ನಾವೆಲ್ಲ ಮುನೇಶ್ವರನ ಆರಾಧಕರು.ಡಿ.ಕೆ.ಶಿವಕುಮಾರ್ ಕೂಡ ಮುನೇಶ್ವರನ ಭಕ್ತರೇ.ಹಾಗಾಗಿ ಮುನೇಶ್ವರಬೆಟ್ಟವನ್ನು ಉಳಿಸಿಕೊಳ್ಳುತ್ತೇವೆ.ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದರು.
ನಾನು ಕಂದಾಯ ಖಾತೆಯನ್ನು ಉಳಿಸಿಕೊಂಡು ಹೆಚ್ಚುವರಿಯಾಗಿರುವ ಪೌರಾಡಳಿತ ಖಾತೆಯನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.