ಕಲಬುರಗಿ, ಫೆ 13: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವಂತೆ ಶಿಫಾರಸ್ಸು ಮಾಡಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕೆಲ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಗುರುವಾರ ಕರ್ನಾಟಕ ಬಂದ್ ಕರೆಗೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಜನರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ
ಕಲ್ಯಾಣ ಕರ್ನಾಟಕ ಭಾಗದ ಬೀದರ್, ಯಾದಗೀರ್, ರಾಯಚೂರು, ಕೊಪ್ಪಳ ,ಗುಲಬರ್ಗ ಹಾಗೂ ಬಳ್ಳಾರಿಯಲ್ಲಿ ಬಂದ್ ಜನರಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಕಲಬುರಗಿ ನಗರದಲ್ಲಿ ಸಾಮಾನ್ಯ ಜನ ಜೀವನದಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಲಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ರಸ್ತೆಗಳಲ್ಲಿ ವಾಹನಗಳ ಸಂಚಾರವೂ ಸಾಮಾನ್ಯವಾಗಿತ್ತು.
ಕರ್ನಾಟಕ ಬಂದ್ ಗೆ ನೈತಿಕ ಬೆಂಬಲವನ್ನು ಮಾತ್ರ ವ್ಯಕ್ತಪಡಿಸಿದ್ದೇವೆ, ಬಂದ್ ನಲ್ಲಿ ನೇರವಾಗಿ ಪಾಲ್ಗೊಂಡಿಲ್ಲ ಎಂದು ಹೋಟೆಲ್ ಹಾಗೂ ಬೇಕರಿ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
ಬಂದ್ ಕರೆಗೆ ಯಾದಗೀರ್ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಬಳ್ಳಾರಿಯಲ್ಲಿ ಸಾಮಾನ್ಯ ಜನ ಜೀವನದ ಮೇಲೆ ಬಂದ್ ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.
ಕನ್ನಡ ಪರ ಸಂಘಟನೆಗಳು ಬಂದ್ ಕರೆ ನೀಡಿದ್ದರೂ, ವಾಹನಗಳ ಸಂಚಾರ ಮಾಮೂಲಿನಂತಿತ್ತು. ಕನ್ನಡ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ನಾಯಕರು ನಗರದ ಪ್ರಮುಖ ರಸ್ತೆಯಲ್ಲಿ ಪ್ರತಭಟನಾಮೆರವಣಿಗೆ ನಡೆಸಿದರು
ರಾಯಚೂರು, ಬೀದರ್ ಹಾಗೂ ಕೊಪ್ಪಳದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಗರಗಳಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕೆಲ ಕನ್ನಡ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಸೂಕ್ತವಾಗಿ ಜಾರಿಗೊಳಿಸಲು ಒತ್ತಾಯಿಸಿವೆ. ಈ ನಗರಗಳಲ್ಲಿ ಸಾಮಾನ್ಯ ಜನಜೀವನ ಯಾವುದೇ ರೀತಿಯಲ್ಲಿ ಪರಿಣಾಮ ಉಂಟಾಗಿಲ್ಲ.