ನವದೆಹಲಿ, ಅ 5: ಪಾಕಿಸ್ತಾನ ಡ್ರೋನ್ ಮೂಲಕ ಗಡಿಯಲ್ಲಿ ಶಸ್ತ್ರಾಸ್ತ್ರ ಸಾಗಿಸಿದ್ದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲು ಕೇಂದ್ರ ಗೃಹ ಸಚಿವಾಲಯ ಗಂಭೀರ ಚಿಂತನೆ ನಡೆಸುತ್ತಿದೆ.
ಪಂಜಾಬ್ ನಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸಂವಹನ ಹಾರ್ಡ್ವೇರ್ ಗಳನ್ನು ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿತ್ತು. ಇವುಗಳನ್ನು ಪಾಕಿಸ್ತಾನ, ಡ್ರೋನ್ ಮೂಲಕ ಭಾರತ ಗಡಿಯೊಳಗೆ ಸಾಗಾಣಿಕೆ ಮಾಡಿತ್ತು ಎಂದು ಹೇಳಲಾಗಿದೆ.
ಪಾಕಿಸ್ತಾನದ ಖಲಿಸ್ತಾನ್ ಉಗ್ರ ಸಂಘಟನೆ ಈ ಕೃತ್ಯ ವೆಸಗಿದೆ ಎಂದು ಪ್ರಾಥಮಿಕ ತನಿಖೆಯ ಬಳಿಕ ಪಂಜಾಬ್ ಪೊಲೀಸರು ವರದಿ ನೀಡಿದ್ದಾರೆ. ಹೀಗಾಗಿ ಪಂಜಾಬ್ ಸರಕಾರ ಎನ್ ಐಎ ತನಿಖೆಗೆ ಕೇಂದ್ರ ಸರಕಾರವನ್ನು ಒತ್ತಾಯ ಮಾಡಿತ್ತು.
ಪಂಜಾಬ್ ನಲ್ಲಿ ವಿಧ್ವಂಸಕ ಕೃತ್ಯ ನಡೆಸುವ ದುರುದ್ದೇಶವನ್ನು ಉಗ್ರ ಸಂಘಟನೆ ಬಯಸಿತ್ತು ಎಂದು ಪಂಜಾಬ್ ಪೊಲೀಸರು ವರದಿ ಮಾಡಿದ್ದು ಇದರ ಹಿನ್ನೆಲೆಯಲ್ಲಿ ಚೋಹ್ಲಾ ಸಾಹೀಬ್ ಗ್ರಾಮದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು.