ನವದೆಹಲಿ, ಏ ೩,ಕೊರೊನಾ ಮಹಾಮಾರಿ ಎಂಬ ಅಂಧಕಾರ ತೊಲಗಿಸಲು ಈ ತಿಂಗಳ ೫ ರಂದು ದೇಶದ ಪ್ರತಿ ಮನೆಯಲ್ಲೂ ಮೇಣದ ಬತ್ತಿ, ದೀಪ ಬೆಳಗಿಸುವ ಮೂಲಕ ಸಾಮೂಹಿಕ ಸಂಕಲ್ಪ ತೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ನೀಡಿರುವ ಕರೆಗೆ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಾವು ದೀಪಗಳನ್ನು ಬೆಳಗಿಸುತ್ತೇವೆ. ನೀವು ಜನರ ಆರ್ಥಿಕ ಸಂಕಷ್ಟ ಪರಿಹರಿಸಲು ಕಾಳಜಿ ವಹಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಸೂಚಿಸಿದ್ದಾರೆ.
ಪ್ರೀತಿಯ ನರೇಂದ್ರ ಮೋದಿಜೀ ... ನಾವು ನಿಮ್ಮ ಮಾತನ್ನು ಕೇಳುತ್ತೇವೆ. ಏಪ್ರಿಲ್ ೫ ರಂದು ದೀಪಗಳನ್ನು ಬೆಳಗಿಸುತ್ತೇವೆ. ಇದಕ್ಕೆ ಪ್ರತಿಯಾಗಿ ನೀವು ದಯಮಾಡಿ ನಮ್ಮ ಮಾತುಗಳು, ಸಾಂಕ್ರಾಮಿಕ ರೋಗಗಳ ಅಧ್ಯಯನಕ್ಕೆ ಸಂಬಂಧಿಸಿದ ವಿಜ್ಞಾನಿಗಳು, ರೋಗ ಶಾಸ್ತ್ರಜ್ಞರು, ಆರ್ಥಿಕ ತಜ್ಞರು ನೀಡುವ ಸಲಹೆ ಸ್ವೀಕರಿಸಿ ಎಂದು ಚಿದಂಬರಂ ಟ್ವೀಟ್‌ನಲ್ಲಿ ಸಲಹೆ ನೀಡಿದ್ದಾರೆ.
ಮಾರ್ಚ್ ೨೫ ರಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದ ಹಣಕಾಸು ಪ್ಯಾಕೇಜ್ ಬಡವರು ಹಾಗೂ ದುರ್ಬಲ ವರ್ಗಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವಾಗ, ಬಡವರು ಮತ್ತು ನಿರ್ಗತಿಕರಿಗೆ ’ಹಣಕಾಸು ನೆರವು ಪ್ಯಾಕೇಜ್ ೨’ (ಎಫ್‌ಎಪಿ) ಪ್ರಕಟಿಸಲಿದ್ದಾರೆ ಎಂಬ ಆಶಯ ಹೊಂದಿದ್ದೆ ಎಂದು ಚಿದಂಬರಂ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ಆರ್ಥಿಕ ತೊಂದರೆಗೆ ಸಿಲುಕಿರುವ ದಿನಗೂಲಿಗಳು, ವೇತನ ನಂಬಿ ಬದುಕುವವರು ಹಾಗೂ ವ್ಯಾಪಾರಿಗಳು ಚೇತರಿಸಿಕೊಳ್ಳಲು ನಿಮ್ಮಿಂದ ಏನಾದರೂ ಪ್ರಕಟಣೆಯನ್ನು ನಿರೀಕ್ಷಿಸಿದ್ದೆ. ಆದರೆ, ನಿಮ್ಮ ಭಾಷಣ ಕೇಳಿ ತೀವ್ರ ನಿರಾಶೆಗೊಂಡೆ ”ಎಂದು ಚಿದಂಬರಂ ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.