ಯಮಕನಮರಡಿ : 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಹಾಕಿಕೊಟ್ಟ ಧರ್ಮದ ಮಾರ್ಗದಲ್ಲಿ ನಡೆದು ಬಸವ ತತ್ವಗಳನ್ನು ಪ್ರಚಾರ ಮಾಡಿ ಜನ ಮಾನಸದಲ್ಲಿ ಉಳಿಯುವಂತೆ ಮಾಡುತ್ತಿರುವ ಕಾರ್ಯ ಪ್ರಶಂಸನೀಯವಾದದ್ದು ಎಂದು ಘೋಡಗೇರಿಯ ಶ್ರೀ ಶಿವಾನಂದ ಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಸೋಮವಾರ 13ರಂದು ಅಂಕಲಗುಡಿಕ್ಷೇತ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 4ನೇ ಬಸವ ಜ್ಯೋತಿ ಕಾರ್ಯಕ್ರಮದ ಮತ್ತು ಶ್ರೀ ಜಾಲೆಮ್ಮಾ ದೇವಿಯ ಕುರಿತು ಘೋಡಗೇರಿಯ ಕಲ್ಲಪ್ಪ ಬಾಳಪ್ಪ ಹರಿಜನ ಇವರು ರಚಿಸಿದ ನುಡಿ ನಮನಾಂಜಲಿ ಕೃತಿ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಅಂಕಲಗುಡಿ ಕ್ಷೇತ್ರದಂತ ಚಿಕ್ಕ ಗ್ರಾಮದಲ್ಲಿ ಶರಣರ ಚಿಂತನಾಗೋಷ್ಠಿಯನ್ನು ಏರಿ್ಡಸಿ ಶರಣರ ಸಂದೇಶವನ್ನು ಸಾರುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ಶ್ರೀ ಶಿವಾನಂದ ಮಠದ ಸೇವಾ ಕಾರ್ಯದಲ್ಲಿ ನಿರತರಾಗಿರುವ ಕಲ್ಲಪ್ಪ ಹರಿಜನ ಅವರು ಕುಟುಂಬದ ಧರ್ಮಸೇವೆ ಮಾಡುತ್ತಿದ್ದಾರೆ. ಎಲೆಮರಿ ಕಾಯಿಯಂತೆ ತಮ್ಮನ್ನು ತಾವು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಶ್ರೀ ಜಾಲೆಮ್ಮ ದೇವಿಯ ಕುರಿತು ಕೃತಿ ರಚಿಸಿದ್ದಾರೆ. ಈ ಕೃತಿಯಲ್ಲಿ ಕವಿಯು ಶ್ರೀ ಜಾಲೆಮ್ಮ ದೇವಿಯ ಮಹಿಮೆಯನ್ನು ಪ್ರಚಾರಪಡಿಸಿದ್ದಾರೆ ಎಂದು ಹೇಳಿದರು.
ಯಮಕನಮರಡಿ ಹುಣಸಿಕೊಳ್ಳ ಮಠದ ರಾಚೋಟೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ 12ನೇ ಶತಮಾನದಲ್ಲಿ ಬೇರುಬಿಟ್ಟಿದ್ದ ಜಾತಿ ಧರ್ಮದ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರಿಗೂ ಸಮಾನತೆಯ ಹಕ್ಕು ಕಲ್ಪಿಸಿದ ಶ್ರೀ ಬಸವೇಶ್ವರರು ಸಾಮಾಜಿಕ ಧಾರ್ಮಿಕ ಮಹಾಕ್ರಾಂತಿ ಮಾಡಿದ್ದಾರೆ. ಅವರು ಹಾಕಿಕೊಟ್ಟ ಕಾಯಕ ಮಾರ್ಗವನ್ನು ಪಾಲಿಸಿ ಜೀವನದಲ್ಲಿ ಒಳ್ಳೆಯ ಆಚಾರ ವಿಚಾರ ಅಳವಡಿಸಿಕೊಂಡು ನಡೆದರೆ ಸದೃಢ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ ಯಮಕನಮರಡಿ ಹುಣಸಿಕೊಳ್ಳ ಮಠದ ಉತ್ತರಾಧಿಕಾರಿ ಶ್ರೀ ಸಿದ್ದಬಸವ ದೇವರು ಮಾತನಾಡಿ ಮಾನಸಿಕತೆ, ನೈತಿಕತೆ, ಚಾರಿತ್ರ್ಯ ಕಳೆದು ಹೋದ ಭಕ್ತಿಗಳಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ ಮಕ್ಕಳಿಗೆ ವಚನ ಸಂಸ್ಕೃತಿ ಸಂಸ್ಕಾರ ಕಲಿಸುವುದು ಸದೃಢ ಸಮಾಜ ನಿರ್ಮಾಣ ಮಾಡಬೇಕಾದರೆ ಕೌಟುಂಬಿಕ ಪಾತ್ರ ಮುಖ್ಯವಾಗಿದೆ. ಸಾಮಾಜಿಕ ದ್ವೇಷ ತೊರೆದು ಬಾಳಲು ಪರಸ್ಪರ ಒಳ್ಳೆಯ ಆಚಾರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕಬೇಕೆಂದು ತಿಳಿಸಿದರು. ಬೆಣವಾಡದ ರಾಮಣ್ಣ ಬಂದಾಯಿ ರಾಷ್ಟ್ರೀಯ ಬಸವ ಸೇವಾ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ ಮಾತನಾಡಿದರು.
ಈ ವೇಳೆ ಯಲ್ಲಿ ಮಾವನೂರ ಗ್ರಾ ಪಂ ಅಧ್ಯಕ್ಷ ಶಿವಲಿಂಗ ಹೆಬ್ಬಾಳ ಕಲ್ಲಪ್ಪ ಹರಿಜನ ಇದ್ದರು, ಬಸವರಾಜ ಮನಗುತ್ತಿ ಸ್ವಾಗತಿಸಿದರು, ಶ್ರೀಶೈಲ ಮನಗುತಿ ನಿರೂಪಿಸಿದರು, ಬಸವರಾಜ ದೇವರಮನಿ ವಂದಿಸಿದರು, ನಿಂಗಪ್ಪ ಶಿ ದೇವರಮನಿ ದಂಪತಿಗಳು ಮಹಾಪ್ರಸಾದ ಸೇವೆ ಸಲ್ಲಿಸಿದರು, ಶ್ರೀ ಜಗಜ್ಯೋತಿ ಬಸವೇಶ್ವರ ಅಕ್ಕನ ಬಳಗ ಮಹಿಳಾ ಸಂಘ ಶರಣ ಶರಣಿಯರು ಗ್ರಾಮದ ಗುರು ಹಿರಿಯರು ಇದ್ದರು, ಗೋಪಾಲ ಪಾಟೀಲ, ಅಸುಂಡಿಯ ಹನುಮಂತ ಪಾದಗಟ್ಟಿ, ಬಡಕುಂದ್ರಿಯ ಕಾಳಪ್ಪ ಬಡಿಗೇರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.