ಬೆಂಗಳೂರು,ಜ 29: ಶೀಘ್ರವೇ ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ನಾವು ಕೂಡ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದೇವೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಸದಾಶಿವ ನಗರದ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶೀಘ್ರವೇ ಕೆಪಿಸಿಸಿ ಅಧ್ಯಕ್ಷರನ್ನ ನೇಮಕ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದೇವೆ.ಹೈಕಮಾಂಡ್ ನಾಯಕರು ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಕಾರ್ಯನಿರತರಾಗಿದ್ದಾರೆ.ಹೀಗಾಗಿ ಈ ಸ್ಥಾನದ ಕಡೆ ಸ್ವಲ್ಪ ಗಮನ ಕಡಿಮೆಯಾಗಿದೆ.ಮತ್ತೊಂದು ಬಾರಿ ಹೈಕಮಾಂಡ್ ಗೆ ಮನವಿ ಮಾಡುತ್ತೇವೆ ಎಂದರು.
ರಾಜ್ಯದಲ್ಲಿನ ಬಿಜೆಪಿ ಸರ್ಕಾರ ನಿಷ್ಕ್ರಿಯವಾಗಿದೆ.ಫೆಬ್ರವರಿ 17 ರಿಂದ ಆರಂಭವಾ ಗಲಿರುವ ಜಂಟಿ ಅಧಿವೇಶನ ಬೇರೆ ನಡೆಯ ಲಿದೆ.ರಾಜ್ಯದಲ್ಲಿ ಆಡಳಿತ ಯಂತ್ರ ವೂ ಕುಸಿದಿದೆ.ಯಾವುದೇ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ನಮ್ಮ ಸರ್ಕಾರ ಹಿಂದೆ ಅನುದಾನ ಬಿಡುಗಡೆ ಮಾಡಿತ್ತು.ಅದನ್ನು ಸಹ ಸರ್ಕಾರ ತಡೆಹಿಡಿದಿದೆ.ಆ ಅನುದಾನವನ್ನ ವಾಪಸ್ ಪಡೆಯುತ್ತಿದೆ.ಇದೆಲ್ಲದರ ವಿರುದ್ಧ ನಾವು ಧ್ವನಿ ಎತ್ತಬೇಕಿದೆ.ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿದರೆ ಒಳ್ಳೆಯದು ಎಂದು ಅವರು ತಿಳಿಸಿದರು.
ನಮ್ಮಲ್ಲಿ ಕೆಲ ಭಿನ್ನಾಭಿಪ್ರಾಯಗಳು ಇರಬಹುದು. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಹೋಗಬೇಕು.ಈ ಹಿಂದೆ ನಮ್ಮ ಮನೆಯಲ್ಲೇ ಸಭೆಯನ್ನ ಮಾಡಿದ್ದೆ,ಆಗಲೂ ಭಿನ್ನಾಬಿಪ್ರಾಯ ಬಿಟ್ಟು ಹೋಗೋಣ ಎಂದಿದ್ದೆ.ಎಲ್ಲರೂ ಅದಕ್ಕೆ ಒಪ್ಪಿಕೊಂಡಿದ್ದರು. ಆದರು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆಂದು ಪರೋಕ್ಷವಾಗಿ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರು.
ಯಾವ ಸ್ಥಾನಕ್ಕೂ ಯಾರದು ಒತ್ತಡವಿಲ್ಲ.ಹೈಕಮಾಂಡ್ ಬೇಗ ಪಟ್ಟಿ ಬಿಡುಗಡೆ ಮಾಡಬೇಕು.ಕೆಲವರು ಹೇಳಿಕೆ ಕೊಟ್ಟು ನಾನು ಅರ್ಹ ಇದ್ದೇನೆ ಎಂದು ಹೇಳುತ್ತಾರೆ.ಅದೆಲ್ಲ ಪಕ್ಷದಲ್ಲಿ ಸ್ವಾಭಾವಿಕ. ಇನ್ನು ಹೈಕಮಾಂಡ್ ಯಾರು ಅರ್ಹರಿದ್ದಾರೆ, ಯಾರು ಅರ್ಹರಿಲ್ಲ ಎಂದು ನಿರ್ಧಾರಿಸಿ ಪಟ್ಟಿಯನ್ನ ಬಿಡುಗಡೆ ಮಾಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.