ಜಿನಿವಾ, ಏ ೯, ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಾಮೂಹಿಕ ಪ್ರಯತ್ನ ನಡೆಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರೆಯೇಸಸ್ ಕರೆ ನೀಡಿದ್ದಾರೆ. ಪ್ರಪಂಚದೆಲ್ಲೆಡೆ ಆರೋಗ್ಯ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಅಮೆರಿಕಾ ಹಾಗೂ ಚೈನಾ ದೇಶಗಳು ನೈಜ ನಾಯಕತ್ವ ಗುಣಗಳನ್ನು ಪ್ರದರ್ಶಿಸಬೇಕೆಂದು ಅವರು ಕೋರಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಮೇಲಾಟಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಚೀನಾದ ವುಹಾನ್‌ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್‌ನ ಕ್ರಮೇಣ ಜಗತ್ತಿನೆಲ್ಲೆಡೆ ಹರಡಿ ಪ್ರಪಂಚವನ್ನು ತಲ್ಲಣಗೊಳಿಸುತ್ತಿದೆ. ಪ್ರಮುಖವಾಗಿ ಅಗ್ರ ರಾಷ್ಟ್ರ ಅಮೆರಿಕಾ ಕೊರೊನಾ ಮಹಾಮಾರಿಗೆ ತತ್ತರಿಸಿದೆ. ದಿನದಿನಕ್ಕೂ ಕೊರೊನಾ ಸೋಂಕಿತ ಪ್ರಕರಣಗಳು ಹಾಗೂ ಸಾವುಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ರಿಪಬ್ಲಿಕನ್ ಪಕ್ಷದ ಸದಸ್ಯರು ಚೀನಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೀನಾ, ವೈರಸ್ ಕುರಿತ ನಿಜಾಂಶಗಳನ್ನು ಜಗತ್ತಿಗೆ ಮರೆಮಾಚಿದೆ.. ಇಂತಹ ಚೀನಾ ದೇಶವನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಬೆಂಬಲ ನೀಡುತ್ತಿದೆ ಎಂದು ದೂರಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಗೆ ಹಣಕಾಸು ನೆರವು ನೀಡುವಲ್ಲಿ ಅಮೆರಿಕಾ ಮೇಲುಗೈ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದೇ ಧೋರಣೆ ಮುಂದುವರಿಸಿದರೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ವೈರಸ್ ಕುರಿತು ಜಗತ್ತನ್ನು ಜಾಗೃತಗೊಳಿಸಲು ಡಬ್ಲ್ಯುಎಚ್‌ಒ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ. ಡಬ್ಲ್ಯುಎಚ್‌ಒ ನಿರ್ವಹಣೆಗೆ ಚೀನಾದ ಕೊಡುಗೆ ಮಹತ್ವವೇನಲ್ಲ ಆದರೂ ವಿಶ್ವ ಆರೋಗ್ಯ ಸಂಸ್ಥೆ ಅದರ ಪರವಾಗಿ ನಿಲ್ಲುತ್ತಿದೆ. ಹಾಗಾಗಿ ಹಣಕಾಸು ನೆರವಿನ ಬಗ್ಗೆ ಮರುಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಟ್ರಂಪ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಟೆಡ್ರೋಸ್, ಸಾಂಕ್ರಾಮಿಕ ರೋಗದ ವಿರುದ್ಧ ಸಮರದಲ್ಲಿ ನೆರವಾಗಲು ವಿಶ್ವ ಆರೋಗ್ಯ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಟೆಡ್ರೊಸ್ ಹೇಳಿದ್ದಾರೆ. ತಮಗೆ ಅಮೆರಿಕಾ ಹಣಕಾಸು ನಡೆವು ನೀಡುವುದನ್ನು ನಿಲ್ಲಿಸುತ್ತದೆ ಎಂದು ನಾವು ಭಾವಿಸುವುದಿಲ್ಲ. ತನ್ನ ಸಂಪ್ರದಾಯವನ್ನು ಅಮೆರಿಕಾ ಮುಂದುವರಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ೨೦೧೯ ವರ್ಷದಲ್ಲಿ ಅಮೆರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ೪೦೦ ಮಿಲಿಯನ್ ಡಾಲರ್ ಆರ್ಥಿಕ ಸಹಾಯ ನೀಡಿದ್ದು, ಡಬ್ಲ್ಯುಎಚ್‌ಹೆಚ್ ವೆಬ್‌ಸೈಟ್‌ನಲ್ಲಿ ತನ್ನ ಬಜೆಟ್‌ನ ಶೇ. ೧೫ ಹಣವನ್ನು ಅಮೆರಿಕಾ ಒದಗಿಸಿದೆ ಎಂದು ಹೇಳಿದೆ.