ಸಿಂಗಾಪುರ, ಜುಲೈ 10: ಸಿಂಗಾಪುರದಲ್ಲಿ ಸಾರ್ವತ್ರಿಕ ಚುನಾವಣೆಗೆ ಶುಕ್ರವಾರ ಮತದಾನ ಆರಂಭವಾಗಿದ್ದು, ಸ್ವಾತಂತ್ರ್ಯಾನಂತರದ 13ನೇ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.
ಆಡಳಿತಾರೂಢ ಪೀಪಲ್ಸ್ ಆಕ್ಷನ್ ಪಾರ್ಟಿ (ಪಿಎಪಿ) ಎಲ್ಲಾ 93 ಸ್ಥಾನಗಳಿಗೆ ಸ್ಪರ್ಧಿಸಿದೆ.
ಮತದಾನ ಸ್ಥಳೀಯ ಕಾಲಮಾನ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು ರಾತ್ರಿ 8 ಗಂಟೆ ವರೆಗೆ ನಡೆಯಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಈ ಚುನಾವಣೆಗಳಲ್ಲಿ ಸುಮಾರು 26 ಲಕ್ಷ 50 ಸಾವಿರ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
93 ಸ್ಥಾನಗಳಿಗೆ 11 ರಾಜಕೀಯ ಪಕ್ಷಗಳ ಒಟ್ಟು 191 ಅಭ್ಯರ್ಥಿಗಳು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಈ ಮಧ್ಯೆ, ಗೊತ್ತುಪಡಿಸಿದ ಸಮಯದೊಳಗೆ ಮತ ಚಲಾಯಿಸುವಂತೆ ಚುನಾವಣಾ ಇಲಾಖೆ ಮತದಾರರಿಗೆ ಸೂಚಿಸಿದೆ.
ಸದ್ಯದ ಕೊವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಂಡ-ತಂಡವಾಗಿ ಮತದಾನ ಮಾಡುವ ವಿಧಾನವನ್ನು ಚುನಾವಣಾ ಇಲಾಖೆ ಘೋಷಿಸಿದೆ.
ತೀವ್ರ ಉಸಿರಾಟ ತೊಂದರೆಯಿಂದ ಮನೆಯಲ್ಲೇ ಇರುವಂತೆ ಸೂಚಿಸಲಾಗಿರುವ ಮತದಾರರು ರಾತ್ರಿ 7 ಗಂಟೆಯಿಂದ 8 ಗಂಟೆವರೆಗೆ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ,ಕ್ಯಾರೆಂಟೈನ್ ನಲ್ಲಿರುವ ಕೊವಿಡ್-19 ರೋಗಿಗಳಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿಲ್ಲ.
ಅಲ್ಲದೆ, ಸಾರ್ವತ್ರಿಕ ಚುನಾವಣೆಗೆ 6,570 ಸಾಗರೋತ್ತರ ಮತದಾರರು ಅರ್ಹರಾಗಿದ್ದಾರೆ ಎಂದು ಚುನಾವಣಾ ಇಲಾಖೆ ತಿಳಿಸಿದೆ. ಇವರಿಗಾಗಿ ಬೀಜಿಂಗ್, ಕ್ಯಾನ್‌ಬೆರ್ರಾ, ದುಬೈ, ಹಾಂಗ್ ಕಾಂಗ್, ಲಂಡನ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ, ಶಾಂಘೈ, ಟೋಕಿಯೊ ಮತ್ತು ವಾಷಿಂಗ್ಟನ್ ಡಿಸಿಗಳಲ್ಲಿ 10 ಸಾಗರೋತ್ತರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಕೆಲ ವಿದೇಶಿ ಮತದಾರರು ಶುಕ್ರವಾರದ ಮೊದಲೇ ಮತ ಚಲಾಯಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಿಎಪಿ,ಎಲ್ಲ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಏಕೈಕ ಪಕ್ಷ ಆಗಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಪಿಎಪಿ ತೀವ್ರ ಸವಾಲೊಡ್ಡಿದೆ. ಸತತ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಈ ರೀತಿಯ ಸ್ಪರ್ಧೆ ಏರ್ಪಟ್ಟಿದೆ.
2015 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಿಎಪಿ ಶೇ 69.9 ಮತಗಳನ್ನು ಗಳಿಸಿ ಸಂಸತ್ ನ ಒಟ್ಟು 89 ಸ್ಥಾನಗಳ ಪೈಕಿ 83 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.