ಕೆಲಗೇರಿ ಕೆರೆ ಭೇಟಿ; ಅಭಿವೃದ್ಧಿ ಪರೀಶೀಲನೆ

Visit Kelageri Lake; Development Review

ಉಪಲೋಕಾಯುಕ್ತ ನ್ಯಾಯಮೂರ್ತಿಗಳು ನೀಡಿದ ನಿರ್ದೇಶನಗಳನ್ನು ಪಾಲಿಸಿ, ಅನುಪಾಲನಾ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ 

ಧಾರವಾಡ ಡಿಸೆಂಬರ.19: ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರು ಕಳೆದ ನವೆಂಬರ್ 23, 2024 ರಂದು ಸಾರ್ವಜನಿಕರ ದೂರಗಳ ಹಿನ್ನಲೆಯಲ್ಲಿ ಧಾರವಾಡ ನಗರದ ಕೆಲಗೇರಿ ಕೆರೆಗೆ ಭೇಟಿ ನೀಡಿ, ಸ್ವಚ್ಚತೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು  ಪರೀಶೀಲಿಸಿದಾಗ ಕೆರೆಯ ಸುತ್ತಮುತ್ತ ಬೆಳೆದಿದ್ದ ಕಳೆ ಮತ್ತು ಕಸವನ್ನು 20 ದಿವಸದ ಒಳಗಾಗಿ ಮಹಾನಗರ ಪಾಲಿಕೆಯಿಂದ ಸ್ವಚ್ಛಗೊಳಿಸಬೇಕೆಂದು ಮತ್ತು ಕೃಷಿ ವಿಶ್ವವಿದ್ಯಾಲಯದವರು ಕೆರೆಯಲ್ಲಿನ ಜಲ ಕಳೆ (ವಿಡ್) ತೆಗೆಯಬೇಕೆಂದು ನಿರ್ದೇಶಿಸಿದ್ದರು. ಈ ನಿರ್ದೇಶನವನ್ನು ಪಾಲಿಸಿದ ಕುರಿತು ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪರೀಶೀಲಿಸಿ ತಕ್ಷಣ ವರದಿ ನೀಡಬೇಕೆಂದು ನಿರ್ದೇಶಿಸಿದ್ದಾರೆ.  

ಈ ಹಿನ್ನಲೆಯಲ್ಲಿ ಇಂದು (ಡಿ.19) ಬೆಳಿಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎಫ್‌.ದೊಡ್ಡಮನಿ ಅವರು ಕೆಲಗೇರಿ ಕೆರೆಗೆ ಹಿರಿಯ ನಾಗರಿಕರು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರೀಶೀಲಿಸಿದರು.  

ಪರೀಶೀಲನೆ ಸಂದರ್ಭದಲ್ಲಿ ನವೆಂಬರ್ 23, 2024ರಂದು ವಿಕ್ಷೀಸಿದ ಕಸ, ಕುರುಚಲ ಗಿಡಗಳನ್ನು ಸ್ವಚ್ಛ ಮಾಡಿರುವುದು ಕಂಡು ಬಂದಿದ್ದು, ಆದರೆ ಅಲ್ಲಲ್ಲಿ ಪ್ಲಾಸ್ಟಿಕ್ ಲೋಟಾ, ಬಾಟಲಿ, ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಎಸೆದಿರುವುದನ್ನು ಗಮನಿಸಲಾಯಿತು. ಕೃಷಿ ವಿಶ್ವವಿದ್ಯಾಲಯದವರು ತೆಗೆಯಬೇಕಿದ್ದ ಜಲಕಳೆ (ವಿಡ್) ಕೆರೆಯಲ್ಲಿ ಹಾಗೆ ಇರುವುದು ಕಂಡು ಬಂದಿತ್ತು. ಕೃಷಿ ವಿಶ್ವವಿದ್ಯಾಲಯದವರು ತಕ್ಷಣವೇ ಉಪಲೋಕಾಯುಕ್ತರು ನೀಡಿದ್ದ ನಿರ್ದೇಶನ ಪಾಲಿಸಿ ಅನುಪಾಲನಾ ವರದಿ ನೀಡಲು ಅವರು ಸೂಚಿಸಿದರು.  

ಕೆರೆಯ ದಂಡೆ ಹಾಗೂ ವಾಯು ವಿಹಾರದ (ಪಾಥವೇ) ಮಾರ್ಗದಲ್ಲಿ, ಮಧ್ಯಪಾನ ಮಾಡಿ ಎಸೆದ ಬಾಟಲಿಗಳು, ಪ್ಲಾಸ್ಟಿಕ್ ಗ್ಲಾಸ್‌ಗಳು ಹಾಗೂ ಇತರೆ ತ್ಯಾಜ್ಯ ವಸ್ತುಗಳು ಬಿದ್ದಿರುವುದು ಕಂಡು ಬಂದಿತ್ತು. ಇಂತಹ ಚಟುವಟಿಕೆಗಳು ನಡೆಯದಂತೆ ಪ್ರತಿದಿನ ನಿರಂತರವಾಗಿ ಗಸ್ತು ತಿರುಗಲು ಆರಕ್ಷಕರನ್ನು ನೇಮಿಸುವಂತೆ ಪೊಲೀಸ್ ಆಯುಕ್ತರಿಗೆ ಹಿರಿಯ ಸಿವಿಲ್ ನ್ಯಾಯಾಧೀಶರು ತಿಳಿಸಿದರು.  

ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಧಾರವಾಡ ನಗರದ ಐತಿಹಾಸಿಕವಾದ ಕೆಲಗೇರಿ ಕೆರೆಯನ್ನು ಸಂರಕ್ಷಿಸಿ, ಸುಂದರಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಭೇಟಿ ಸಂದರ್ಭದಲ್ಲಿ ನಿರ್ದೇಶನ ನೀಡಿದ್ದರು. ಆದರೆ ಇಂದಿನ ಪರೀಶೀಲನೆ ಸಂದರ್ಭದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿಗಳು ನೀಡಿದ್ದ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದಿರುವುದು ಕಂಡು ಬಂದಿದೆ. ಆದಷ್ಟು ಬೇಗ ಅವರ ನಿರ್ದೇಶನಗಳನ್ನು ಪಾಲಿಸಿ, ಕೆರೆ ಸ್ವಚ್ಚಗೊಳಿಸಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು, ಮಹಾನಗರ ಪೊಲೀಸ್ ಆಯುಕ್ತರು ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಅನುಪಾಲನಾ ವರದಿಯನ್ನು ಸಲ್ಲಿಸಬೇಕೆಂದು ಅವರು ತಿಳಿಸಿದರು.  

ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಎಸ್‌.ಮೀತ್ತಲಕೋಡ,  ಮಹಾನಗರ ಪಾಲಿಕೆಯ ಕಿರಿಯ ಇಂಜೀನೀಯರ ವಿರೇಶ ಕುಂಬಾರ, ಪಾಲಿಕೆಯ ಸಿಬ್ಬಂದಿಗಳು ಮತ್ತು ಹಿರಿಯ ನಾಗರಿಕರು ಉಪಸ್ಥಿತರಿದ್ದರು.