ಶಿವಯೋಗೀಶ್ವರ ಜಾತ್ರಾ ಅಂಗವಾಗಿ ಸರ್ವಧರ್ಮ ಸಾಮೂಹಿಕ ವಿವಾಹ

Interfaith mass wedding as part of Shivayogeeshwara festival

ಯರಗಟ್ಟಿ, 19:  ನವ ದಂಪತಿ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದು ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು. ಸಮೀಪದ ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ಬುದವಾರ ಶಿವಯೋಗೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು ವರರಿಗೆ ಆಶೀರ್ವದಿಸಿ ಆಶಿರ್ವಚನ ನೀಡಿದ ಅವರು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಸಂಸ್ಕಾರವು ಅವರ ಬಾಳಿನಲ್ಲಿ ಮಹತ್ತರ ಪಾತ್ರವಹಿಸುತ್ತವೆ.  

 ಪ್ರತಿಯೊಬ್ಬರಿಗೂ ಸಂಸ್ಕಾರ ಬಹಳ ಮುಖ್ಯವಾಗಿರುತ್ತದೆ. ಇಂದು ಮದುವೆಯಾಗುತ್ತಿರುವ ಎಲ್ಲ ನವದಂಪತಿಗಳಿಗೂ ಸಹ ಸಂಸ್ಕಾರವಂತರಾಗಿ ಜೀವನ ನಡೆಸಬೇಕು ಎಂದರು.ಮುರಗೋಡ ವಲಯ ಅಂಗನವಾಡಿ ಮೆಲ್ವೀಚಾರಕಿ ರಾಜೇಶ್ವರಿ ತೆರಲಿ ಮಾತನಾಡಿ, ಗಂಡಾಗಲಿ, ಹೆಣ್ಣಾಗಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು 18 ವರ್ಷ ನಂತರವೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕು ಎಂದರು.ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್‌.ಎಸ್‌.ಮುಗಳಿ ಮಾತನಾಡಿ, ಇಂದಿನ ದುಬಾರಿ ದಿನ ಮಾನಗಳಲ್ಲಿ ಬಡವರಿಗೆ, ಕಾರ್ಮಿಕರಿಗೆ ಮದುವೆಯ ಸಾಲದ ಹೊರೆಯನ್ನು ಕಡಿಮೆ ಮಾಡುವ ಜತೆಗೆ ಮದುವೆ ಹೆಸರಿನಲ್ಲಿ ದುಂದುವೆಚ್ಚಕ್ಕೆ ಕಡಿವಾನ ಹಾಕುವದನ್ನು ನಿಲ್ಲಿಸಿದ್ದಾರೆ. ಇಂತಹ ವಿಹಾಹಗಳಿಗೆ ಎಲ್ಲರೂ ತನು, ಮನ, ಧನದಿಂದ ಸಹಾಯ, ಸಹಕಾರ ನೀಡುವ ಮೂಲಕ ಬೆಂಬಲಿಸಬೇಕು ಎಂದರು.

ಮುನವಳ್ಳಿ ಸೋಮಶೆಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು, ವೇದಮೂರ್ತಿ ಚಂದ್ರಯ್ಯ ಹಿರೇಮಠ, ಬಸಲಿಂಗಯ್ಯ ಹಿರೇಮಠ, ವಿಶಾಲ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಡ್ಡಿ, ನಾಗಪ್ಪ ಚೌಡಪ್ಪನವರ, ಅನೀಲ ವಂಟಮುರಿ, ರಾಜು ಗುರನಗೌಡ್ರ, ರಾಯಪ್ಪ ರಾಯಣ್ಣವರ, ಸಿದ್ದು ಕಡಕೊಳ, ಸೋಮನಿಂಗಪ್ಪ ಚವಡಪ್ಪನವರ, ವಿಠ್ಠಲ ಗುರಣಗೌಡ್ರ, ನಾಗಪ್ಪ ಚವಡಪ್ಪನವರ, ಅಜ್ಜಪ್ಪ ಚಡಪ್ಪನವರ, ಕಿರಣ ಹಿರೇಮಠ, ನಿಂಗನಗೌಡ ಸಣ್ಣಗೌಡ್ರ, ಈರ​‍್ಪ ಬೆನಕಟ್ಟಿ ಸೇರಿದಂತೆ ಇತರರು ಇದ್ದರು.