ಮುಂಬೈ, ಜ 10 , ಆಸ್ಟ್ರೇಲಿಯಾ ಪರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡುವ ಹಾದಿಯಲ್ಲಿರುವ ಮಾರ್ನಸ್ ಲಾಬುಶೇನ್ ಅವರು ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್ ಅವರಂತೆಯೇ ಎಲ್ಲ ಮಾದರಿಯಲ್ಲಿ ಅತ್ಯುತ್ತಮ ಆಟಗಾರನಾಗುವ ಆಶಯ ವ್ಯಕ್ತಪಡಿಸಿದ್ದಾರೆ."ಸ್ಟೀವನ್ ಸ್ಮಿತ್, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಹಾಗೂ ಜೋ ರೂಟ್ ಅವರನ್ನು ನಾವು ನೋಡಬಹುದು, ಅವರು ದೀರ್ಘ ಕಾಲ ತಂಡದಲ್ಲಿ ಆಡುತ್ತಿದ್ದಾರೆ. ಕಳೆದ ಐದು ಅಥವಾ ಆರು ವರ್ಷಗಳಿಂದ ಎಲ್ಲ ಮೂರೂ ಮಾದರಿಯಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ ಸ್ಪೂರ್ತಿ ಪಡೆಯುತ್ತೇನೆಂದು," ಲಾಬುಶೇನ್ ಇಎಸ್‌ಪಿಎನ್ ಕ್ರಿಕ್ ಇನ್ಫೋ ಗೆ ತಿಳಿಸಿದ್ದಾರೆ."ನಾನು ವೈಯಕ್ತಿಕವಾಗಿ ಕಲಿಯುವುದು ತುಂಬಾ ಇದೆ. ಈ ಬೇಸಿಗೆಯಲ್ಲಿ ನಾನು ಸ್ವಲ್ಪ ಯಶಸ್ವಿ ಕಂಡಿದ್ದೇನೆ. ಆದರೆ, ಅದೇ ಲಯವನ್ನು ಮುಂದೆಯೂ ಉಳಿಸಿಕೊಳ್ಳುವುದು ನಿಜಕ್ಕೂ ಸವಾಲಾಗಿದೆ. ಸ್ಥಿರ ಪ್ರದರ್ಶನವನ್ನು ಉಳಿಸಿಕೊಂಡು ಸಾಗುವುದು ನನ್ನ ಮುಂದಿನ ಗುರಿ," ಎಂದು ಹೇಳಿದ್ದಾರೆ.ಪ್ರಸಕ್ತ ಬೇಸಿಗೆಯಲ್ಲಿ 25ರ ಪ್ರಾಯದ ಮಾರ್ನಸ್ ಲಾಬುಶೇನ್ ಅವರು ಐದು ಪಂದ್ಯಗಳಿಂದ 896 ರನ್ ಗಳಿಸಿದ್ದಾರೆ. ಇದರ ಫಲವಾಗಿ ಇತ್ತೀಚಿಗೆ ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ." ಬೇಸಿಗೆಯಲ್ಲಿ ತೋರಿರುವ ಪ್ರದರ್ಶನವನ್ನು ಮುಂದುವರಿಸುವುದು ನಿಜಕ್ಕೂ ಕಠಿಣ ಸವಾಲು. ಏಕದಿನ ಕ್ರಿಕೆಟ್ ನಲ್ಲಿ ಅವಕಾಶ ಪಡೆದಿರುವ ನಾನು ನನ್ನ ಆಟದ ವಿಭಿನ್ನ ಸ್ವರೂಪವನ್ನು ಪ್ರದರ್ಶನ ತೋರಬೇಕಾಗಿದೆ. ಸೀಮಿತ ಓವರ್ ಗಳ ಸವಾಲು ನಿಜಕ್ಕೂ ಉತ್ಸುಕತೆ ಕೆರಳಿಸಿದೆ," ಎಂದರು." ಭಾರತ ವಿರುದ್ಧ ಅವರದೇ ನೆಲದಲ್ಲಿ ಸ್ಪಿನ್ ದೊಡ್ಡ ಸವಾಲಾಗಿರುತ್ತದೆ. ಸ್ಪಿನ್ ಬೌಲಿಂಗ್ ಗೆ ಆಡುವುದು ನನಗೆ ಪಾಲಿಗೆ ಉತ್ತಮವಾಗಿದೆ. ಸ್ಪಿನ್ ಗೆ ಆಡುವ ನನ್ನ ಯೋಜನೆ ಮೇಲೆ ನನಗೆ ಹೆಚ್ಚಿನ ನಂಬಿಕೆ ಇದೆ," ಎಂದು ಲಾಬುಶೇನ್ ಹೇಳಿದ್ದಾರೆ.ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಜ. 14, 17 ಮತ್ತು 19 ರಂದು ಕ್ರಮವಾಗಿ ಮುಂಬೈ, ರಾಜ್‌ಕೋಟ್ ಹಾಗೂ ಬೆಂಗಳೂರಿನಲ್ಲಿ ಜರುಗಲಿವೆ.