ನವದೆಹಲಿ, ಮೇ 18,ತಮ್ಮ ಜೀನವನ್ನು ಆಧರಿಸಿದ ಸಿನಿಮಾದಲ್ಲಿ ಖುದ್ದಾಗಿ ನಟಿಸಲು ರೆಡಿ ಎಂದಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಇದಕ್ಕಾಗಿ ಷರತ್ತೊಂದನ್ನು ಹಾಕಿದ್ದಾರೆ. ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಜೊತೆಗೆ ಇನ್‌ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಮಾತನಾಡಿದ ವಿರಾಟ್, ತಮ್ಮ ಬಯೋಪಿಕ್‌ನ ಪತ್ನಿ ಅನುಷ್ಕಾ ಶರ್ಮಾ ಕೂಡ ನಟಿಸಬೇಕು ಎಂಬ ಷರತ್ತನ್ನು ಮುಂದಿಟ್ಟಿದ್ದಾರೆ."ಅನುಷ್ಕಾ ಶರ್ಮಾ ಜೊತೆಗೆ ಇದ್ದರೆ ಖಂಡಿತವಾಗಿ ನನ್ನ ಜೀವನಾಧಾರಿತ ಸಿನಿಮಾದಲ್ಲಿ ನಾನೇ ನಟಿಸುತ್ತೇನೆ," ಎಂದು ಹೇಳಿರುವ ಕೊಹ್ಲಿ, ಇದೇ ವೇಳೆ ತಮ್ಮ ವ್ಯಕ್ತಿತ್ವವನ್ನು ರೂಪಿಸಲು ಪತ್ನಿ ಹಾಗೂ ಬಾಲಿವುಡ್‌ನ ಬಹುಬೇಡಿಕೆಯ ನಟಿ ಅನುಷ್ಕಾ ಬಹಳ ನೆರವಾಗಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ.
"ನಾನು ಸದಾ ಇದೇ ರೀತಿಯ ವ್ಯಕ್ತಿ ಆಗಿರಲಿಲ್ಲ. ಜೀವನದಲ್ಲಿ ಪ್ರತಿಯೊಬ್ಬರು ಕೂಡ ನಮಗೆ ಸರಿ ಹೊಂದುವ ರೀತಿಯಲ್ಲಿ ಇರುತ್ತಾರೆ. ಆದರೆ ಒಬ್ಬ ವ್ಯಕ್ತಿ ನಿಮ್ಮೊಳಗಿನ ಶ್ರೇಷ್ಠತೆಯನ್ನು ತರುವ ಪ್ರಯತ್ನ ಮಾಡುತ್ತಾರೆ. ಅನುಷ್ಕಾ ಭೇಟಿಯಾದ ಬಳಿಕ ಪ್ರತಿಯೊಂದು ವಿಚಾರವೂ ನನ್ನೊಬ್ಬನ ಬಗ್ಗೆ ಮಾತ್ರವಲ್ಲ ಎಂಬ ಸತ್ಯ ನನಗೆ ತಿಳಿಯಿತು. ಜೀವನದಲ್ಲಿ ಮತ್ತೊಂದು ವ್ಯಕ್ತಿಯ ಕಡೆಗೆ ಕಾಳಜಿ ವಹಿಸಿ ಅದರಂತೆ ಬದುಕಬೇಕಾಗುತ್ತದೆ," ಎಂದು ಲೈವ್ ಚಾಟ್‌ನಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ."ನೀವು ಯಾರು ಎಂಬುದು ನಿಮಗೆ ನಿಜವಾಗಿಯೂ ಅರ್ಥವಾದ ಬಳಿಕ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಾನು ಯಾವ ಸ್ಥಿತಿಯಲ್ಲಿ ಇದ್ದೇನೆ ಎಂಬುದನ್ನು ನನ್ನ ಅರಿವಿಗೆ ತಂದಿದ್ದು ಅನುಷ್ಕಾ. ನನ್ನ ಸುತ್ತ ಮುತ್ತಲಿನ ಸ್ಥಿತಿಯನ್ನು ಬದಲಾಯಿಸಿಕೊಂಡು ಉತ್ತಮ ವ್ಯಕ್ತಿಯಾಗಿ ಹೊರಬರಲು ನೆರವಾದರು. ಈಗ ಯಾರಾದರು ನನ್ನ ಬಳಿ ಸಹಾಯ ಕೇಳಿ ಬಂದರೆ, ನನ್ನಿಂದ ಆ ಸಹಾಯ ಮಾಡುವ ಸಾಮರ್ಥ್ಯವಿದ್ದರೆ ಖಂಡಿತವಾಗಿಯೂ ಮಾಡುತ್ತೇನೆ," ಎಂದು ಹೇಳಿದ್ದಾರೆ.31 ವರ್ಷದ ಬಲಗೈ ಬ್ಯಾಟ್ಸ್‌ಮನ್ ಅನುಷ್ಕಾ ಭೇಟಿಗೂ ಮೊದಲು ಮೊದಲು ಕೇವಲ ತಮ್ಮ ಒಳಿತು ಮತ್ತು ತಮ್ಮ ಸುಖ ವಲಯದ ಕಡೆಗಷ್ಟೇ ಗಮನ ನೀಡುತ್ತಿದ್ದುದ್ದಾಗಿ ಇದೇ ವೇಳೆ ಒಪ್ಪಿಕೊಂಡಿದ್ದಾರೆ.